14 ನಿವೇಶನ ವಾಪಸ್: ʼಸಿದ್ದರಾಮಯ್ಯ ಅವರಿಗೆ ರಾಜೀನಾಮೆಯೊಂದೇ ಉಳಿದಿರುವ ದಾರಿʼ
ಬೆಂಗಳೂರು, ಅಕ್ಟೋಬರ್ 01: ಮುಡಾಗೆ ಸಂಬಂಧಿಸಿದ 14 ನಿವೇಶನಗಳನ್ನ ವಾಪಸ್ಸು ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನಿರ್ಧಾರಿಸಿದ್ದು, ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತು ಸಿಎಂಗೆ ಅನ್ವಯವಾಗುತ್ತದೆ ಎಂದು ಮುಡಾ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಮುಡಾ ಪ್ರಕರಣ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಸೈಟ್ ವಾಪಸ್ಸು ಕೊಡುವುದಾಗಿ ತಿಳಿಸಿದ ಮೇಲೆ ತಮ್ಮ ಎಕ್ಸ್ (X) ಖಾತೆಯಲ್ಲಿ ಟ್ವೀಟ್ ಹಾಕಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಿ ವೈ ವಿಜಯೇಂದ್ರ ಅವರು , ಸಿದ್ದರಾಮಯ್ಯ ಅವರಿಗೆ ರಾಜೀನಾಮೆಯೊಂದೇ ಉಳಿದಿರುವ ದಾರಿ. 'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ ಎಂದು ಹೇಳಿದ್ದಾರೆ.

"ಮುಖ್ಯಮಂತ್ರಿ ಮನೆಯವರು ಎಂದರೆ ಬಿಟ್ಟುಬಿಡಬೇಕಾ? 62 ಕೋಟಿ ಕೊಟ್ಟರೆ ನಿವೇಶನಗಳನ್ನು ಹಿಂದಿರುಗಿಸುತ್ತೇನೆ" ಎಂದು ಅಂದು ಆರ್ಭಟಿಸಿದ್ದ ಮಾನ್ಯ ಸಿದ್ದರಾಮಯ್ಯ ಅವರು ಇಂದು ಬೇಷರತ್ತಾಗಿ ಅವರ ಪತ್ನಿಯವರಿಂದ ನಿವೇಶನ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
"ರಾಜೀನಾಮೆಯೊಂದೇ ನಿಮಗೆ ಉಳಿದಿರುವ ದಾರಿ"
— Vijayendra Yediyurappa (@BYVijayendra) September 30, 2024
'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ.
“ಮುಖ್ಯಮಂತ್ರಿ ಮನೆಯವರು ಎಂದರೆ
ಬಿಟ್ಟುಬಿಡಬೇಕಾ? 62 ಕೋಟಿ ಕೊಟ್ಟರೆ ನಿವೇಶನಗಳನ್ನು ಹಿಂದಿರುಗಿಸುತ್ತೇನೆ" ಎಂದು ಅಂದು ಆರ್ಭಟಿಸಿದ್ದ ಮಾನ್ಯ @siddaramaiah ನವರು ಇಂದು ಬೇಷರತ್ತಾಗಿ ಅವರ ಪತ್ನಿಯವರಿಂದ… pic.twitter.com/lpA6ymA1q0
ಬಿಜೆಪಿ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು, ನಿಮಗೆ ದೊರೆತ 14 ಅಕ್ರಮ ನಿವೇಶನಗಳು 5000 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿಕೋರತನಕ್ಕೆ ರಕ್ಷಣೆಯಾಗಿ ನಿಂತಿದೆ ಎಂದು ಆರೋಪಿಸಿ ನಾವು ನಡೆಸಿದ 'ಮೈಸೂರು ಚಲೋ' ಪಾದಯಾತ್ರೆಗೆ ಪರ್ಯಾಯ ಸಮಾವೇಶ ಆಯೋಜಿಸಿ ಭಂಡತನದ ಸಮರ್ಥನೆಗಿಳಿದರು, ಸಾಮಾಜಿಕ ಕಾರ್ಯಕರ್ತರ ನ್ಯಾಯಾಲಯದ ಹೋರಾಟಕ್ಕೆ ಅಸ್ತು ಎಂದ ಘನತೆವೆತ್ತ ರಾಜ್ಯಪಾಲರನ್ನು ಅವಹೇಳನ ಮಾಡಿದರು, ಅವರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿದರು.
ನ್ಯಾಯಾಲಯದಲ್ಲಿ ಜಯ ದೊರಕದ ಹಿನ್ನಲೆಯಲ್ಲಿ ಕಾನೂನಿನ ಕುಣಿಕೆ ಬಿಗಿತ ಹೆಚ್ಚಾದಂತೆ, CBI-ED ತನಿಖೆಗಳ ನಿರೀಕ್ಷೆಯಿಂದ ಬೆದರಿದ ಮುಖ್ಯಮಂತ್ರಿಗಳು ಏಕಾಏಕಿ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿರುವುದು ಅವರು ಕಾನೂನು ಹೋರಾಟಕ್ಕೆ ಮುನ್ನವೇ ಶಸ್ತ್ರ ತ್ಯಜಿಸಿ ಶರಣಾಗತಿ ಪ್ರಕಟಿಸಿದಂತಾಗಿದೆ, ಅಂದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬಹುದು ಎಂದು ಅಂದುಕೊಂಡಿದ್ದರೆ ಅದು ಅವರ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ, ನೀವೇಶನಗಳನ್ನು ಹಿಂದಿರುಗಿಸಿ ತಪ್ಪೊಪ್ಪಿಕೊಂಡಂತೆ ಮುಖ್ಯಮಂತ್ರಿ ಸ್ಥಾನಕ್ಕೂ ರಾಜಿನಾಮೆ ನೀಡಿದರೆ ಮರೆತು ಹೋಗಿರುವ ತಮ್ಮ ನೈತಿಕತೆ ಪ್ರಜ್ಞೆ ಪ್ರದರ್ಶಿಸಿದಂತಾಗುತ್ತದೆ.
"ಕತ್ತಲು ಕಟ್ಟಿ ಹೋದ ಮೇಲೆ ದೀಪ ಹಚ್ಚಿದಂತೆ": ಛಲವಾದಿ
ನೀತಿ ಮತ್ತು ನ್ಯಾಯದ ಹಾದಿಯನ್ನು ಬಿಟ್ಟು ಎಷ್ಟು ದೂರ ಹೋದರೂ, ಒಂದು ದಿನ ಬಂದು ಸತ್ಯದ ಎದುರು ಶರಣಾಗಬೇಕಾಗುತ್ತದೆ. ಮಾನ್ಯ ಸಿದ್ದರಾಮಯ್ಯ ಅವರ ನಿವೇಶನ ಹಿಂದಿರುಗಿಸುವ ನಿರ್ಧಾರಕ್ಕೆ "ಕತ್ತಲು ಕಟ್ಟಿ ಹೋದ ಮೇಲೆ ದೀಪ ಹಚ್ಚಿದಂತೆ" ಎಂಬ ಗಾದೆ ನಿಖರವಾಗಿ ಅನ್ವಯಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಒಳ್ಳೆಯದ್ದನ್ನು ಮಾಡಬೇಕಾದ ಸಮಯವು ಕಳೆದುಹೋದ ಮೇಲೆ ಬಂದ ಜ್ಞಾನ, ಅನಿವಾರ್ಯವಾಗಿ ಪಶ್ಚಾತ್ತಾಪವನ್ನೇ ತರುತ್ತದೆ ಎಂಬುದು ಮಾನ್ಯ ಸಿದ್ದರಾಮಯ್ಯ ರವರ ನಡೆಯಿಂದ ಸ್ಪಷ್ಟವಾಗಿದೆ. ಅವರ ತಪ್ಪುಗಳನ್ನು ಒಪ್ಪಿಕೊಳ್ಳದೆ, ಬಿಜೆಪಿ ಮೇಲೆ ನಿರಂತರ ಆರೋಪ ಮಾಡಿ, ಗೌರವಾನ್ವಿತ ರಾಜ್ಯಪಾಲರನ್ನು ಮತ್ತು ಅವರ ಹುದ್ದೆಯನ್ನು ಅಪಮಾನಿಸುವಂತ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡಿ.
ನಮ್ಮ ಪಕ್ಷದ ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯವಾಗಿ ಭಂಡತನ ಪ್ರದರ್ಶಿಸಿ, ಅಬ್ಬರಿಸಿ, ಬೊಬ್ಬಿರಿದು ಕಪ್ಪು ಚುಕ್ಕೆ ಇಲ್ಲ ನನ್ನಲ್ಲಿ ಎಂಬಂತಹ ಅಪಹಾಸ್ಯದ ಹೇಳಿಕೆಗಳನ್ನು ನೀಡಿ, ಕೊನೆಗೆ ಹೋದ ಮೇಲೆ ನೀರಲ್ಲಿ ಹೋಮ ಎಂಬ ಗಾದೆಯ ಮಾತಿನಂತೆ ಸೈಟ್ ಗಳನ್ನು ಹಿಂದಿರುಗಿಸಲು ನಿರ್ಧಾರ ಪ್ರಕಟಿಸಿರುವುದು ತಮ್ಮ ತಪ್ಪನ್ನು ಸ್ಪಷ್ಟವಾಗಿ ಒಪ್ಪಿಕೊಂಡ ಹಾಗೆ ಅನಿಸುತ್ತದೆ. ಅವರ ಈ ನಡೆ ಕೇವಲ ಕಾನೂನಿನ ಬಂಧನದಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನವೇ ಹೊರತು, ನೈತಿಕ ಜವಾಬ್ದಾರಿ ಹೊತ್ತಂತೆ ಕಾಣುತ್ತಿಲ್ಲ.
ಸಿದ್ಧರಾಮಯ್ಯ ಅವರ ನಿರ್ಧಾರಗಳು ಮತ್ತು ನಡೆಗಳನ್ನು ಗಮನದಲ್ಲಿಟ್ಟುಕೊಂಡರೆ, ಅವರು ಇದೀಗ ಮೂಡಾ ಹಗರಣದ ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನೈತಿಕತೆಯ ಪ್ರಜ್ಞೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications