ಮೋದಿ ಕರ್ನಾಟಕವನ್ನು ನಿರ್ಲಕ್ಷಿಸಿಲ್ಲ : ಬಿಎಸ್‌ವೈ ಸ್ಪಷ್ಟನೆ
ಬೆಂಗಳೂರು, ಜನವರಿ 03 : ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆದರು. ಕರ್ನಾಟಕ ಭೇಟಿಯ ವೇಳೆ ರಾಜ್ಯದ ಸಮಸ್ಯೆಗೆ ಮೋದಿ ಸ್ಪಂದಿಸಿಲ್ಲ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಿವೆ.
ಶುಕ್ರವಾರ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ನರೇಂದ್ರ ಮೋದಿ ಭೇಟಿ ಬಗ್ಗೆ ನಡೆಯುತ್ತಿರುವ ಚರ್ಚೆಗಳು, ಪ್ರತಿಪಕ್ಷಗಳ ಆರೋಪದ ಹಿನ್ನಲೆಯಲ್ಲಿ ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಹಿನ್ನಲೆಯಲ್ಲಿ ಈ ಸ್ಪಷ್ಟನೆ ಕೊಡಲಾಗಿದೆ.
ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು. ಬಳಿಕ ರೈತರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಬೆಂಗಳೂರಿನಲ್ಲಿ ಡಿಆರ್‌ಡಿಓ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶುಕ್ರವಾರ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ಉದ್ಘಾಟನೆ ಮಾಡಿದ್ದರು. ಬಳಿಕ ದೆಹಲಿಗೆ ವಾಪಸ್ ಆಗಿದ್ದರು.

ಅಹವಾಲುಗಳನ್ನು ಸಲ್ಲಿಸಿದ್ದೇನೆ
"ಹೊಸ ವರ್ಷದ ಪ್ರಾರಂಭದಲ್ಲಿಯೇ ರಾಜ್ಯದ ಪ್ರಸಿದ್ದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘನ ಉಪಸ್ಥಿತಿಯಲ್ಲಿ ನಡೆದ ರೈತ ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ಅಹವಾಲನ್ನು ದೇಶದ ಪ್ರಧಾನಮಂತ್ರಿಗಳಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿದ್ದೇನೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸತ್ಯಕ್ಕೆ ದೂರವಾದವು
"ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಸಹಜವಾಗಿ ನಡೆಯುವಂತಹ ವಿದ್ಯಮಾನವಾಗಿದೆ. ಆದರೆ, ಕೆಲವು ಮಾಧ್ಯಮಗಳಲ್ಲಿ ವಿಷಯವನ್ನು ತಿರುಚಿ ಸನ್ಮಾನ್ಯ ಪ್ರಧಾನಮಂತ್ರಿಗಳು ನಮ್ಮ ಬೇಡಿಕೆಗೆ ಮೌನವಹಿಸಿದ್ದರು, ಅವರು ಮುನಿಸಿಕೊಂಡಿದ್ದಾರೆ, ಅವರಿಗೆ ಅಸಮಾಧಾನವಾಗಿದೆ ಎಂದು ವಾಸ್ತವ ಸಂಗತಿಗಳನ್ನು ತಿಳಿಯುವ ಗೋಜಿಗೂ ಹೋಗದೆ, ತಮ್ಮ ಕಪೋಲಕಲ್ಪಿತ ವ್ಯಾಖ್ಯಾನಗಳನ್ನು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಎನ್ನುವುದನ್ನು ನಾನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದೇನೆ" ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚಿನ ಅನುದಾನಗಳನ್ನು ನೀಡಿ
"ಸನ್ಮಾನ್ಯ ಪ್ರಧಾನಮಂತ್ರಿಗಳು ನಮ್ಮ ರಾಜ್ಯದ ಬೇಡಿಕೆಗಳನ್ನು ಸ್ವೀಕರಿಸಿದ್ದಾರೆ. ನಮ್ಮ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ಹೆಚ್ಚಿನ ನೆರವು - ಇದೆಲ್ಲವುಗಳಿಗೆ 50 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಮಾನ್ಯ ಪ್ರಧಾನಮಂತ್ರಿಗಳಲ್ಲಿ ನಮ್ಮ ಮನವಿಯನ್ನು ರೈತ ಸಮಾವೇಶದ ವೇದಿಕೆಯಿಂದ ಮತ್ತೊಮ್ಮೆ ಅರಿಕೆ ಮಾಡಿಕೊಳ್ಳುವುದು ಸಮಂಜಸ ಎನ್ನುವ ಕಾರಣಕ್ಕೆ ಅಲ್ಲಿ ಅದನ್ನು ಉಲ್ಲೇಖಿಸಿದ್ದೇನೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
"ಸನ್ಮಾನ್ಯ ಪ್ರಧಾನಮಂತ್ರಿಗಳ ದಕ್ಷ, ಪಾರದರ್ಶಕ, ಪ್ರಾಮಾಣಿಕ ಆಡಳಿತ ವೈಖರಿ ಇಡೀ ಜಗತ್ತಿಗೆ ಗೊತ್ತಿದೆ. ಇಡೀ ದೇಶಕ್ಕೆ ತಿಳಿದಿರುವಂತೆ, ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಸರ್ಕಾರ ರೈತರಿಗೆ ಅಭೂತಪೂರ್ವ ನೆರವು ನೀಡಿದೆ, ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಹೆಜ್ಜೆಗಳನ್ನು ಇಡುತ್ತಿದೆ. ನಮ್ಮ ರಾಜ್ಯದ ಕೃಷಿಕರ, ನೀರಾವರಿ ಯೋಜನೆಗಳ ವಾಸ್ತವತೆಗಳೂ ಪ್ರಧಾನಿಗಳಿಗೆ ತಿಳಿದಿದೆ. ಅವರು ನಮ್ಮ ಅತ್ಯುನ್ನತ ನಾಯಕರು. ಕರ್ನಾಟಕಕ್ಕೆ ಅತಿ ಹೆಚ್ಚಿನ ನೆರವು, ಅನುದಾನ ನೀಡಿರುವುದು ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೇ ಎನ್ನುವುದೂ ಕೂಡ ಎಲ್ಲರಿಗೂ ತಿಳಿದಿದೆ" ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
"ನಮ್ಮ ಎಲ್ಲ ಮನವಿಗೆ ಸನ್ಮಾನ್ಯ ಪ್ರಧಾನಮಂತ್ರಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ಬಗ್ಗೆ ದೆಹಲಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲು ಮತ್ತು ಇಲಾಖಾವಾರು ಕೇಂದ್ರ ಸಚಿವರುಗಳಿಗೆ ಪ್ರಸ್ತಾವನೆ ಸಲ್ಲಿಸಲು ಮಾನ್ಯ ಪ್ರಧಾನಮಂತ್ರಿಗಳು ಸೂಚಿಸಿದ್ದಾರೆ. ಸನ್ಮಾನ್ಯ ಪ್ರಧಾನಮಂತ್ರಿಗಳು ಈ ವಿಷಯದ ಬಗ್ಗೆ ಖುದ್ದಾಗಿ ನನ್ನೊಂದಿಗೆ ಮಾತನಾಡಿದ್ದಾರೆ" ಎಂದು ಯಡಿಯೂರಪ್ಪ ಸ್ಪಷ್ಟನೆಯಲ್ಲಿ ಹೇಳಿದ್ದಾರೆ.

ವಾಸ್ತವ ಸಂಗತಿಗಳನ್ನು ಮರೆಮಾಚ ಬೇಡಿ
"ವಾಸ್ತವ ಸಂಗತಿಗಳನ್ನು ಮರೆಮಾಚಿ, ಜನರಿಗೆ ತಪ್ಪು ಸಂದೇಶ ನೀಡುವ ಕೆಲವು ಮಾಧ್ಯಮಗಳ ಧೋರಣೆ ಸರಿಯಲ್ಲ ಎನ್ನುವುದನ್ನು ಮತ್ತೊಮ್ಮೆ ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ರಾಜ್ಯದ ಹಿತದೃಷ್ಟಿಯಿಂದ ನಮ್ಮ ಪ್ರಯತ್ನಗಳನ್ನು ಬೆಂಬಲಿಸಿ ಮತ್ತು ವಿಷಯಗಳಿಗೆ ತಪ್ಪು ವಾಖ್ಯಾನ ಮಾಡದಿರಿ ಎಂದು ಎಲ್ಲ ವಿದ್ಯುನ್ಮಾನ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನಾನು ಕೋರಿಕೊಳ್ಳುತ್ತಿದ್ದೇನೆ" ಎಂದು ಯಡಿಯೂರಪ್ಪ ತಿಳಿಸಿದ್ದಾರೆ.












Click it and Unblock the Notifications