Muda Scam: ಮೈಸೂರಲ್ಲಿ ಸಿ.ಎಂ ಸಿದ್ದರಾಮಯ್ಯ, ಬೈರತಿ ಸುರೇಶ್ 2 ತಾಸು ಗೌಪ್ಯ ಸಭೆ, ಏನದು
ಮುಡಾದಿಂದ ಬದಲಿ ನಿವೇಶನ ಪಡೆದ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿ.ಎಂ ಸಿದ್ದರಾಮಯ್ಯ ಅವರು ಇದೀಗ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದ್ದಾರೆ. ಲೋಕಾಯುಕ್ತ ಪೊಲೀರು ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡುತ್ತಿದ್ದಂತೆಯೇ ಸಿ.ಎಂ ಇದೀಗ ಹೊಸ ತಂತ್ರಕ್ಕೆ ಸಿದ್ಧರಾಗಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆ ರಹಸ್ಯ ಮಾತುಕತೆ ನಡೆದಿರುವುದು ವರದಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ತಮ್ಮ ಕಾನೂನು ಸಲಹೆಗಾರ ಪೊನ್ನಣ್ಣ ಅವರೊಂದಿಗೆ ಸುದೀರ್ಘ 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ಶಾರದಾದೇವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು, ಶಾಸಕರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಶುಕ್ರವಾರವಷ್ಟೇ ದೆಹಲಿಗೆ ತೆರಳಿ ಕಾನೂನು ತಜ್ಞರು, ಹಿರಿಯ ವಕೀಲರನ್ನು ಭೇಟಿ ಮಾಡಿ ಬಂದಿದ್ದ ಎ.ಎಸ್.ಪೊನ್ನಣ್ಣ ಅವರು ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಲೋಕಾಯುಕ್ತ ಎಫ್‌ಐಆರ್‌ನಲ್ಲಿ ನಮೂದಿಸಿರುವ ಸೆಕ್ಷನ್‌ಗಳು ಯಾವುದು, ಆ ನಂತರದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆದಿವೆ ಎನ್ನುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಕಾನೂನು ಹೆಜ್ಜೆ ಇಡಬೇಕು ಎನ್ನುವುದರ ಬಗ್ಗೆ ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದಿದೆ. ನಾನು ಕಾನೂನು ಹೋರಾಟ ಮಾಡುತ್ತೇನೆ. ಪ್ರತಿಪಕ್ಷದವರಿಗೆ ನೀವು ತಕ್ಕ ಉತ್ತರ ನೀಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿರ್ಮಲಾ ಸೀತಾರಾಮನ್ ಅವರ ಮೇಲೂ ಎಫ್‌ಐಆರ್ ಆಗಿದೆ. ಅದರ ಬಗ್ಗೆ ಯಾಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಿಲ್ಲ. ಮಣಿಪುರದ ಹಿಂಸೆಯ ಬಗ್ಗೆ ಮಾತನಾಡುವುದಿಲ್ಲ. ಅಲ್ಲಿಗೆ ಭೇಟಿ ನೀಡಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
ಬಳಿಕ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ತಿಂಡಿ ತಿಂದು ಮಾತನಾಡಿಸಿಕೊಂಡು ಹೋಗುತ್ತಿದ್ದೇನೆ. ನನಗೆ ಸ್ವಲ್ಪ ತಲೆನೋವಿದೆ. ಹೀಗಾಗಿ, ಮಡಿಕೇರಿಯ ಕಡೆಗೆ ಹೋಗುತ್ತಿದ್ದೇನೆ. ಲೋಕಾಯುಕ್ತದಲ್ಲಿ ಎಫ್‌ಐಆರ್ ಹಾಕಿರುವುದು ನಿರೀಕ್ಷಿತವೇ ಇದು ನಮಗೆ ಗೊತ್ತಿತ್ತು. ಕಾನೂನಾತ್ಮಕವಾಗಿ ಇದನ್ನೆಲ್ಲಾ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಜನರಿಂದ ಅಹವಾಲು ಸ್ವೀಕಾರ: ಇನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಸಾಕಷ್ಟು ಸಾರ್ವಜನಿಕರು ಸೇರಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಕೆಲವರು ನೇರವಾಗಿ ಸಿಎಂ ಭೇಟಿ ಮಾಡಿದರೆ, ಇನ್ನು ಕೆಲವರು ತಮ್ಮ ಮನವಿ ಪತ್ರ ನೀಡಿದರು. ಸಿಎಂ ಹೊರ ಬಂದಾಗ ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್‌ನಿಂದ ಸರಣಿ ಟ್ವೀಟ್: ಇನ್ನು ಮುಡಾ ಹಗರಣದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲೇಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ಈ ಸಂಬಂಧ ತೀಕ್ಷ್ಣವಾಗಿ ಟ್ವೀಟ್ ಮಾಡುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸಹ ಟ್ವೀಟ್ ಮೂಲಕವೇ ತಿರುಗೇಟು ನೀಡುತ್ತಿದೆ.












Click it and Unblock the Notifications