ಕಾಂಗ್ರೆಸ್‌ನಲ್ಲಿದ್ದಾಗ್ಲೆ ಮೂರು ಸಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು ಎರಡು ಸರಿ ಸೋತೆ: ರೊಚ್ಚಿಗೆದ್ದ ಎಂಟಿಬಿ ನಾಗರಾಜ್
ಬೆಂಗಳೂರು, ಜೂನ್ 26: ಇನ್ನೂ ಹಲವು ಬಿಜೆಪಿ ನಾಯಕರಿಗೆ ಸೋಲಿನ ಹತಾಶೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಒಳಜಗಳ, ಹೊಂದಾಣಿಕೆ ರಾಜಕೀಯದ ಬಗ್ಗೆ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ಈಗ ಸಿಡಿದೆದ್ದಿದ್ದು, ಮಾಜಿ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಸೋಲಿನ ಬಗ್ಗೆ ಬೇಸರ ಹೊರಹಾಕಿದ್ದಾರೆ. ತಾನು ಸೋಲಲು ಮಾಜಿ ಸಚಿವ ಡಾ. ಕೆ. ಸುಧಾಕರ್ ಕಾರಣ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ ಸೋಲಿಗೆ ಹಲವು ಕಾರಣಗಳನ್ನು ಕೂಡ ನೀಡಿದ್ದಾರೆ.

ಬಿಜೆಪಿಯ ಸೋತ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಂಟಿಬಿ ನಾಗರಾಜ್ ಪಕ್ಷದ ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಿದರು. ಆದರೆ, ತಮ್ಮ ಸೋಲಿಗೆ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರೇ ಕಾರಣ ಎಂದು ಆರೋಪಿಸಿ, ಎಲ್ಲಿ ತಪ್ಪಾಯಿತು ಎನ್ನುವುದನ್ನು ವಿವರಿಸಿ ಹೇಳಿದರು.
ಕಾಂಗ್ರೆಸ್‌ನಲ್ಲಿದ್ದಾಗ 3 ಬಾರಿ ಗೆದ್ದಿದ್ದೆ
ಇನ್ನು ತಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಮೂರು ಬಾರಿ ಗೆಲುವು ಸಾಧಿಸಿದ್ದೆ, ಆದರೆ ಬಿಜೆಪಿಗೆ ಸೇರ್ಪಡೆಯಾದ ನಂತರ 2 ಬಾರಿ ಸೋಲನುಭವಿಸಿದ್ದೇನೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾತಿಗೆ ಗೌರವ ಕೊಟ್ಟು ನಾನು ಬಿಜೆಪಿಗೆ ಸೇರಿದ್ದೆ, ಆದರೆ ಇಲ್ಲಿಗೆ ಬಂದ ನಂತರ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದೇನೆ ಎಂದು ಬೇಸರ ಹೊರಹಾಕಿದರು.
ಡಾ. ಕೆ. ಸುಧಾಕರ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಿದ್ದರು. ಆದರೆ, ಸುಧಾಕರ್ ಉಸ್ತುವಾರಿ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅವನು ಸೋಲುವುದಲ್ಲದೇ ನನ್ನನ್ನೂ ಸೋಲಿಸಿದ. ನಾನು ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸೋಲಿಗೂ ಡಾ. ಕೆ. ಸುಧಾಕರ್ ಕಾರಣ ಎಂದು ಆರೋಪಿಸಿದರು.
ಪಕ್ಷಕ್ಕಾಗಿ ದುಡಿಯುವ ಕಾಯಕರ್ತರಿಗೆ ಬೆಲೆ ಕೊಡಲಿಲ್ಲ. ಕಾರ್ಯಕರ್ತರ ಕಷ್ಟ ಸುಖಗಳನ್ನು ಉಸ್ತುವಾರಿ ಸಚಿವರು ಕೇಳುವ ಗೋಜಿಗೂ ಹೋಗಲಿಲ್ಲ. ಸುಧಾಕರ್ ಮಾಡಿದ ತಪ್ಪಿಗೆ ನಾನು ಸೋಲುವಂತಾಯಿತು ರಂದು ಸಭೆಯಲ್ಲಿ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಹಲವು ಕಾರಣ ಪಟ್ಟಿ ಮಾಡಿದ ಎಂಟಿಬಿ
ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಮಕಾಡೆ ಮಲಗಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದರು. ನಾನು ಹಣ, ಅಧಿಕಾರದ ಆಸೆಗೆ ಭಾರತೀಯ ಜನತಾ ಪಕ್ಷಕ್ಕೆ ಬಂದಿದ್ದಲ್ಲ ಎಂದ ಅವರು, ಕಾಂಗ್ರೆಸ್‌ನವರು ನಮ್ಮ ಮೇಲೆ ಮಾಡಿದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ನಾವು ಪ್ರತಿದಾಳಿ ಮಾಡಲಿಲ್ಲ. ಅದನ್ನು ಬಿಟ್ಟು ಸಿದ್ದರಾಮಯ್ಯ ಅವರನ್ನು ಬೈಯುತ್ತಾ ಕಾಲ ಕಳೆದೆವು, ಚುನಾವಣೆ ಹತ್ತಿರವಾದ ಸಂದರ್ಭದಲ್ಲಿ ಅಕ್ಕಿ ಹಂಚಿಕೆ ಕಡಿಮೆ ಮಾಡಿದ್ದು ಕೂಡ ಸೋಲಿಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆ ಕಾಂಗ್ರೆಸ್‌ನ 10 ಕೆ.ಜಿ. ಅಕ್ಕಿ ಕೊಡುವ ಗ್ಯಾರಂಟಿ ಕೂಡ ನಮ್ಮ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.












Click it and Unblock the Notifications