Vande Bharat: ಮೈಸೂರು-ಚೆನ್ನೈ ನಡುವೆ ಮತ್ತೊಂದು ರೈಲು ಸಂಚಾರ; ಸಮಯ, ನಿಲ್ದಾಣ ವಿವರ
ಮೈಸೂರು, ಮಾರ್ಚ್ 09: ಪ್ರಯಾಣಿಕರ ಬೇಡಿಕೆ ಮೇರೆಗೆ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ಮತ್ತೊಂದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ. 2024ರ ಏಪ್ರಿಲ್ 5ರಿಂದ ಮೈಸೂರು-ಚೆನ್ನೈ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ.
ರೈಲು ಸಂಖ್ಯೆ 20663 ವಂದೇ ಭಾರತ್ ಎಕ್ಸ್‌ಪ್ರೆಸ್ ಬುಧವಾರ ಒಂದು ದಿನ ಹೊರತುಪಡಿಸಿ ವಾರದ ಆರು ದಿನ ಸಂಚಾರ ನಡೆಸಲಿದೆ. ಬೆಳಗ್ಗೆ ಆರು ಗಂಟೆಗೆ ಮೈಸೂರಿನಿಂದ ಹೊರಡಲಿರುವ ಈ ರೈಲು ಮಧ್ಯಾಹ್ನ 12:20ಕ್ಕೆ ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಪುನಃ ಸಂಜೆ 5:00 ಗಂಟೆಗೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡಲಿರುವ ಈ ರೈಲು ರಾತ್ರಿ 11:20ಕ್ಕೆ ಮೈಸೂರು ತಲುಪಲಿದೆ.

ಮೈಸೂರು ಹಾಗೂ ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಡ್ಯ, ಬೆಂಗಳೂರು, ಕೃಷ್ಣರಾಜಪುರಂ ಹಾಗೂ ಕಟಪಾಡಿಯಲ್ಲಿ ನಿಲುಗಡೆಯನ್ನು ಹೊಂದಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ನೀಡಿರುವ ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಏಪ್ರಿಲ್ 5ರಿಂದ ಮೈಸೂರು-ಚೆನ್ನೈ ಮಾರ್ಗದಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಾರ್ಚ್ 12ರಿಂದ ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ
ಬಹುಬೇಡಿಕೆಯಾದ ಕಲ್ಯಾಣ ಕರ್ನಾಟಕ ಸಂಪರ್ಕಿಸುವ ವಂದೇಭಾರತ್ ಎಕ್ಸ್ ಪ್ರೆಸ್ ರೈಲು ಮಾರ್ಚ್ 12ರಿಂದ ಆರಂಭವಾಗಲಿದೆ. ಕಲಬುರಗಿ ಹಾಗೂ ರಾಜಧಾನಿ ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಒಪ್ಪಿಗೆ ನೀಡಿದ್ದಾರೆ.
ಈ ಬಗ್ಗೆ ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಕೇಂದ್ರ ರೈಲ್ವೆ ಇಲಾಖೆ ಪತ್ರದ ಮೂಲಕ ತಿಳಿಸಿದ್ದಾರೆ. ಮಾರ್ಚ್ 12ರಂದು ಕಲಬುರಗಿ ರೈಲು ನಿಲ್ದಾಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವರ್ಚುವಲ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕಲಬುರಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.












Click it and Unblock the Notifications