ರಾಮದಾಸ್ ಚೇತರಿಕೆ, ಅಭಿಮಾನಿ ಆತ್ಮಹತ್ಯೆಗೆ ಶರಣು

ಮೃತ ವ್ಯಕ್ತಿಯನ್ನು ಆಟೋ ಚಾಲಕ ನವೀನ್ ಎಂದು ಗುರುತಿಸಲಾಗಿದ್ದು, ಈತ ತನ್ನ ದೇಹದ ಮೇಲೆಲ್ಲ ರಾಮದಾಸ್ ಹೆಸರು ಹಚ್ಚೆ ಹಾಕಿಸಿಕೊಂಡಿದ್ದರು. ರಾಮದಾಸ್ ತನಗೆ ವಂಚಿಸಿದ್ದಾರೆ ಎಂದು ಪ್ರೇಮಕುಮಾರಿ ಎಂಬ ಮಹಿಳೆ ಆರೋಪ ಮಾಡಿದ್ದರಿಂದ ಬೇಸತ್ತು ನವೀನ್ ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ( ಬಿಜೆಪಿ ಮಾಜಿ ಸಚಿವ ರಾಮದಾಸ್ ಆತ್ಮಹತ್ಯೆಗೆ ಯತ್ನ )
ಈ ಮಧ್ಯೆ, ಮದುವೆ ವಂಚನೆ ಆರೋಪದಿಂದ ಮನನೊಂದು ಕಳೆದ ರಾತ್ರಿ ಶ್ರೀರಾಮಪುರದ ಅತಿಥಿ ಗೃಹದಲ್ಲಿ ನೇಣಿಗೆ ಕೊರಳೊಡ್ಡಿ ಆಸ್ಪತ್ರೆ ಸೇರಿದ್ದ ಮಾಜಿ ಸಚಿವ ಎಸ್ಎ ರಾಮದಾಸ್ ಚೇತರಿಸಿಕೊಂಡಿದ್ದಾರೆ. ನಗರದ ಬಿಜಿಎಸ್ ಅಪೊಲೋ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದ ಅವರನ್ನು ಇಂದು ಬೆಳಿಗ್ಗೆ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಮಾಜಿ ಸಚಿವ ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾರುತಿರಾವ್ ಪವಾರ್ ಸೇರಿದಂತೆ ಹಲವು ಮುಖಂಡರು ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ರಾಮದಾಸ್ ಅವರ ನೂರಾರು ಬೆಂಬಲಿಗರು ಕಳೆದ ರಾತ್ರಿಯಿಂದಲೇ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ನಾಯಕನ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಇದೇ ಪ್ರೇಮ ಪ್ರಕರಣದ ಬಗ್ಗೆ ಅಂತೆ-ಕಂತೆಗಳು ಪುಂಖಾನು ಪುಂಖವಾಗಿ ವ್ಯಾಪಕವಾಗಿ ಕೇಳಿಬರುತ್ತಿವೆ.
ಈ ಮಧ್ಯೆ, ಪ್ರೇಮಕುಮಾರಿ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ನ್ಯಾಯ ಒದಗಿಸಲು ಕೆಲ ಮಹಿಳಾ ಮತ್ತು ಸಾರ್ವಜನಿಕ ಸಂಘಟನೆಗಳೂ ಮುಂದಾಗಿವೆ. ಆದರೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ ರಾಮದಾಸ್ ವಿರುದ್ಧ ಇದೊಂದು ಷಡ್ಯಂತರವಿರಬಹುದು. ಲೋಕಸಭಾ ಚುನಾವಣೆ ವೇಳೆ ಅವರ ಚಾರಿತ್ರ್ಯ ವಧೆ ಮಾಡಲು ಕಾಣದ ಕೈಗಳು ಕೈಜೋಡಿಸಿರಬಹುದು ಎಂದು ಆರೋಪಿದ್ದಾರೆ.


Click it and Unblock the Notifications
