ನನ್ನ ಸೊಸೆ ತಾಯಿ ಚಾಮುಂಡೇಶ್ವರಿ ಕೊಟ್ಟ ಪ್ರಸಾದ: ರೇವತಿಯನ್ನ ಹಾಡಿ ಹೊಗಳಿದ ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ, ನವೆಂಬರ್ 09: ನನ್ನ ಸೊಸೆ ಆ ತಾಯಿ ಚಾಮುಂಡೇಶ್ವರಿ ನಮ್ಮ ಮನೆಗೆ ಕೊಟ್ಟ ಪ್ರಸಾದ. ಅವರು ಈ ಗ್ರಾಮದ ಸಾಮಂದಿಪುರದ ಮೊಮ್ಮಗಳು. ನಮಗೂ ಈ ಗ್ರಾಮಕ್ಕೂ ಬಾಂಧವ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಭಾವುಕರಾದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಸಾಮಂದಿಪುರದಲ್ಲಿ ಪ್ರಚಾರ ಭಾಷಣ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಈ ಗ್ರಾಮವು ಅವರ ಸೊಸೆ ಶ್ರೀಮತಿ ರೇವತಿ ಅವರ ಅಜ್ಜಿಯ ತವರು ಮನೆ. ರೇವತಿ ಅವರು ಆ ಹಳ್ಳಿಯ ಮೊಮ್ಮಗಳು. ಈ ವಿಷಯವನ್ನು ಸಭಿಕರೊಬ್ಬರು ಸಚಿವರಿಗೆ ನೆನಪಿಸಿಕೊಟ್ಟರು.

ಈ ವಿಷಯ ಗಮನಕ್ಕೆ ಬಂದ ಕೂಡಲೇ ಕ್ಷಣಕಾಲ ಭಾವುಕರಾದ ಹೆಚ್ ಡಿ ಕುಮಾರಸ್ವಾಮಿ ಅದು ಕೋವಿಡ್ ಸಮಯ. ಆಗ ನನ್ನ ಮಗ ನಿಖಿಲ್ ಅವರ ಮಾಡುವೆ ನಡೆಯಿತು. ರಾಮನಗರ ಚನ್ನಪಟ್ಟಣ, ಮಂಡ್ಯ ಭಾಗದ ಎಲ್ಲಾ ನನ್ನ ಜನರನ್ನು ಮದುವೆಗೆ ಕರೆದು ಊಟ ಹಾಕಬೇಕು ಎನ್ನುವ ಮಹದಾಸೆ ಹೊಂದಿದ್ದೆ. ಆದರೆ ಕೊರೊನಾ ಕಾರಣಕ್ಕೆ ಅದು ಸಾಧ್ಯ ಆಗಲಿಲ್ಲ. ಆ ಬಗ್ಗೆ ನಮ್ಮ ಕುಟುಂಬಕ್ಕೆ ಅತೀವ ನೋವಿದೆ ಎಂದು ಹೇಳಿದರು.
ನಂಬಿದವರಿಗೆ ಮೋಸ ಮಾಡುವ ಯೋಗೇಶ್ವರ್
ಯೋಗೇಶ್ವರ್ ತಮಗೆ ರಾಜಕೀಯ ಮರುಜನ್ಮ ನೀಡಿದ ಹಿರಿಯರಾದ ಯಡಿಯೂರಪ್ಪ ಅವರಿಗೆ ಇನ್ನಿಲ್ಲದ ನೋವು ಕೊಟ್ಟರು. ಅವರ ವ್ಯಕ್ತಿತ್ವವನ್ನು ಹಾಳು ಮಾಡುವ ಪ್ರಯತ್ನ ಮಾಡಿದರು. ಹಾಗೆಯೇ ಸದಾನಂದ ಗೌಡರ ಬಗ್ಗೆಯೂ ಈ ವ್ಯಕ್ತಿ ಅತ್ಯಂತ ಕೆಟ್ಟದ್ದಾಗಿ ನಡೆದುಕೊಂಡರು. ಅವರ ಬಗ್ಗೆ ಅನುಕಂಪ ಹೊಂದಿದ್ದ ಎಲ್ಲಾ ಬಿಜೆಪಿ ನಾಯಕರಿಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿ ಏನೆಂದು ನಾನು ಹೇಳುವುದು ಏನಿಲ್ಲ, ಆ ಪಕ್ಷದ ಮಾಜಿ ಸಂಸದರೇ ಅವರ ನಿಜಸ್ವರೂಪ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ನವರಿಗೆ ಯೋಗೇಶ್ವರ್ ಅವರ ಬಗ್ಗೆ ಮುಂದೆ ಚೆನ್ನಾಗಿ ಅರಿವಿಗೆ ಬರುತ್ತದೆ. ಹಾಗೆಯೇ ಕಾಂಗ್ರೆಸ್ ನಾಯಕರ ಕುಯುಕ್ತಿ ಬಗ್ಗೆಯೂ ಯೋಗೇಶ್ವರ್ ಅವರಿಗೆ ಅರ್ಥವಾಗುತ್ತದೆ ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಕೆರೆಗಳಲ್ಲಿ ಮೀನು ಹಿಡಿದು ನೆಮ್ಮದಿಯ ಜೀವನ ಮಾಡುತ್ತಿದ್ದ ಗಂಗಾ ಮತಸ್ತರ ಜೀವನ ಹಾಳು ಮಾಡಿದ ವ್ಯಕ್ತಿ ಡಿಸಿಎಂ ಡಿಕೆ ಶಿವಕುಮಾರ್. ಗಂಗಾ ಮತಸ್ತರು ಕೆರೆಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದರು. ಮೀನು ಅವರ ಜೀವನಾಧಾರ. ಕೆರೆ ಅವರ ತಾಯಿಯಾಗಿತ್ತು. ಅಂತಹ ಕೆರೆಗಳಲ್ಲಿ ಮೀನು ಹಿಡಿಯುವುದನ್ನು ಟೆಂಡರ್ ಕರೆದು ಬಲಿಷ್ಟರಿಗೆ ಕೆರೆಗಳನ್ನು ಒಪ್ಪಿಸಲಾಯಿತು. ತಲೆತಲಾಂತರಿಂದ ಕೆರೆಗಳನ್ನು ನಂಬಿದ್ದ ಗಂಗಾ ಮತಸ್ತರು ಬೀದಿ ಪಾಲಾದರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಗಂಗಾ ಮತಸ್ತರನ್ನು ಪರಿಶಿಷ್ಟ ವರ್ಗದ ಪ್ರವರ್ಗಕ್ಕೆ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕಿದೆ. ಹಿಂದೆ ಡಿ.ಟಿ.ಜಯಕುಮಾರ್ ಅವರು ನಮ್ಮ ಪಕ್ಷದಲ್ಲಿ ಸಚಿವರಾಗಿದ್ದರು. ಆದರೆ, ಇತ್ತೀಚೆಗೆ ಈ ಸಮುದಾಯಕ್ಕೆ ಅವಕಾಶ ಕಡಿಮೆ ಆಗಿದೆ. ಹೀಗಾಗಿ ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದರು.












Click it and Unblock the Notifications