ಕರ್ನಾಟಕದ 8 ಜಿಲ್ಲೆಗಳಲ್ಲಿ ಮೋದಿ ಸಮಾವೇಶ
ಬೆಂಗಳೂರು, ನ. 19 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರಿನ ಭಾರತ ಗೆಲ್ಲಿಸಿ ಸಮಾವೇಶ ಯಶಸ್ವಿಯಾದ ನಂತರ, ರಾಜ್ಯದಲ್ಲಿ ಇನ್ನಷ್ಟು ಸಮಾವೇಶ ನಡೆಸಲು ರಾಜ್ಯ ಬಿಜೆಪಿ ಘಟಕ ಚಿಂತನೆ ನಡೆಸಿದೆ. ಇದಕ್ಕೆ ನರೇಂದ್ರ ಮೋದಿ ಅವರು ಸಮ್ಮತಿ ಸೂಚಿಸಿದ್ದು, ಒಟ್ಟು 8 ಸಮಾವೇಶ ಉದ್ದೇಶಿಸಿ ಮಾತನಾಡಲು ಅಸ್ತು ಎಂದಿದ್ದಾರೆ.
ಭಾನುವಾರ ನಡೆದ ನರೇಂದ್ರ ಮೋದಿ ಅವರ ಸಮಾವೇಶದ ನಂತರ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಐದು ರಾಜ್ಯಗಳ ಚುನಾವಣಾ ಪ್ರಚಾರ ಮುಕ್ತಾಯವಾದ ಬಳಿಕ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಮೊದಲು 12 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲು ಮೋದಿ ಅವರಿಗೆ ರಾಜ್ಯ ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ, ಮೋದಿ ನಿಗದಿತ ವೇಳಾಪಟ್ಟಿಯಂತೆ ಬೇರೆ ರಾಜ್ಯಗಳಲ್ಲೂ ಪ್ರಚಾರ ನಡೆಸಬೇಕಾಗಿರುವುದರಿಂದ 8 ಸಮಾವೇಶಗಳಲ್ಲಿ ಮಾತನಾಡಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಪ್ರವಾಸದ ದಿನಾಂಕಗಳನ್ನು ಶೀಘ್ರವೇ ನರೇಂದ್ರ ಮೋದಿ ರಾಜ್ಯ ಬಿಜೆಪಿ ನಾಯಕರಿಗೆ ನೀಡಲಿದ್ದಾರೆ. ಡಿಸೆಂಬರ್ ನಲ್ಲಿ ಮೋದಿ ಮತ್ತೊಮ್ಮೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಲೋಕಸಭಾ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. (ಮೋದಿ 'ಭಾರತ ಗೆಲ್ಲಿಸಿ' ಸಮಾವೇಶ: ವರದಿ)
ಬಿಜೆಪಿ ತಯಾರಿ : ಒಟ್ಟು 8 ಸಮಾವೇಶಗಳಲ್ಲಿ ಮಾತನಾಡಲು ನರೇಂದ್ರ ಮೋದಿ ಒಪ್ಪಿಗೆ ನೀಡಿದ್ದಾರೆ. ಆದರೆ, ಆ ಸಮಾವೇಶಗಳನ್ನು ಯಾವ ಜಿಲ್ಲೆಗಳಲ್ಲಿ ನಡೆಸಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಶೀಘ್ರದಲ್ಲಿಯೇ ಸಭೆ ಸೇರಿ ಅಂತಿಮಗೊಳಿಸಲಿದ್ದಾರೆ. ನರೇಂದ್ರ ಮೋದಿ ಅವರು ದಿನಾಂಕ ನೀಡಿದರೆ, ಪಕ್ಷ ಮತ್ತೊಂದು ಸಮಾವೇಶಕ್ಕೆ ತಯಾರಿ ಆರಂಭಿಸಲಿದೆ.
ಈಗಾಗಲೇ ಬೆಂಗಳೂರಿನ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರು ಮತ್ತು ಯುವಕರಲ್ಲಿ ಸ್ಪೂರ್ತಿ ತುಂಬಿದ್ದಾರೆ. ಉಳಿದಂತೆ ಪ್ರಮುಖ ನಗರಗಳಲ್ಲಿ ಸಮಾವೇಶ ಏರ್ಪಡಿಸಿ ಕಾರ್ಯಕರ್ತರನ್ನು ಚುನಾವಣೆಗೆ ಸಂಘಟಿಸಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. (ಭಾರತ ಗೆಲ್ಲಿಸಿ ಸಮಾವೇಶದ ಚಿತ್ರಗಳು)












Click it and Unblock the Notifications