ಕೊರೊನಾ: ನಾಡಿನ ಶಕ್ತಿ ಕ್ಷೇತ್ರ ಯಕ್ಷಿ ಚೌಡೇಶ್ವರಿ ಸನ್ನಿಧಾನದಲ್ಲಿ ಬಂದ ಸೂಚನೆ
ಸಂಕಟ ಬಂದಾಗ ವೆಂಕಟರಮಣ ಎಂದು ಜನ ಕಷ್ಟದಲ್ಲಿದ್ದಾಗ ದೇವರು ಮೊರೆ ಹೋಗುವುದು ಸಾಮಾನ್ಯ. ಹಾಗೇ, ದೇವರಿಗೆ ವಿಶೇಷ ಪೂಜೆ, ಹೋಮ ಹವನಾದಿಗಳೂ ಇಂತಹ ಕಾಲದಲ್ಲಿ ಹೆಚ್ಚಾಗಿ ನಡೆಯುವುದನ್ನು ನೋಡಿದ್ದೇವೆ.
ಕೊರೊನಾ ವಿಶ್ವದೆಲ್ಲಡೆ ಮರಣ ಮೃದಂಗ ಭಾರಿಸುತ್ತಿರುವ ಈ ಸಮಯದಲ್ಲಿ ಐತಿಹಾಸಿಕ ಮುರುಡೇಶ್ವರ ದೇವಾಲಾಯದಲ್ಲೂ ಹೂವನ್ನು ಇಟ್ಟು ದೇವರಿಗೆ ಪೂಜೆಯನ್ನು ಸಲ್ಲಿಸಲಾಗಿತ್ತು.
ಇನ್ನು, ಹಲವು ಜ್ಯೋತಿಷಿಗಳು, ವಾಸ್ತು ಪಂಡಿತರೂ, ಕೊರೊನಾ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಕೆಲವರು ಏಪ್ರಿಲ್ ಮಧ್ಯಭಾಗದಲ್ಲಿ ಈ ವೈರಾಣು ತೊಲಗುತ್ತದೆ ಎಂದು ಹೇಳಿದ್ದರೆ, ಇನ್ನು ಕೆಲವರು ಮೇ ಅಂತ್ಯದಲ್ಲಿ ಈ ಸಂಕಷ್ಟ ದೂರವಾಗಲಿದೆ ಎಂದು ಹೇಳಿದ್ದಾರೆ.
ಮುರುಡೇಶ್ವರ ದೇವಾಲಯದಲ್ಲಿ ಅರ್ಚಕರು ಹೂವನ್ನು ಇಟ್ಟು ಪ್ರಾರ್ಥಿಸಿದಂತೆ, ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲೂ, ಕೊರೊನಾ ಬಗ್ಗೆ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಬಳ್ಕೂರು ಗ್ರಾಮದ ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಳ್ಕೂರು ಗ್ರಾಮದ ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶ್ವದಾದ್ಯಂತ ಹರಡಿರುವ ಕೊರೋನಾ ವೈರಸ್ ನಿರ್ಮೂಲನೆ ಬಗ್ಗೆ, ದೇವಿಯ ಎರಡೂ ಬದಿ ಹೂವು (ಪಿಂಗಾರ) ಇಟ್ಟು, ಪ್ರಾರ್ಥನೆ ಸಲ್ಲಿಸಲಾಗಿತ್ತು.

ಮಹಾಮಾರಿ ಕೊರೊನಾ
ಕ್ಷೇತ್ರದ ಪ್ರಧಾನ ಅರ್ಚಕರು, "ಇಡೀ ವಿಶ್ವವೇ ಮಹಾಮಾರಿ ಕೊರೊನಾದಿಂದ ತತ್ತರಿಸಿ ಹೋಗಿದೆ. ಆದಿಶಕ್ತಿ, ಪರಮಶಕ್ತಿಯಾದ ನೀನು, ನಿನ್ನ ಮಕ್ಕಳನ್ನು ಕಾಪಾಡಬೇಕು. ಮಹಾತಾಯಿಯಾದ ನೀನು ಎಲ್ಲರನ್ನೂ ಕಾಪಾಡುತ್ತೇನೆ ಎನ್ನುವ ಅಭಯವನ್ನು ನೀಡಬೇಕು" ಎಂದು ಪ್ರಾರ್ಥಿಸಿದ್ದಾರೆ.

ನಿನ್ನ ರಕ್ಷಣೆಯಿದೆ ಎನ್ನುವ ಸೂಚನೆ ನಮಗೆ ಬೇಕಿದೆ
ಭಕ್ತರು ಸಂಪೂರ್ಣವಾಗಿ ನಿನ್ನನ್ನೇ ನಂಬಿದ್ದಾರೆ. ನಿನ್ನ ರಕ್ಷಣೆಯಿದೆ ಎನ್ನುವ ಸೂಚನೆ ನಮಗೆ ಬೇಕಿದೆ. ನಾವೆಲ್ಲರೂ, ನಮ್ಮ ಶಕ್ತ್ಯಾನುಸಾರ ನಿನ್ನ ಸೇವೆಯನ್ನು ನಂಬಿಕೊಂಡು ಬಂದಿದ್ದೇವೆ. ಕೊರೊನಾ ಮಾರಿಯನ್ನು ನೀನು ದೂರ ಮಾಡಬೇಕು" ಎಂದು ಅರ್ಚಕರು ಪ್ರಾರ್ಥಿಸಿದಾಗ, ದೇವಿಯ ಬಲಭಾಗದಿಂದ ಹೂವು ಬೀಳುವ ಮೂಲಕ ಶುಭ ಸೂಚನೆ ಸಿಕ್ಕಿದೆ.

ಮುರುಡೇಶ್ವರ ದೇವಾಲಯ
ಕರಾವಳಿ ಭಾಗದ ದೇವಾಲಯಗಳಲ್ಲಿ ದೇವರ ಮೇಲೆ ಹೂವು ಇಟ್ಟು, ಪ್ರಾರ್ಥನೆ ಸಲ್ಲಿಸುವ ಪದ್ದತಿ ಹಿಂದಿನಿಂದಲೂ ಇದೆ. ಇದೇ ರೀತಿ, ಕೊರೊನಾದಿಂದ ದೇಶವನ್ನು ಕಾಪಾಡು ಎನ್ನುವ ಪ್ರಶ್ನೆಯನ್ನು ಮುರುಡೇಶ್ವರ ದೇವಾಲಯದಲ್ಲೂ ಕೇಳಲಾಗಿತ್ತು. "ಇಡೀ ವಿಶ್ವ ಕೊರೊನಾ ಎನ್ನುವ ಮಹಾಮಾರಿಯಿಂದ ಬಳಲುತ್ತಿದೆ. ಇದರಿಂದ ವಿಶ್ವವನ್ನು ರಕ್ಷಿಸು" ಎಂದು ಅರ್ಚಕರು ಪ್ರಾರ್ಥಿಸಿದಾಗ, ಶಿವಲಿಂಗದ ಬಲಭಾಗದಿಂದ ಹೂವು ಬಿದ್ದಿತ್ತು.












Click it and Unblock the Notifications