ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ?
ಮೈಸೂರು, ಜನವರಿ 6: ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೆರಡು ವರ್ಷವಷ್ಟೆ ಬಾಕಿಯಿದೆ. ಕೊರೊನಾ ಮಹಾಮಾರಿಯ ಕಾರಣದಿಂದ ಒಂದು ವರ್ಷ ಯಾವುದೇ ರಾಜಕೀಯ ಚಟುವಟಿಕೆಗಳಿಲ್ಲದೆ ಕಳೆದು ಹೋಗಿದ್ದು, ಇದೀಗ ಕೊರೊನಾದ ತೀವ್ರತೆ ಸ್ವಲ್ಪ ಮಟ್ಟಿಗೆ ತಗ್ಗಿರುವುದರಿಂದ ರಾಜಕೀಯ ನಾಯಕರೆಲ್ಲರೂ ಮೈಕೊಡವಿಕೊಂಡು ಮೇಲೆದ್ದು ನಿಂತಿದ್ದಾರೆ.
ಈಗ ಎಲ್ಲ ರಾಜಕೀಯ ನಾಯಕರ ಕಣ್ಣಮುಂದೆ ಇರುವುದು 2023ರ ವಿಧಾನಸಭಾ ಚುನಾವಣೆ. ಈ ಚುನಾವಣೆ ವೇಳೆಗೆ ತಮ್ಮ ಪಕ್ಷಗಳನ್ನು ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಬೇಕಾದ ಒಂದಷ್ಟು ತಂತ್ರ- ಪ್ರತಿತಂತ್ರಕ್ಕೆ ವೇದಿಕೆಗಳನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ.
ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಟಿಕೆಟ್ಗೆ ಭಾರೀ ಡಿಮ್ಯಾಂಡ್
ವರ್ಷದ ಆರಂಭದಲ್ಲಿಯೇ ತಮ್ಮ ಪಕ್ಷಗಳ ಬಲವರ್ಧನೆಗೆ ನಾಯಕರು ಇಳಿದಿದ್ದಾರೆ. ಇದುವರೆಗೆ ಅಷ್ಟೇನೂ ಸಕ್ರಿಯವಾಗಿರದೆ, ಮಂಕುಬಡಿದಂತೆ ಇದ್ದ ನಾಯಕರು ಸಭೆ, ಪ್ರತಿಭಟನೆ, ಆರೋಪ ಮಾಡುವುದರಲ್ಲಿ, ಹೇಳಿಕೆ ನೀಡುವುದಕ್ಕೆ ಮುಂದಾಗಿರುವುದು ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಾಗುತ್ತಿರುವುದರ ಸಂಕೇತ ಎಂಬುದಂತು ಸತ್ಯ.

ಶಿಸ್ತಿನ ಪಕ್ಷದಲ್ಲಿ ಕೇಳಿಸಿದ ಅಪಸ್ವರ
ಬಹುಸಂಖ್ಯೆಯಲ್ಲಿ ಗೆದ್ದರೂ ಸರ್ಕಾರ ರಚಿಸಲು ಅಗತ್ಯವಿರುವಷ್ಟು ಮ್ಯಾಜಿಕ್ ಸಂಖ್ಯೆ ಬರಲಿಲ್ಲ. ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರವಾಗಿ ಸರ್ಕಾರ ರಚಿಸಿದ್ದವು. ಸಮ್ಮಿಶ್ರ ಸರ್ಕಾರದಲ್ಲಿದ್ದ ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಬೀಳಿಸಿ, ಅಧಿಕಾರ ಹಿಡಿದು ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷದವರಿಂದಲೇ ಮುಜುಗರ ಎದುರಿಸುತ್ತಾ ಬಂದಿದ್ದಾರೆ. ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಈಗಾಗಲೇ ಅಪಸ್ವರಗಳು ಕೇಳಿ ಬಂದಿತ್ತು. ಒಂದೆಡೆ ನಾಯಕತ್ವ ಬದಲಾವಣೆಯ ಮಾತುಗಳು ಮುನ್ನಲೆಯಲ್ಲಿತ್ತು.

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳಿಗೆ ತೆರೆ
ಆದರೆ ತಳಮಟ್ಟದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪ ,ಈ ಹಿಂದೆ ಪಕ್ಷವನ್ನು ಬಿಟ್ಟು ಹೋದ ಬಳಿಕ ಬಿಜೆಪಿ ಗತಿ ಏನಾಗಿ ಹೋಯಿತು ಎಂಬುದು ನಮ್ಮ ಕಣ್ಮುಂದೆ ಇದೆ. ಹೀಗಾಗಿ ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರ ಬಗ್ಗೆ ಯಾರೇ ಆಗಲಿ ದೂರು ನೀಡಿದರೂ ಅದನ್ನು ಅಷ್ಟೊಂದು ಗಂಭೀರವಾಗಿ ಹೈಕಮಾಂಡ್ ಪರಿಗಣಿಸಲ್ಲ. ಇನ್ನೆರಡು ವರ್ಷಗಳ ಕಾಲ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಬಹುಶಃ ಅವರ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆಯೂ ನಡೆಯಬಹುದೇನೋ?

ಬಿಜೆಪಿಯಲ್ಲಿ ಸಂಘಟನೆಯ ಹುಮ್ಮಸ್ಸು
ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರು ಮತ್ತು ಸಚಿವರೊಂದಿಗೆ ಸಮಾಲೋಚನಾ ಸಭೆ ನಡೆಸಿ ತಮ್ಮೊಳಗಿದ್ದ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ನಡೆದಾಗ ಬಿಜೆಪಿ ಬೆಂಬಲಿತರು ಮೂರನೇ ಸ್ಥಾನದಲ್ಲಿದ್ದರೆ, ಈ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಮೊದಲ ಸ್ಥಾನದಲ್ಲಿದ್ದಾರೆ. ಇದು ಬಿಜೆಪಿಯಲ್ಲಿ ಹುಮ್ಮಸ್ಸನ್ನುಂಟು ಮಾಡಿದೆ.

ಸಂಘಟನೆಗೆ ಮುಂದಾದ ಜೆಡಿಎಸ್
ಇನ್ನೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಒಳಗಾಗಿದ್ದ ಜೆಡಿಎಸ್ ಈಗ ಸಂಘಟನೆಗಿಳಿದಿದೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಬೆಳೆಯುವತ್ತ ಹೆಜ್ಜೆಯಿಟ್ಟಿದೆ. ಈಗಾಗಲೇ ಜೆಡಿಎಸ್ ನಾಯಕರ ಕೊರತೆಯನ್ನು ಎದುರಿಸುತ್ತಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಜತೆಗೆ ಗ್ರಾ.ಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರು ಮೂರನೇ ಸ್ಥಾನ ಪಡೆದಿದ್ದು ಹೇಗಾದರೂ ಮಾಡಿ ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವುದು ಹೇಗೆ ಎಂಬ ಚಿಂತನೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ.

ಯುವಜನತೆಯತ್ತ ಜೆಡಿಎಸ್ ಒಲವು
ಇಳಿ ವಯಸ್ಸಿನಲ್ಲಿಯೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಹಿರಿಯ ನಾಯಕರೆನಿಸಿಕೊಂಡ ಹಲವವರು ಪಕ್ಷದಲ್ಲಿದ್ದರೂ, ಅವರಿಂದ ಪಕ್ಷದ ಸಂಘಟನೆ ವಿಚಾರದಲ್ಲಿ ಹೆಚ್ಚಿನ ನಿರೀಕ್ಷೆ ಮಾಡುವುದು ಕಷ್ಟವೇ. ಹೀಗಾಗಿ ಯುವ ಜನತೆ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಅವರು ಯುವಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ತಳಮಟ್ಟದಿಂದ ಯುವಕರನ್ನು ಸಂಘಟಿಸಿ ಪಕ್ಷವನ್ನು ಬಲಗೊಳಿಸುವ ಚಿಂತನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ.

ವರ್ಷಪೂರ್ತಿ ಹೋರಾಟಕ್ಕೆ ಕೈ ಚಿಂತನೆ
ಇದೆಲ್ಲದರ ನಡುವೆ ಕಾಂಗ್ರೆಸ್ ನಾಯಕರು ಕೂಡ ಬೀದಿಗಿಳಿದಿದ್ದಾರೆ. ಆರೋಪ ಮಾಡುವುದಕ್ಕಷ್ಟೆ ಸೀಮಿತವಾಗಿದ್ದ ನಾಯಕರು ಹೊಸ ತಂತ್ರಗಳನ್ನು ಹೆಣೆಯಲು ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು 2021ನ್ನು ಹೋರಾಟ ಮತ್ತು ಸಂಘಟನಾತ್ಮಕ ವರ್ಷ ಎಂದು ಘೋಷಣೆ ಮಾಡುವ ಮೂಲಕ ಸರ್ಕಾರ ವಿರುದ್ಧ ಮುಗಿ ಬೀಳುವ ಕಾರ್ಯಕ್ರಮಕ್ಕೆ ಅಡಿಗಲ್ಲು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ತಯಾರಿ ನಡೆದಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಹೊಸ ವರ್ಷದ ಆರಂಭದಲ್ಲಿಯೇ ರಾಜಕೀಯ ಪಕ್ಷಗಳು ಮೈಕೊಡವಿಕೊಂಡು ಮೇಲೆದ್ದು ನಿಂತಿರುವುದನ್ನು ನೋಡಿದರೆ ಎಲ್ಲವೂ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.