Mysore Dasara 2023: ನಾಡದೇವತೆ ಚಾಮುಂಡಿ ತಾಯಿಗೆ ಸಿದ್ದರಾಮಯ್ಯ ಮೊರೆ
ಇಡೀ ಜಗತ್ತೆ ಕಾಯುವ ಮೈಸೂರು ದಸರಾ ಶುರುವಾಗಿದೆ. ಇಂದಿನಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಹಾಗಾದರೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ನಾಡದೇವತೆ ಚಾಮುಂಡಿ ತಾಯಿ ಬಳಿ ಮೊರೆಯಿಟ್ಟಿದ್ದು ಏಕೆ..? ಹೇಗಿತ್ತು ಮೈಸೂರು ದಸರಾ ಉದ್ಘಾಟನೆ ಸಂಭ್ರಮ? ಬರಗಾಲದ ನಡುವೆ ನಡೆಯುತ್ತಿರುವ ಈ ಬಾರಿಯ ದಸರಾ ಸಂಭ್ರಮ ಹೇಗೆ ಕಳೆಗಟ್ಟಿದೆ?
ಹೌದು, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಿದರು. ತಾಯಿ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಸಿಎಂ ದಸರಾಗೆ ಚಾಲನೆ ನೀಡಿ ಮಾತನಾಡಿದರು. ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಎಲ್ಲಾ ಜಾತಿ ಧರ್ಮದವರನ್ನು ಅತಿ...
ನಮ್ಮ ಪರಂಪರೆ ಮತ್ತು ಹಿರಿಮೆಯನ್ನ ಜಗತ್ತಿಗೆ ಸಾರಲಾಗುವುದು. ಕನ್ನಡ ನಾಡಿನ ಸಮೃದ್ಧಿ, ಪ್ರಗತಿ, ಸಂಸ್ಕೃತಿ ಮತ್ತು ವೈಭವವನ್ನು ದಸರಾ ಮೂಲಕ ಜಗತ್ತಿಗೆ ಸಾರುವ ಕೆಲಸವನ್ನು ನಾವು ಮಾಡುತ್ತೇವೆ. ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ನಾಡು ನಮ್ಮದಾಗಿದೆ. ನಮ್ಮ ಜನ ಬಹಳ ಸುಸಂಸ್ಕೃತರು ಪ್ರೀತಿಯ ಹಂಚುವವರು. ಎಲ್ಲಾ ಜಾತಿ ಧರ್ಮದವರನ್ನು ಅತಿ ಪ್ರೀತಿಯಿಂದ, ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಧರ್ಮ & ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಪ್ರತಿಪಾದಿಸಿದರು.
ನಾಡಹಬ್ಬ ಕನ್ನಡಿಗರ ಹೆಮ್ಮೆ
ಇನ್ನು ರಾಜ್ಯದ 216 ತಾಲೂಕುಗಳಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲ ಸ್ಥಿತಿ ಇದೆ. ಮಳೆ ಇಲ್ಲದೆ ನಾಡಿನ ರೈತ ಕುಲ, ನಾಡಿನ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಅದ್ಧೂರಿಯಲ್ಲದ ವೈಭವಕ್ಕೆ ಕೊರತೆ ಇಲ್ಲದ ಅರ್ಥಪೂರ್ಣ ದಸರ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ. ಮೈಸೂರು ಅರಸರ ಕಾಲದಿಂದ ಅತ್ಯಂತ ವೈಭವದಿಂದ ಆಚರಿಸಲ್ಪಡುತ್ತಿರುವ ದಸರಾ ಹಬ್ಬವನ್ನ ನಾನು ತಂದೆ ಹೆಗಲ ಮೇಲೆ ಕುಳಿತು ನೋಡುತ್ತಿದ್ದೆ. ರಾಜರ ಕಾಲ ಮುಗಿದು ಪ್ರಜಾರಾಜ್ಯ ಬಂದ ಬಳಿಕ ಕರ್ನಾಟಕ ಸರ್ಕಾರವು ನಾಡಹಬ್ಬವಾಗಿ ದಸರಾ ಆಚರಿಸುತ್ತಿದೆ ಅಂತ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.

ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವುದೇ ಸಾಮಾಜಿಕ ನ್ಯಾಯ. ಇದು ನಮ್ಮ ಸಂವಿಧಾನ ಮತ್ತು ನಮ್ಮ ಸರ್ಕಾರದ ಆಶಯ. ಸರ್ವ ಜನರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಾವು 5 ಗ್ಯಾರಂಟಿ ಯೋಜನೆ ರೂಪಿಸಿದೆವು. ಕೇವಲ ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಲದು. ನಮ್ಮ ಜನರಿಗೆ, ಸಾಮಾಜಿಕ & ಆರ್ಥಿಕ ಸ್ವಾತಂತ್ರ್ಯ ದೊರಯಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಅವರ ಆಶಯಗಳ ಹಾದಿಯಲ್ಲಿ ನಮ್ಮ ಸರ್ಕಾರ ಸಾಗುತ್ತಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications