National Highways: ರಾಜ್ಯದಲ್ಲಿ ₹13,458 ಕೋಟಿ ವೆಚ್ಚದ 18 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ-ಯಾವುವು?
ಬೆಳಗಾವಿ, ಫೆಬ್ರವರಿ, 16: ಕರ್ನಾಟಕದ ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ 13,458 ರೂಪಾಯಿಗಳ ಯೋಜನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ಮಾಡಿದರು. ಹಾಗಾದರೆ ಆ ಯೋಜನೆಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವಂತೆ ಗ್ರೀನ್ ಕಾರಿಡಾರ್ ನಿರ್ಮಿಸುವುದು ನಮ್ಮ ಆದ್ಯತೆ. ಇಂತಹ ಹೆದ್ದಾರಿಗಳು ಪ್ರಯಾಣದ ಸಮಯ, ವೆಚ್ಚ ಕಡಿಮೆ ಆಗುವುದಲ್ಲದೇ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ಧಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

* ಬೆಳಗಾವಿಯಲ್ಲಿ 7,290 ಕೋಟಿ ಯೋಜನೆಗಳ ಉದ್ಘಾಟನೆ
* ಶಿವಮೊಗ್ಗದಲ್ಲಿ 6,168 ಕೋಟಿ ರೂಪಾಗಳ ಯೋಜನೆಗಳ ಉದ್ಘಾಟನೆ
ಬೆಳಗಾವಿಯಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆ ಹಾಗೂ 18 ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಅತ್ಯಂತ ಸಂಪದ್ಭರಿತವಾಗಿದೆ. ಆದ್ದರುಂದ ಕೇಂದ್ರವು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚು ಆದ್ಯತೆ ನೀಡಿದೆ. ರಾಜ್ಯದಲ್ಲಿ 8,200 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯಿದೆ. ಇದನ್ನು 3 ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಶೇಕಡಾ 90ರಷ್ಟು ಕಾಮಗಾರಿಗಳು ಮುಗಿದಿವೆ ಎಂದು ಹೇಳಿದರು.
ಇನ್ನು ಬೆಳಗಾವಿ-ಹುನಗುಂದ-ರಾಯಚೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು, ಅಂದಾಜು ವೆಚ್ಚವೇ 9,000 ಕೋಟಿ ರೂಪಾಯಿ ಆಗಿದೆ. ಈ ಕಾಮಗಾರಿ ಮುಕ್ತಾಯ ಆದರೆ, ಬೆಳಗಾವಿ-ರಾಯಚೂರು ಮಧ್ಯದ ಪ್ರಯಾಣದ ಅವಧಿ ಮೂರೂವರೆ ತಾಸು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಬೆಳಗಾವಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡಿ 6 ಮಾರ್ಗ ಮಾಡಲು ಬೇಡಿಕೆಯಿದೆ. ಇದಕ್ಕೆ ಸರ್ಕಾರ ಬದ್ಧವಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದರು. ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವರ್ತುಲ ರಸ್ತೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಳೆಯದು ಎಂದರು.
ಬೆಂಗಳೂರಿಗೆ 17,000 ಕೋಟಿ ರೂಪಾಯಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮಹಾನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ 2025ರೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದು ಬೆಂಗಳೂರಿಗೆ ಮಾತ್ರವಲ್ಲದೇ, ಇಡೀ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡುವ ರಸ್ತೆಯಾಗಲಿದೆ ಎಂದು ಹೇಳಿದರು.
ಇನ್ನು ಬೆಳಗಾವಿ-ಗೋವಾ ಬೈಪಾಸ್ ರಸ್ತೆ ಕಾಮಗಾರಿ ಅತೀ ಬೇಗ ಆಗಬೇಕಿದೆ. ಇದಕ್ಕೆ 3,400 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಲೋಕೋಪಯೋಗಿ ಇಲಾಖೆಯಿಂದ 17 ಯೋಜನೆಗಳ ಬೇಡಿಕೆ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ಸಿಆರ್‌ಎಫ್‌ಡಿ ಅಡಿ 2,000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕರ್ನಾಟಕಕ್ಕೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಹೀಗೆ ನಿತಿನ್ ಗಡ್ಕರಿ ಅವರು ಒಟ್ಟು 13,000 ಕೋಟಿ ವೆಚ್ಚದ 680 ಕಿ.ಮೀ. ಉದ್ದದ 36 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟನೆ ಮಾಡಿದರು. ಈ ಕಾರ್ಯತಂತ್ರದ ರಸ್ತೆ ಉಪಕ್ರಮಗಳು ಈ ಪ್ರದೇಶವನ್ನು ವಿಶ್ವ ದರ್ಜೆಯ ಜಾಲವಾಗಿ ಪರಿವರ್ತಿಸಲು ಹೊಂದಿಸಲಾಗಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ಉದ್ಯೋಗವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.












Click it and Unblock the Notifications