ಬಾದಾಮಿ ಐಹೊಳೆಯಲ್ಲಿ ರಾಷ್ಟ್ರೀಯ ಚಾಲುಕ್ಯ ಉತ್ಸವ
ಬಾಗಲಕೋಟೆ, ಫೆ. 7 : ಫೆಬ್ರವರಿ 7 ಮತ್ತು 8ರಂದು ಬಾದಾಮಿ ಹಾಗೂ 9ರಂದು ಐಹೊಳೆಯಲ್ಲಿ ರಾಷ್ಟ್ರೀಯ ಚಾಲುಕ್ಯ ಉತ್ಸವ ಸಾಂಸ್ಕೃತಿಕ ವೈಭವ ವಿಜೃಂಭಣೆಯಿಂದ ಜರುಗಲಿದೆ. ಖುಜರಾಹೊ ಮಾದರಿಯ ಈ ಉತ್ಸವ ಐತಿಹಾಸಿಕ ಗತಕಾಲದ ವೈಭವವನ್ನು ಅನಾವರಣಗೊಳಿಸಿ, ಚಾಲುಕ್ಯ ಸಾಂಸ್ಕೃತಿಕ ಲೋಕದಲ್ಲಿ ವಿಹರಿಸುವ ಅದ್ಭುತ ಅನುಭವದ ಹೂರಣವಾಗಿದೆ.
ಬಾದಾಮಿ ಚಾಲುಕ್ಯರ ರಾಜಧಾನಿಯಾದರೆ, ಐಹೊಳೆ ಹಿಂದೂ ಶಿಲ್ಪಕಲೆಯ ತೊಟ್ಟಿಲಾಗಿದೆ. ವಿಶ್ವಪರಂಪರೆಯ ಅದ್ಭುತ ತಾಣ ಹಾಗೂ ಗುಹಾಂತರ ದೇವಾಲಯಗಳಲ್ಲಿ ಅಲೆದಾಡಿ ದೈವಕ್ಕೆ ನಮಿಸಲು ನಾಡ ಜನತೆಗೆ ಇದೊಂದು ಸುವರ್ಣವಕಾಶವಾಗಿದೆ.
ಶ್ರೇಷ್ಠ ಹಿಂದೂಸ್ತಾನಿ ಗಾಯಕಿ ಸುಧಾ ಮುದಗಲ್‌ರಿಂದ ಗಾಯನ, ಓಡಿಸ್ಸಾ ರಾಜ್ಯದ ಪ್ರಿನ್ಸ್ ಡಾನ್ಸ್ ಗ್ರೂಪ್‌ನಿಂದ ಆಕರ್ಷಕ ನೃತ್ಯ, ಶ್ರೇಷ್ಠ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲ್‌ರಿಂದ ರಸಮಂಜರಿ, ನಾಗಭೂಷಣ ತಂಡದಿಂದ ನೃತ್ಯ ರೂಪಕ, ಚಲನಚಿತ್ರ ನಟಿ ಹರಿಪ್ರಿಯಾ ಅವರಿಂದ ನೃತ್ಯ, ಬೆಂಗಳೂರಿನ ಸಂಗೀತ ಭಾರತಿ ಕಲಾ ಸಂಸ್ಥೆಯಿಂದ ಪೃಥ್ವಿ ನೃತ್ಯ ಜನಸ್ತೋಮದ ಕಣ್ಮನ ಸೆಳೆಯಲಿದೆ. [ಬಾದಾಮಿ ಚಾಲುಕ್ಯರ ಇತಿಹಾಸ]

ಹೈದರಾಬಾದಿನ ಸೂಫಿ ಗಾಯಕ ಆದಿಲ್ ಹುಸೇನಿಯಿಂದ ಸೂಫಿ ಗಾಯನ, ಮುಂಬೈನ ಉದಿತ್ ನಾರಾಯಣ ಅವರಿಂದ ರಸಮಂಜರಿ, ನಟಿ ಸಂಜನಾ, ರಾಗಿಣಿ (ಚಿತ್ರಪಟ) ಅವರಿಂದ ನೃತ್ಯ, ಬೆಂಗಳೂರಿನ ಸೃಷ್ಟಿ ಅಭಿಯನಯದ ಮಹಾನ್ ಬುದ್ದ ನೃತ್ಯರೂಪಕ, ಚಲನಚಿತ್ರ ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿಯಿಂದ ಗಾನಸುಧೆ, ರಘು ದಿಕ್ಷಿತ್ ತಂಡದಿಂದ ಗಾನ ವೈಭವ, ಇಂದುಮತಿ ಸಾಲಿಮಠರಿಂದ ಹಾಸ್ಯೋತ್ಸವ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಮಗಳು ಉತ್ಸವದ ಹೈಲೈಟ್ಸ್.
ಹೆಲಿಕಾಪ್ಟರ್ ವಿಹಾರ, ಹಾಟ್ ಏರ್ ಬಲೂನ್ ಶೋ, ರಾಕ್ ಕ್ಲೈಂಬಿಂಗ್, ಕಾಯಕಿಂಗ್, ಜಿಪ್‌ಲೈನ್, ಪ್ಯಾರಾಸೇಲಿಂಗ್, ಬರ್ಮಾ ಬ್ರಿಡ್ಜ್ ಮತ್ತು ಬೋಟಿಂಗ್ ಒಳಗೊಂಡಂತೆ ವಿವಿಧ ಹೊಸತುಗಳು ಉತ್ಸವದ ಮೆರಗು ಹೆಚ್ಚಿಸಿವೆ.
ಕಾರ್ಯಕ್ರಮಗಳ ವಿವರ
ಮೊದಲ ದಿನ : ಆರ್ಯಮಂಚಿ ವೇದಿಕೆಯಲ್ಲಿ ಸಂಜೆ 4ರಿಂದ 6ವರೆಗೆ ಸ್ಥಳೀಯ ಕಾರ್ಯಕ್ರಮಗಳು ಜರುಗಲಿದ್ದು, 7 ಗಂಟೆಯಿಂದ ಓಡಿಸ್ಸಾ ತಂಡದಿಂದ ಕೃಷ್ಣ, ಗಣೇಶ, ದುರ್ಗಾ ಹಾಗೂ ವಂದೇ ಮಾತರಂ ನೃತ್ಯ, ವಾರ್ತಾ ಇಲಾಖೆಯಿಂದ ಲೇಜರ್ ಶೋ, ಮುಂಬೈನ ಕುನಾಲ ಗಾಂಜಾವಾಲಾದಿಂದ ರಸ ಮಂಜರಿ, ಮುಂಬೈನ ಶುಭಾ ಮುದಗಲ್‌ರಿಂದ ಹಿಂದೂಸ್ತಾನಿ ಗಾಯನ, ಪುಣೆಯ ಜಯಶ್ರೀ ಅವರಿಂದ ಕಥಕ್ ನೃತ್ಯ, ಮಣಿಪಾಲದ ಪವನ ಆಚಾರ್ಯರಿಂದ ಪಂಚ ವೀಣೆ, ಬೆಂಗಳೂರು ನಾಗಭೂಷಣ ತಂಡದಿಂದ ನೃತ್ಯ ರೂಪಕ, ಅಮೀನಗಡದ ಮುರಳಿಧರ ಪತ್ತಾರರಿಂದ ರಂಗ ಪ್ರಸಂಗ ನಂತರ ಧಾರವಾಡದ ರಂಗ ಸಂಪದದ ಕನಕ ವಿಜಯ ನಾಟಕ ಪ್ರದರ್ಶನಗೊಳ್ಳಲಿದೆ.
ಎರಡನೇಯ ದಿನ : ಸಂಜೆ 4ರಿಂದ ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮ, ಸಂಜೆ 5.40ರಿಂದ ಬೆಂಗಳೂರಿನ ಸಾಯಿ ಕಲಾ ನಿಕೇತನರಿಂದ ಸಮೂಹ ನೃತ್ಯ, ಧಾರವಾಡದ ಮೈತ್ರಾ ಭಜಂತ್ರಿಯಿಂದ ವಚನ ಗಾಯನ, ಶಿವಾನಿ ಮಿರಜಕರಿಂದ ಹಿಂದೂಸ್ತಾನಿ ಗಾಯನ, ಸಹನಾ ಭಟ್ ಮತ್ತು ಗೌರಿ ಕಂಠಿಯಿಂದ ಚಾಲುಕ್ಯ ವೈಭವ ನೃತ್ಯ ರೂಪಕ, ಹೊಳೆಆಲೂರ ಜ್ಞಾನ ಸಿಂಧು ಅಂಧ ಮಕ್ಕಳ ಸಂಸ್ಥೆಯಿಂದ ಯೋಗ ನೃತ್ಯ, ದೇಶಿ ನೃತ್ಯ, ಸುಗಮ ಸಂಗೀತ, ಬೆಂಗಳೂರಿನ ಸಂಗೀತ ಭಾರತಿ ಕಲಾ ಸಂಸ್ಥೆಯಿಂದ ಪೃಥ್ವಿ ನೃತ್ಯ ರೂಪಕ, ಜಾನಪದ ಗಾಯನ, ಮುಂಬೈನ ಖ್ಯಾತ ಹಿನ್ನಲೆ ಗಾಯಕ ಉದಿತ್ ನಾರಾಯಣರಿಂದ ರಸ ಮಂಜರಿ, ಮಲೇಶಿಯಾ ನೃತ್ಯ, ಹೈದ್ರಾಬಾದ ಆದಿಲ್ ಹುಸೇನರಿಂದ ಸೂಫಿ ಗಾಯನ, ಚಲನಚಿತ್ರ ನಟಿ ಸಂಜನಾರಿಂದ ಸಿನಿಮಾ ನೃತ್ಯ, ಸಿತಾರ, ಪಿಟಿಲು ಹಾಗೂ ಜುಗಬಂದಿ, ಜಾನಪದಗೀತೆ ನಂತರ ಮೋಹಿನಿ ಭಸ್ಮಾಸುರ ನಾಟಕ ಪ್ರದರ್ಶಿಸಲಿದ್ದಾರೆ.
ಕೊನೆಯ ದಿನ : ಸಂಜೆ 4ರಿಂದ ನರಸೊಬ್ಬ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಾನ ಸುಧೆ, ಬೆಂಗಳೂರಿನ ರೂಪಾ ಗಿರೀಶರಿಂದ ನೃತ್ಯ ರೂಪಕ, ಬೆಂಗಳೂರಿನ ಆಕ್ಸಿಝನ್ ತಂಡದಿಂದ ಬ್ರ್ಯಾಜಿಲಿಯನ್ ಸಾಂಬಾ, ತೀನ ದೇವಿ, ಜೈಹೋ ಫ್ಯೂಜನ್ ನೃತ್ಯ, ಮಹಾರಾಷ್ಟ್ರದ ಆಶೀಫ್‌ರಿಂದ ಬಾನ ಬಿರುಸುಗಳ ಪ್ರದರ್ಶನ, ಬೆಂಗಳೂರಿನ ಸೃಷ್ಠಿ ಅಭಿನಯ ಕೇಂದ್ರದಿಂದ ಮಹಾನ್ ಬುದ್ದ ನೃತ್ಯ ರೂಪಕ, ಬಳ್ಳಾರಿಯ ಕೆ.ಕೊಟ್ರೇಶರಿಂದ ನಗೆ ಹನಿ, ಎಂ.ಡಿ.ಪಲ್ಲವಿ ಅವರಿಂದ ಗಾನ ವೈವಿದ್ಯ, ಗೀತ ಗಾಯನ, ಬೆಂಗಳೂರಿನ ರಘು ದೀಕ್ಷಿತರಿಂದ ಗಾನ ವೈಭವ ನಂತರ ಕೌಮುದಿ ಕಲಾ ಕೇಂದ್ರದಿಂದ ಧರಿತ್ರಿ ನಾಟಕ ಪ್ರದರ್ಶನಗೊಳ್ಳಲಿದೆ.
ಬರ ಹಾಗೂ ಅತಿವೃಷ್ಟಿಯ ಪರಿಣಾಮವಾಗಿ ಕಳೆದೆರಡು ವರ್ಷಗಳಿಂದ ಉತ್ಸವ ನಡೆದಿರಲಿಲ್ಲ. ಆದರೆ ಈ ಬಾರಿ ಸರ್ಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸುಮಾರು ರೂ. 1.5 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಉತ್ಸವವನ್ನು ನಡೆಸಲು ಸಕಲ ಸಿದ್ಧತೆ ನಡೆಸಿವೆ.
ಆದರೆ ನಾಡ ದೊರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮಕ್ಕೆ ಬರದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಅದರ ಹೊರತಾಗಿ ಚಾಲುಕ್ಯ ವೈಭವ ಶಿಲ್ಪದ ಹಾಗೂ ಉತ್ಸವವನ್ನು ನೋಡಿ, ಆನಂದಿಸಿ ಮೈಮರೆಯಲು ಸುವರ್ಣವಕಾಶ ಇದಾಗಿದೆ. ಚಾಲುಕ್ಯ ಉತ್ಸವಕ್ಕೆ ಬಾರದವರು ತಮ್ಮ ಜೀವನದಲ್ಲಿ ಒಂದು ಅತ್ಯಂತ ಸ್ಮರಣೀಯ ಕ್ಷಣ ಕಳೆದುಕೊಂಡಂತೆ ಎಂಬುದು ಅಷ್ಟೇ ಸತ್ಯ.
(ಲೇಖಕ ಡಾ. ವೀರೇಶ್ ಆರ್. ಹಿರೇಮಠ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ಮಾಸ್ ಕಮ್ಯೂನಿಕೇಷನ್ ಮತ್ತು ಜರ್ನಲಿಸಂ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ.)












Click it and Unblock the Notifications