ಮುಜರಾಯಿ ಇಲಾಖೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಮತ್ತೊಂದು ಶ್ಲಾಘನೀಯ ಕೆಲಸ
ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ಕೊಟ್ಟಾಗಿನಿಂದ ಇಲಾಖೆಯ ವ್ಯಾಪ್ತಿಯಲ್ಲಿ ಒಂದೊಂದೇ ಉತ್ತಮ ಯೋಜನೆ ಪರಿಚಯಿಸುವ ಮೂಲಕ ಜನ ಸಾಮಾನ್ಯರ ಶ್ಲಾಘನೆಗೆ ಪಾತ್ರ ಆಗುತ್ತಿದ್ದಾರೆ. ಮೊದಲು ದೇವಸ್ಥಾನದ ಆವರಣದಲ್ಲಿ ಮೊಬೈಲ್ ಬ್ಯಾನ್ ಮಾಡಿ ಭಕ್ತಾದಿಗಳ ಪ್ರೀತಿಗೆ ಭಾಜನರಾದರು.
ಇದಾದ ಬೆನ್ನಲ್ಲೇ ಈಗ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಮತ್ತೊಂದು ಮಹತ್ವದ ಆದೇಶ ಹೊರಡಿಸಲು ಚಿಂತನೆ ನಡೆಸಲಾಗುತ್ತಿದೆ. ಶಾಲಾ ಕಾಲೇಜುಗಳ ಆವರಣದಿಂದ ಸುಮಾರು 100 ಮೀಟರ್ ವರೆಗೂ ಯಾವುದೇ ಅಂಗಡಿಗಳಲ್ಲಿ ಬೀಡಿ ಸಿಗರೇಟು ಗುಟ್ಕಾ ಮಾರಾಟ ಮಾಡುವಂತಿಲ್ಲ ಅನ್ನೋ ನಿಯಮವಿದೆ. ಇದೇ ನಿಗಮವನ್ನ ಇನ್ನು ಮೇಲೆ ಮುಜರಾಯಿ ಇಲಾಖೆ ದೇವಾಲಯಗಳಿಗೂ ವಿಸ್ತರಿಸುವ ಪ್ಲಾನ್ ಮುಜರಾಯಿ ಇಲಾಖೆ ಮಾಡಿಕೊಂಡಿದೆ.

ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಸ್ವಚ್ಛತೆಯನ್ನ ಕಾಪಾಡುವ ನಿಟ್ಟಿನಲ್ಲಿ ಪ್ಲಾನ್ ಮಾಡಲಾಗಿದೆ. ಭಕ್ತಾಧಿಗಳಿಂದ ಮೌಖಿಕ ಮನವಿಗಳು ಬಂದ ಹಿನ್ನೆಲೆ ಯಾವುದೇ ಕಾರಣಕ್ಕೂ ದೇವಾಲಯಗಳ ಸುತ್ತಮುತ್ತ, ಅಂದರೆ ಸುಮಾರು100 ಮೀಟರ್ ವರೆಗೆ ಬೀಡಿ, ಸಿಗರೇಟ್, ಪಾನ್ ಮಸಾಲೆಗಳನ್ನ ಸಂಪೂರ್ಣ ನಿಷೇಧಿಸಲು ಪ್ಲಾನ್ ಮಾಡಿದೆ.
ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗುವ ಪ್ರವಾಸಿ ಸ್ಥಳಗಳಲ್ಲಿ ದೇವಾಲಯಗಳಲ್ಲಿ ತಂಬಾಕು ಮಾರಾಟವನ್ನೇ ನಿಷೇದಿಸುವ ಯೋಚನೆ ಮಾಡಲಾಗುತ್ತಿದೆ. ದೇವಾಲಯಗಳ ಸ್ವಚ್ಛತೆ ವಿಚಾರಕ್ಕೆ ಸಂಬಂಧಪಟ್ಟಂತೆ ಈ ನಿರ್ಧಾರಕ್ಕೆ ಮುಜರಾಯಿ ಇಲಾಖೆ ಬಂದಿದೆ. ದೇವಸ್ಥಾನದ ಅಕ್ಕಪಕ್ಕದ ಅಂಗಡಿಗಳಿಗೆ ಎಚ್ಚರಿಕೆ ನೀಡಲು ಇಲಾಖೆ ಸೂಚನೆಯನ್ನು ನೀಡಿದೆ.
ಸಿಗರೇಟ್, ಗುಟ್ಕಾ ಮಾರಾಟ ನಿಲ್ಲಿಸುವಂತೆ ಎಚ್ಚರಿಕೆ
ಸಿಗರೇಟ್, ಗುಟ್ಕಾ ಮಾರಾಟ ನಿಲ್ಲಿಸುವಂತೆ ಎಚ್ಚರಿಕೆಯನ್ನ ನೀಡುತ್ತೇವೆ, ಆದರೂ ನಿಲ್ಲಲಿಲ್ಲ ಅಂದರೆ ಕಠಿಣ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಸ್ಕೂಲ್ ಕಾಲೇಜನಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಮಾರಾಟ ನಿಷೇಧ ರೀತಿ ದೇವಾಲಯಗಳ ಬಳಿಯೂ 100 ಮೀ ಅಂತರದಲ್ಲಿ ತಂಬಾಕು ನಿಷೇಧಕ್ಕೆ ನಿರ್ಧರಿಸಲಾಗಿದೆ.
ದೇವಾಲಯಗಳಲ್ಲಿ ತಾಯಿ ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ
ಜೊತೆಗೆ ಸಣ್ಣ ಮಕ್ಕಳಿಗೆ ಹಾಲುಣಿಸಲು ದೇವಾಲಯಗಳಲ್ಲಿ ತಾಯಿ ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಬಗ್ಗೆಯೂ ಯೋಚನೆ ಮಾಡಿದ್ದೇವೆ ಅಂತ ಸಚಿವರು ಮಾಹಿತಿ ನೀಡಿದ್ದಾರೆ. ಎಲ್ಲೆಂದರಲ್ಲಿ ಧೂಮಪಾನ ಮಾಡೋದು, ಗುಟ್ಕಾ ಹಾಕಿ ಉಗುಳುವುದು, ಸ್ವಚ್ಛತೆ ಕಾಪಾಡಿದಾಗಲೇ ಪ್ರವಾಸೋದ್ಯಮವೂ ಬೆಳೆಯುತ್ತೆ. ನಿಜಕ್ಕೂ ಮುಜರಾಯಿ ಇಲಾಖೆಯ ಈ ನಿರ್ಧಾರ ಶ್ಲಾಘನೀಯ ಎನ್ನುವುದು ಭಕ್ತರ ಅಭಿಪ್ರಾಯ.












Click it and Unblock the Notifications