ಮೈಸೂರು ದಸರಾದಲ್ಲಿ ದಲಿತ ಸಚಿವರ ಅವಮಾನ! ತಡೆಯಲು ಪೊಲೀಸರಿಗಿತ್ತಾ ಗುಪ್ತ ಸೂಚನೆ? ಆರ್.ಅಶೋಕ್
ಮೈಸೂರು: ನಾಡಹಬ್ಬ ಮೈಸೂರು ದಸರಾವನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಷ್ಟು ಕಾಂಗ್ರೆಸ್ ಸರ್ಕಾರ ಅಸಮರ್ಥವಾಗಿದೆ. ದಸರಾಗೆ ಹಾಲಿ ದಲಿತ ಸಚಿವರನ್ನು ಪ್ರವೇಶಿಸಲು ಬಿಡದೇ ಅವಮಾನ ಮಾಡಲಾಗಿದೆ. ಜೊತೆಗೆ ₹2,000 ಕೊಟ್ಟು ಟಿಕೆಟ್ ಖರೀದಿಸಿದರೂ ಜನಸಾಮಾನ್ಯರಿಗೆ ದಸರಾ ವೀಕ್ಷಣೆಗೆ ಅವಕಾಶ ಸಿಗದೇ ಅವ್ಯವಸ್ಥೆಯಾಗಿತ್ತು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ದಸರಾ ವ್ಯವಸ್ಥೆ ಕುರಿತು ರಾಜ್ಯ ಸರ್ಕಾರವನ್ನು ಟೀಕಿಸಿ ಗುರುವಾರ ಟ್ವೀಟ್ ಮಾಡಿರುವ ಅವರು, ₹2,000 ಕೊಟ್ಟು ಟಿಕೆಟ್ ಖರೀದಿಸಿದರೂ ಜನಸಾಮಾನ್ಯರಿಗೆ ದಸರಾ ವೀಕ್ಷಣೆಗೆ ಅವಕಾಶ ಸಿಗದಿರುವುದು ಸರ್ಕಾರದ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯಕ್ಕೆ ಸಾಕ್ಷಿ. ನಾಡಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದ ಜನರಿಗೆ ಇಂತಹ ಸಂಕಷ್ಟ ಎದುರಾಗಬೇಕೇ?

ಜನರ ಅನುಕೂಲ, ಭದ್ರತೆ ಮತ್ತು ಸೌಲಭ್ಯಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸ್ವಪ್ರಚಾರ, ಅಧಿಕಾರದ ಅಹಂಕಾರ ಮತ್ತು ರಾಜಕೀಯ ಲಾಭದ ಲೆಕ್ಕಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಮಸ್ಯೆಗಳನ್ನು ಆಲಿಸುವ ವ್ಯವಧಾನವೂ ಇಲ್ಲ! ಎಂದು ದೂರಿದರು.
ನಾಡಹಬ್ಬ ದಸರಾ ಜನರ ಹಬ್ಬವೇ ಹೊರತು, ಕಾಂಗ್ರೆಸ್ ಸರ್ಕಾರದ ಪ್ರಚಾರದ ವೇದಿಕೆಯಲ್ಲ! ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ವ್ಯವಸ್ಥಿತವಾಗಿ ದಸರಾ ಆಚರಣೆ ನಡೆಸಲು ಸಾಧ್ಯವಾಗದ ಸರ್ಕಾರದ ವೈಫಲ್ಯಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದರು.
ದಲಿತ ಸಚಿವರಿಗೆ ಅವಮಾನ
ಮೈಸೂರು ನಾಡಹಬ್ಬದಲ್ಲಿ ದಲಿತ ಸಚಿವರಿಗೆ ಅವಮಾನ; ಕಾಂಗ್ರೆಸ್ ಸರ್ಕಾರದ "ಸಾಮಜಿಕ ನ್ಯಾಯ"ದ ಕಪಟ ನಾಟಕ ಬಯಲಾಗಿದೆ. ದಸರಾದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಕೆ.ಎಸ್. ಬಸವಂತಪ್ಪ ಅವರಿಗೆ ಆದ ಅಪಮಾನ ಕಾಂಗ್ರೆಸ್ ಸರ್ಕಾರದ ಸಾಮಾಜಿಕ ನ್ಯಾಯದ ಬೂಟಾಟಿಕೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಎಂದು ಅವರು ಟೀಕಿಸಿದರು.
ಪೊಲೀಸರಿಂದ ಸಚಿವರ ತಡೆಗೆ ಗುಪ್ತ ಸೂಚನೆ?
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಅಧಿಕಾರಿಗಳ ದುಸ್ಸಾಹಸದ ಹಿಂದೆ ಯಾರ ಕೈವಾಡ ಇದೆ? ಎಂದು ಪ್ರಶ್ನಿಸಿದರು. ಸರ್ಕಾರದ ಉನ್ನತ ಸ್ಥಾನದಲ್ಲಿರುವ ಸಚಿವರನ್ನೇ ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಗಳು ತಡೆದು ನಿಲ್ಲಿಸುವಷ್ಟು ಧೈರ್ಯ ತೋರಿದ್ದಾರೆಂದರೆ, ಇದರ ಹಿಂದೆ ಮೇಲಿನಿಂದ ಬಂದ ಗುಪ್ತ ಸೂಚನೆ ಯಾವುದು? ಎಂದು ಅನುಮಾನ ಹೊರ ಹಾಕಿದರು.
ಕಾಕತಾಳೀಯವೇ ಅಥವಾ ಪೂರ್ವಯೋಜಿತವೇ?
ದಸರಾ ನಿರ್ಬಂಧಕ್ಕೊಳಗಾದ ಮೂವರೂ ಸಚಿವರು ದಲಿತ ಸಮುದಾಯಕ್ಕೆ ಸೇರಿದವರೇ ಆಗಿರುವುದು ಕೇವಲ ಕಾಕತಾಳೀಯವೇ? ಅಥವಾ ದಲಿತ ನಾಯಕರನ್ನು ತುಳಿಯುವ ವ್ಯವಸ್ಥಿತ ಹುನ್ನಾರವೇ?. ಮಗು ಚಿವುಟಿ, ತೊಟ್ಟಿಲು ತೂಗುವ ಕಪಟ ನಾಟಕ ಇದು ಎಂದರು.
ದಲಿತರಿಗೆ ದ್ರೋಹ ಇದು ಕಾಂಗ್ರೆಸ್ ಅಜೆಂಡಾ?
ಘಟನೆ ನಡೆದು ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದ ತಕ್ಷಣ ತನಿಖೆಯ ನಾಟಕವಾಡುತ್ತಿರುವುದು ಯಾವ ಸೀಮೆ ನ್ಯಾಯ? ದಲಿತರಿಗೆ ದ್ರೋಹ ಬಗೆಯುವುದೇ ಕಾಂಗ್ರೆಸ್‌ನ ಅಜೆಂಡಾ?. ಒಂದು ಕಡೆ ದಲಿತರ ಮತಗಳನ್ನು ಲೂಟಿ ಮಾಡಲು ಬಾಯಿಬಿಟ್ಟರೆ ಸಾಮಾಜಿಕ ನ್ಯಾಯದ ದೊಡ್ಡ ದೊಡ್ಡ ಭಾಷಣಗಳು ಮಾಡುತ್ತೀರಿ. ಮತ್ತೊಂದು ಕಡೆ ಆಡಳಿತದಲ್ಲಿ ದಲಿತ ಸಚಿವರಿಗೇ ಸಾರ್ವಜನಿಕವಾಗಿ ಇಂತಹ ಅಪಮಾನಕರ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದರು.
ಪರಿಶಿಷ್ಟ ಸಮುದಾಯಗಳ ಪರವಾಗಿ ಇದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರದಲ್ಲಿ, ಅಧಿಕಾರದಲ್ಲಿರುವ ಸಚಿವರಿಗೇ ರಕ್ಷಣೆ ಇಲ್ಲದಿದ್ದರೆ ಇನ್ನು ಸಾಮಾನ್ಯ ಜನತೆಯ ಗತಿಯೇನು? ಅಧಿಕಾರಿಗಳನ್ನು ಮಾತ್ರ ಬಲಿಪಶು ಮಾಡಿ, ಈ ಅಮಾನವೀಯ ಕೃತ್ಯದ ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು
ಮುಖ್ಯಮಂತ್ರಿಗಳೇ, ಕೇವಲ ರಾಜಕೀಯ ಲಾಭಕ್ಕಾಗಿ ದಲಿತರ ಹೆಸರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿ. ವಿಚಾರಣೆಯ ಹೆಸರಿನಲ್ಲಿ ಈ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದರೆ, ರಾಜ್ಯದ ಸಮಸ್ತ ದಲಿತ ಸಮುದಾಯ ಮತ್ತು ಜನತೆ ನಿಮ್ಮ ಕಪಟ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದೆ. ದಲಿತರ ಗೌರವ ಮತ್ತು ಸ್ವಾಭಿಮಾನದ ಜತೆ ಚೆಲ್ಲಾಟವಾಡುವುದನ್ನು ತಕ್ಷಣ ನಿಲ್ಲಿಸಿ. ಈ ಘಟನೆಯ ಹೊಣೆ ಹೊತ್ತು ಬಹಿರಂಗ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.


Click it and Unblock the Notifications
