ಹುಬ್ಬಳ್ಳಿಯಲ್ಲಿ ಪಬ್ ದಾಳಿಗೆ ಮುತಾಲಿಕ್ ಸಜ್ಜು?

ಹುಬ್ಬಳ್ಳಿಯ ಹೋಟೆಲ್ ಹಂಸದ ಓಎಂಜಿ ಲಾಂಜ್ ಬಾರ್ ನಲ್ಲಿ ಶನಿವಾರ ಡಿಜೆ ರೋಹಿತ್ ಬಾರ್ಕರ್ ಅವರು ಪಾರ್ಟಿ ಆಯೋಜಿಸಿದ್ದಾರೆ. ಇಂಥ ಪಾರ್ಟಿಗಳನ್ನು ನಡೆಸಲು ಖಂಡಿತ ಬಿಡುವುದಿಲ್ಲ. ಈ ಪಾರ್ಟಿಯನ್ನು ಪೊಲೀಸರು ತಡೆಯದಿದ್ದರೆ ತಮ್ಮ ಸಂಘಟನೆಯ ಕಾರ್ಯಕರ್ತರೇ ಕಾನೂನನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಮುತಾಲಿಕ್ ಗುಡುಗಿದ್ದಾರೆ.
"ಇಂಥಹ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಜಾಣಕುರುಡುತನ ತೋರಿಸುತ್ತಿದ್ದಾರೆ. ನಮಗೆ ಬೇರೆ ದಾರಿಯೇ ಇಲ್ಲ. ಮಂಗಳೂರಿನಲ್ಲಿ 2009ರಲ್ಲಿ ನಡೆಸಿದ ಪಬ್ ದಾಳಿಯ ರೀತಿಯಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲೇಬೇಕಾಗುತ್ತದೆ" ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಒಂದು ವರದಿಯ ಪ್ರಕಾರ, ಹುಬ್ಬಳ್ಳಿಯಲ್ಲಿ ಲಕ್ಷುರಿ ಹೋಟೆಲುಗಳಲ್ಲಿ ನಡೆಯುತ್ತಿರುವ ಈ ಡಿಜೆ ಪಾರ್ಟಿಗಳು ರಾತ್ರಿ 11ರ ನಂತರವೇ ಆರಂಭವಾಗುತ್ತವೆ ಮತ್ತು ಮುಕ್ತಾಯವಾಗುವುದು ಕೋಳಿ ಕೂಗುವ ಸಮಯದಲ್ಲಿ. ಇಂಥ ಪಾರ್ಟಿಗಳಿಗೆ ಹೋಗಿರುವ ಕೆಲ ವಿದ್ಯಾರ್ಥಿಗಳು, ಕೆಲ ಪಾರ್ಟಿಗಳು ಬೆಳಗಿನ ಜಾವ 4ರವರೆಗೆ ನಡೆಯುತ್ತವೆ ಎಂಬ ಮಾಹಿತಿ ನೀಡಿದ್ದಾರೆ.
ಬಿವಿಬಿ ಇಂಜಿನಿಯರಿಂಗ್ ಕಾಲೇಜು, ಜಿಕೆ ಕಾನೂನು ಕಾಲೇಜು, ಸಕ್ಕರಿ ಫಾರ್ಮಸಿ ಮತ್ತು ಹೈಸ್ಕೂಲು, ಸಿಐಎಂ ಪಾಲಿಟೆಕ್ನಿಕ್ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳ ಬಳಿಯೇ ಇಂಥ ಅನೇಕ ಹೋಟೆಲುಗಳಿದ್ದು, ಅವುಗಳಲ್ಲಿ ನಡೆಯುವ ಪಾರ್ಟಿ ಮತ್ತು ಮ್ಯೂಸಿಕ್ ಸದ್ದು ಸುತ್ತಲಿನವರನ್ನು ಕೂಡ ಬೆಚ್ಚಿಬೀಳಿಸುತ್ತಿವೆ.
ಮುಚ್ಚಿದ ಕದದ ಹಿಂದೆ ನಡೆಯುವ ಈ ಐಷಾರಾಮಿ ಮತ್ತು ಅನೈತಿಕ ಚಟುವಟಿಕೆಗಳಿಂದ ಕೂಡಿದ ಪಾರ್ಟಿಗಳ ಮೇಲೆ ಪೊಲೀಸರು ಕಡಿವಾಣ ಹಾಕಿಲ್ಲ. ಈ ಪಾರ್ಟಿಗಳಿಗೆ ಹಾಲ್ ಗಳನ್ನು ಬಾಡಿಗೆ ನೀಡುವುದಷ್ಟೇ ನಮ್ಮ ಕೆಲಸ. ಮುಂದಿನದ ನಮ್ಮ ಹಿಡಿತದಲ್ಲಿರುವುದಿಲ್ಲ ಎಂದು ಹೋಟೆಲಿನ ಸಿಬ್ಬಂದಿಯೊಬ್ಬ ಹೇಳಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಬಿ.ಎ. ಪದ್ಮನಾರಾಯಣ ಅವರು, ಅನೈತಿಕ ಚಟುವಟಿಕೆಗಳು ಹೋಟೆಲುಗಳಲ್ಲಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಮತ್ತು ಇವುಗಳಿಗೆ ಅವಕಾಶವನ್ನೂ ನೀಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications