Captain Abhimanyu: ಕ್ಯಾಪ್ಟನ್ ಅಭಿಮನ್ಯುಗೆ ಕೊನೆಯ ದಸರಾ ಅವಕಾಶ ನೀಡಿ: ಪತ್ರ ಬರೆದ ಈಶ್ವರ ಖಂಡ್ರೆ
ಬೆಂಗಳೂರು: ಮೈಸೂರು ದಸರಾ ಮಹೋತ್ಸವದಲ್ಲಿ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಹೆಮ್ಮೆಯ ಆನೆ ಕ್ಯಾಪ್ಟನ್ ಅಭಿಮನ್ಯುಗೆ ಈ ಬಾರಿಯ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ರಾಜೋಚಿತವಾಗಿ ಬೀಳ್ಕೊಡುಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಈಶ್ವರ ಖಂಡ್ರೆ, ದಸರಾ ಮಹೋತ್ಸವದಲ್ಲಿ ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾಗುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಗಜಗಾಂಭೀರ್ಯದಿಂದ ಹೊತ್ತು ಸಾಗುತ್ತಿದ್ದ ಅಭಿಮನ್ಯುವಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಾರಿ ಅಭಿಮನ್ಯುವನ್ನು ದಸರಾ ಮಹೋತ್ಸವದಿಂದ ಏಕಾಏಕಿ ಕೈಬಿಡುವ ಬದಲು ನಿಶಾನೆ ಆನೆಯಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ಗೌರವಪೂರ್ವಕವಾಗಿ ಹಾಗೂ ರಾಜೋಚಿತವಾಗಿ ಬೀಳ್ಕೊಡುಗೆ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿ
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದ ಸುಮಾರು 60 ವರ್ಷದ ಕ್ಯಾಪ್ಟನ್ ಅಭಿಮನ್ಯು, ಇದುವರೆಗೆ 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. ಅಲ್ಲದೆ, ಆರು ಬಾರಿ ಚಿನ್ನದ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಭಾಗವಹಿಸುವ ಮೂಲಕ ರಾಜ್ಯದ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆ ಎಂದು ಖಂಡ್ರೆ ಹೇಳಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯೇ ವಿಜಯದಶಮಿ ಜಂಬೂಸವಾರಿ. ದಸರಾ ಆನೆಗಳೊಂದಿಗೆ ರಾಜ್ಯದ ಜನತೆಗೆ ಅವಿನಾಭಾವ ಸಂಬಂಧವಿದ್ದು, ಅದರಲ್ಲೂ ಚಿನ್ನದ ಅಂಬಾರಿ ಹೊರುವ ಆನೆಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಅಭಿಮಾನವಿದೆ. ಹೀಗಾಗಿ ಅಭಿಮನ್ಯುವನ್ನು ಈ ಬಾರಿ ದಸರಾ ಮಹೋತ್ಸವದಿಂದ ಕೈಬಿಟ್ಟಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಅರ್ಜುನ, ಬಲರಾಮನ ಮಾದರಿಯಲ್ಲಿ ಗೌರವ
ಹಿಂದೆ 1968ರಲ್ಲಿ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲ್ಪಟ್ಟ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗವಹಿಸಿ, ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ. 60 ವರ್ಷ ತುಂಬಿದ ಬಳಿಕವೂ ಅರ್ಜುನ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ. ಇದೇ ರೀತಿ ಬಲರಾಮನಿಗೂ ಗೌರವ ನೀಡಲಾಗಿತ್ತು.
ಅದೇ ಮಾದರಿಯಲ್ಲಿ ಕ್ಯಾಪ್ಟನ್ ಅಭಿಮನ್ಯುವಿಗೂ ಈ ಗೌರವ ನೀಡಬೇಕು. ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಭಾಗವಹಿಸಲು ಅವಕಾಶ ನೀಡಿ, ಆತನ ಸೇವೆಯನ್ನು ಗೌರವಿಸಿ ರಾಜೋಚಿತವಾಗಿ ಬೀಳ್ಕೊಡಬೇಕು ಎಂದು ಈಶ್ವರ ಖಂಡ್ರೆ ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಅಂಬಾರಿ ಹೊರಲು 'ಧನಂಜಯ, ಪ್ರಶಾಂತ್' ಪೈಪೋಟಿ!
ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುವ ಅವಕಾಶವನ್ನು ದುಬಾರೆ ಶಿಬಿರದ ಧನಂಜಯ (46) ಅಥವಾ ಪ್ರಶಾಂತ್ (54) ನೀಡುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ 60 ವರ್ಷ ಮೀರಿದ ಆನೆಗಳನ್ನು ಕಠಿಣ ಕೆಲಸಗಳಿಗೆ ಬಳಕೆ ಮಾಡುವಂತಿಲ್ಲ, ಭಾರ ಹೊರಿಸುವಂತಿಲ್ಲ. ಹೀಗಾಗಿ ಕಳೆದ 6 ವರ್ಷಗಳಿಂದ ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತು ಗಜಪಡೆ ಮುನ್ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯು (61) ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳುವಂತಿಲ್ಲ.
ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಮನ್ಯುವನ್ನು ದಸರಾ ಆನೆಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಬಾರಿಯ ಅಂಬಾರಿ ಆನೆಯಾಗಿ ಧನಂಜಯ ಅಥವಾ ಪ್ರಶಾಂತ ಆನೆಗಳ ಹೆಸರು ಚಾಲ್ತಿಯಲ್ಲಿದೆ. ಜೊತೆಗೆ ಬಳ್ಳೆ ನಾಗರಹೊಳೆಯ ಆನೆ ಶಿಬಿರದ ಮಹೇಂದ್ರ (42) ಹೆಸರು ಕೂಡ ಪಟ್ಟಿಯಲ್ಲಿದೆ. ಧನಂಜಯ 7 ಬಾರಿ, ಪ್ರಶಾಂತ್ 16 ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.


Click it and Unblock the Notifications
