ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ಕೂರಲಿದ್ದಾರೆ ಸಂಸದ!

ಬೆಂಗಳೂರು, ಜುಲೈ 29: ಬಿಜೆಪಿ ನಾಯಕ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧರಣಿ ನಡೆಸಲಿದ್ದಾರೆ. ತಮ್ಮ ಮೇಲಿನ ಆರೋಪದ ಕುರಿತು ಮುಖ್ಯಮಂತ್ರಿಗಳ ಹೇಳಿಕೆಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂಸದರು ಫೇಸ್‌ಬುಕ್ ಪುಟದಲ್ಲಿ ಮಾಹಿತಿ ನೀಡಿದ್ದಾರೆ. 'ನನ್ನ ಮೇಲಿನ ಸತ್ಯಕ್ಕೆ ದೂರವಾದ ನಿಮ್ಮ ಆರೋಪ ವಾಪಸ್‌ ಪಡೆಯಿರಿ. ಇಲ್ಲವಾದರೆ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿ ಎಂದು ಮುಖ್ಯಮಂತ್ರಿಗಳಾದ Siddaramaiah ರವರಿಗೆ ಪತ್ರ ಬರೆದು ಮಾನವಿ ಮಾಡಿದ್ದೆ' ಎಂದು ಸಂಸದರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

MP Kota Srinivas Poojary Dharna In Bengaluru

'ಮುಖ್ಯಮಂತ್ರಿಗಳ ಮೌನ ನೋವು ತಂದಿದೆ. ಆದ್ದರಿಂದ ಇಂದು ಬೆಳಗ್ಗೆ 10 ಗಂಟೆಗೆ ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಸಾಂಕೇತಿಕವಾಗಿ ಧರಣಿ ಕೂರುತ್ತಿದ್ದೇನೆ. ರಾಜ್ಯದ ಜನತೆ ತೀರ್ಪು ನೀಡಲಿ' ಎಂದು ಸಂಸದರು ಹೇಳಿದ್ದಾರೆ.

ಸಂಸದರು ಬರೆದ ಪತ್ರದಲ್ಲಿ ಏನಿದೆ?

ಕರುನಾಡ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೊಂದು ಆತ್ಮೀಯ ಪತ್ರ...ನನ್ನ ಮೇಲಿನ ನಿಮ್ಮ ಆರೋಪ ಹಿಂಪಡೆಯಿರಿ, ಅಥವಾ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ.

ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರೇ....ಒಂದರ್ಥದಲ್ಲಿ ಅನುಭವ, ಆಡಳಿತ ಮತ್ತು ವಯಸ್ಸಿನಲ್ಲಿ ನನಗಿಂತ ಹಿರಿಯರು ನೀವು. ಇದನ್ನು ಗಮನದಲ್ಲಿಟ್ಟುಕೊಂಡೇ ಈ ಬಹಿರಂಗ ಪತ್ರ ತಮಗೆ ಬರೆಯುವ ಅನಿವಾರ್ಯತೆ ಬಂತು. ಸರಿಸುಮಾರು ಒಂದು ವಾರದ ಹಿಂದಷ್ಟೇ ತಮಗೆ ಅರೆ ಖಾಸಗಿ ಪತ್ರ ಬರೆದು ರಾಜ್ಯದ ಮುಖ್ಯಮಂತ್ರಿಗಳಾದ ತಮ್ಮ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆಶಿಯವರಿಂದ ನನ್ನ ಮೇಲೆ ನೀವು ಮಾಡಿದ ಆರೋಪಕ್ಕೆ ಸ್ಪಷ್ಟನೆ ಕೋರಿದ್ದೆ.

ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳಾಗಿ ಮತ್ತು ಜನಪ್ರತಿನಿಧಿಗಳಾಗಿ ಟೀಕೆ, ಟಿಪ್ಪಣಿ, ವ್ಯಂಗ್ಯ, ಆರೋಪ, ಪ್ರತ್ಯಾರೋಪಗಳನ್ನು ಕಂಡವರು ನಾವು ನೀವು. ವೈಚಾರಿಕ ಮತ್ತು ರಾಜಕಾರಣದ ಅಭಿಪ್ರಾಯ ಭೇದದ ನಡುವೆಯೂ ಎದುರು ಬದುರಾದಾಗ ಗೌರವಪೂರ್ಣ ಆತ್ಮೀಯತೆ ತೋರುವ ನಿಮ್ಮ ಗುಣಗಳನ್ನು ನಾನು ಗೌರವಿಸಿದ್ದೆ. ಆದರೆ ಇತ್ತೀಚೆಗೆ ಸದನದ ಒಳಗೆ ಮತ್ತು ಹೊರಗೆ ತಾವು ಕೊಟ್ಟಿರುವ ಹೇಳಿಕೆ ವೈಯಕ್ತಿಕವಾಗಿ ಸಂಕಟ ಉಂಟು ಮಾಡಿದೆ. ತಮ್ಮ ಸರಕಾರದ ಮೂಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಪ್ರಕರಣವನ್ನು ಸದನದಲ್ಲಿ ವಿಪಕ್ಷಗಳು ಟೀಕಿಸಿದಾಗ ನಿಮ್ಮದೇ ನೇತೃತ್ವದ ಸರಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹಿಂದಿನ ಸರಕಾರದ ಮೇಲೆ ಆರೋಪಗಳ ಸುರಿಮಳೆ ಗೈಯುತ್ತಾ ಬೊಮ್ಮಾಯಿಯವರ ಸರಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿಯಾಗಿ ಕೆಲಸ ಮಾಡಿದ ನನ್ನ ಮೇಲೆ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಲಿಖಿತ ಆರೋಪ ಮಾಡಿದ್ದೀರಿ. ಮತ್ತು ಸದನದ ಹೊರಗೂ ನನ್ನ ಮೇಲೆ ಅದೇ ಮಾದರಿಯ ಆಪಾದನೆ ಮಾಡಿದ್ದು ಕಂಡು ಬಂತು.

ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಈ ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ರವರು, ಪೂಜಾರಿ ಒಬ್ಬ ಪ್ರಾಮಾಣಿಕ ಎಂದು ನಾನು ತಿಳಿದುಕೊಂಡಿದ್ದೆ ಎಂದು ಕಟಕಿಯಾಡಿದ್ದರು. ನಿಜಕ್ಕೂ ಡಿಕೆಶಿಯ ಬಗ್ಗೆ ನನಗೆ ರಾಜಕೀಯ ಅಭಿಪ್ರಾಯ ಬೇಧಗಳಿರಬಹುದು. ಆದರೆ ಅವರೊಬ್ಬ ದಿಟ್ಟ ನಿಲುವಿನ ಮನುಷ್ಯ ಎಂದು ನಾನು ಈಗಲೂ ಭಾವಿಸುತ್ತಿದ್ದೇನೆ. ದುರಾದೃಷ್ಟಕ್ಕೆ ಸತ್ಯ ಗೊತ್ತಿದ್ದು ನನ್ನ ಬಗ್ಗೆ ಅವರ ಆತ್ಮ ವಂಚನೆಯ ಮಾತು ನೋವು ತಂದಿದೆ. ಆ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳಾದ ತಮಗೆ ಪತ್ರ ಬರೆದು ತಮ್ಮ ಕಚೇರಿಗಿದನ್ನು ತಲುಪಿಸಿ ನಿಮ್ಮ ಸೃಷ್ಟಿಕರಣ ಕೇಳಿದ್ದೆ. ಕರುನಾಡ ರಾಜ್ಯ ರಾಜಕಾರಣದ ಬಹುದೊಡ್ಡ ಜವಾಬ್ದಾರಿ ಹೊಂದಿರುವ ತಮಗೆ ನನ್ನಂತಹ ಸಾಮಾನ್ಯ ಸಂಸದನ ಪತ್ರಕ್ಕೆ ಉತ್ತರಿಸುವಷ್ಟು ಬಿಡುವಾಗಲಿ, ವ್ಯವಧಾನವಾಗಲಿ ಇಲ್ಲದಿರಬಹುದು. ಆದರೆ, ನನ್ನ ಮಟ್ಟಿಗೆ ನಿಮ್ಮ ಆರೋಪ ನಿರಾಧಾರವಾದದ್ದು ಮತ್ತು ಉದ್ದೇಶಪೂರ್ವಕವಾಗಿ ರಾಜಕೀಯ ಕಾರಣದ ಆರೋಪವೆಂದು ರಾಜ್ಯ ಜನತೆಗೆ ಮನವರಿಕೆ ಮಾಡಬೇಕಾದ ಅಗತ್ಯವಿದೆ ಎಂದೆನಿಸಿದೆ.

ಇಲ್ಲದಿದ್ದಲ್ಲಿ ತಮ್ಮಷ್ಟು ಎತ್ತರಕ್ಕಲ್ಲದಿದ್ದರೂ ನನ್ನ ಪಾರ್ಟಿ ಯಾವ ವಿಚಾರಕ್ಕಾಗಿ ಮೂರು ಬಾರಿ ನನ್ನನ್ನು ಕ್ಯಾಬಿನೆಟ್ ಮಂತ್ರಿಯಾಗಿ ಮಾಡಿತ್ತೋ, ಎರಡು ಬಾರಿ ಮೇಲ್ಮನೆ ವಿಪಕ್ಷದ ನಾಯಕನನ್ನಾಗಿ ಮಾಡಿತ್ತೋ ಆ ನಂಬಿಕೆಗೆ ನಿಮ್ಮ ಅಪಪ್ರಚಾರದಿಂದ ಎಲ್ಲೋ ಪೆಟ್ಟು ಬೀಳುವ ಪ್ರಮೇಯವೇ ಒದಗಿದಂತಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಿಮಗೆ ಬರೆದ ಪತ್ರದಲ್ಲಿ ನೀವು ಉಲ್ಲೇಖಿಸಿದ ಆರೋಪಗಳಿಗೆ ಉತ್ತರಿಸಿದ್ದೆ. ನಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದಾಗ ಅದಕ್ಕೂ ಮೊದಲೇ ಟೆಂಡರ್ ಪ್ರಕ್ರಿಯೆ ಆಗಿದ್ದ ಕೊಳವೆ ಬಾವಿಯಲ್ಲಿ ಅಕ್ರಮವಾಗಿದೆ ಎಂದು, ಅಂದು ವಿಧಾನಸಭೆಯಲ್ಲಿ ಶಾಸಕರಾಗಿದ್ದ ಪ್ರಿಯಾಂಕ ಖರ್ಗೆ ಸದನದಲ್ಲಿ ಉಲ್ಲೇಖಿಸಿದ್ದರು. ತಕ್ಷಣ ನಾನು ತನಿಖೆಗೆ ಆದೇಶಿಸಿದ್ದೆ. ಮತ್ತು ಅಂದಿನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರ ಸಲಹೆ ಸೂಚನೆ ಪಡೆದು ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಕಡತ ಶಿಪಾರಸ್ಸು ಮಾಡುವ ಮೂಲಕ ವಹಿಸಿದ್ದೆ.

ನಾನು ಸಮಾಜ ಕಲ್ಯಾಣ ಮಂತ್ರಿಯಾಗಿ ಅಧಿಕಾರ ಪಡೆಯುವ ಮೊದಲು ಕೊಳವೆ ಬಾವಿಯನ್ನು ಟರ್ನ್ ಕೀ ಎಂಬ ವ್ಯವಸ್ಥೆಯಡಿ ಟೆಂಡರ್ ಪಡೆದ ಗುತ್ತಿಗೆದಾರ ಕೊಳವೆ ಬಾವಿ ಕೊರೆಯುವುದರೊಂದಿಗೆ ಪಂಪು ಅಳವಡಿಸಿ ವಿದ್ಯುತ್ ನೀಡಬೇಕಾದ ನಿಯಮ ರೂಪಿಸಲಾಗಿತ್ತು. ಪ್ರಿಯಾಂಕ ಖರ್ಗೆ ಅವರ ದೂರು ಗಮನಿಸಿ ಟೆಂಡರ್ ಮೂಲಕ ಆಗ ಇರಬಹುದಾದ ಗೊಂದಲ ನಿವಾರಿಸಲು ಈ ರಾಜ್ಯದಲ್ಲಿ ಪ್ರಥಮ ಬಾರಿಗೆ ಕೊಳವೆ ಬಾವಿ ಯೋಜನೆಗೆ ಡಿ.ಬಿ.ಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್) ನಿಯಮ ತಂದು ಫಲಾನುಭವಿ ರೈತರ ಖಾತೆಗಳಿಗೆ ಹಣ ನೇರ ಪಾವತಿ ಮಾಡುವ ಯೋಜನೆಯನ್ನು ಜಾರಿಗೆ ತಂದೆ, ಅಂದರೆ ಕೊಳವೆಬಾವಿ ಮಂಜೂರಾತಿ ಪಡೆದ ಯಾರೇ ರೈತ ಮಾನ್ಯತೆ ಪಡೆದ ಸಂಸ್ಥೆಯಿಂದ ಬಾವಿ ಕೊರೆದು ನೀರು ಬಂತೆಂದರೆ ಕೊಳವೆ ಬಾವಿಯ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ ಮತ್ತು ತನಗೆ ಇಷ್ಟವಾದ ಯಾವುದೇ ಮೋಟಾರ್ ಅಳವಡಿಸಿಕೊಂಡರೆ ಫಲಾನುಭವಿ ರೈತರ ಖಾತೆಗೆ ನೇರವಾಗಿ ಹಣ ತಲುಪಲಿದೆ.

ವಿದ್ಯುತ್ ಸಂಪರ್ಕದ ಹಣವನ್ನು ವಿದ್ಯುತ್ ಇಲಾಖೆಗೆ ಸಮಾಜ ಕಲ್ಯಾಣ ಇಲಾಖೆಯ ಹಣವನ್ನು ನೇರ ಪಾವತಿಸಲಾಗುತ್ತಿದೆ. ನೀವೇ ಹೇಳಿ ಇದಕ್ಕಿಂತ ಪಾರದರ್ಶಕತೆ ಇನ್ನೆಲ್ಲಿ ಮಾಡಲು ಸಾಧ್ಯ?. ಇದನ್ನು ತಾವು ಗಮನಿಸಿದ್ದೀರಿ ಎಂದು ನನ್ನ ಭಾವನೆ. ಯಾಕೆಂದರೆ, ಅಂದು ನಮ್ಮ ಇಲಾಖೆ ತಂದಿರುವ ಡಿಬಿಟಿ ವ್ಯವಸ್ಥೆಯನ್ನು ಇಂದಿನ ತಮ್ಮ ಸರಕಾರವೂ ಅನುಸರಿಸುತ್ತಿದೆ ಎಂಬುದು ಬಲ್ಲೆ. ಕೊಳವೆ ಬಾವಿಯ ವಿಚಾರದಲ್ಲಿ ಸಿಐಡಿ ತನಿಖೆ ಘೋಷಿಸುವಾಗ ತಾವು ಈ ರಾಜ್ಯದ ವಿಪಕ್ಷದ ಮುಖಂಡರಾಗಿದ್ದೀರಿ. ನಂತರ ನಡೆದ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ತಾವು ಮುಖ್ಯಮಂತ್ರಿಗಳಾಗಿದ್ದೀರಿ. ಅಚ್ಚರಿ ಎಂದರೆ ಅಂದು ವಿಪಕ್ಷ ನಾಯಕನಾಗಿ ಯಾಗಲಿ ಸುಮಾರು ಒಂದು ವರ್ಷ ಮೀರಿ ಮುಖ್ಯ ಮಂತ್ರಿಯಾಗಿ ಆಗಲಿ ನೀವು ನನ್ನ ಕಾರ್ಯ ಚಟುವಟಿಕೆ ಬಗ್ಗೆ ಮಾತಾಡದೆ ಈಗ ವಾಲ್ಮೀಕಿ ಮತ್ತು ಮೂಡಾ ಪ್ರಕರಣದ ನಂತರ ನನ್ನ ಮೇಲೆ ಮಾಡಿದ ಆರೋಪಗಳಿಗೆ ರಾಜಕೀಯ ದ್ವೇಷವಲ್ಲದೆ ಮತ್ತೇನೆನ್ನಲು ಸಾಧ್ಯ?.

ನನ್ನ ಅವಧಿಯಲ್ಲಿ ಬೋವಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ನೀವು ಆಪಾದಿಸಿದ್ದೀರಿ. ನನ್ನನ್ನು ಸೇರಿ ಈ ನಾಡಿನ ಎಲ್ಲ ಜನರ ಮುಖ್ಯಮಂತ್ರಿಗಳು ನೀವು. ಸತ್ಯ ಹೇಳಿ, ಅಂದು ಭ್ರಷ್ಟಾಚಾರ ಮಾಡಿದ ಇಬ್ಬರು ಹಿರಿಯ ಅಧಿಕಾರಿಗಳು ಹಿಂದೆ ತಮ್ಮದೇ ನೇತೃತ್ವದ ಸರಕಾರ ಇದ್ದಾಗ ನೇಮಿಸಲಾಗಿತ್ತು. ನಾನು ಮಂತ್ರಿ ಆಗುತ್ತಲೇ, ದಲಿತ ಸಂಘಟನೆಯ ಮುಖಂಡರು ಮತ್ತು ಪರಿಶಿಷ್ಟ ಜನಾಂಗದಿಂದ ಮೇಲೆದ್ದು ಬಂದ ಜನಪ್ರತಿನಿಧಿಗಳ ದೂರುಗಳನ್ನು ಆಧರಿಸಿ ಅವರನ್ನು ಅಮಾನತು ಮಾಡಿ ತನಿಖೆಗೊಳಪಡಿಸಿದೆ. ಮಾತ್ರವಲ್ಲ, ನಗರದ ಹೃದಯ ಭಾಗದಲ್ಲಿ ಇರಬೇಕಾದ ಬೋವಿ ನಿಗಮ ದೂರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕಚೇರಿ ತೆರೆದಿತ್ತು. ಅದನ್ನೂ ನಗರದ ಮಧ್ಯ ತರಬೇಕು ಎಂಬ ಬೋವಿ ಸಮಾಜದ ಮುಖಂಡರ ವಿಶ್ವೇಶ್ವರಯ್ಯ ಬಹಮಹಡಿ ಕಟ್ಟಡಕ್ಕೆ ತಂದು ಕಚೇರಿ ಆರಂಭಿಸಿದ್ದು ತಮ್ಮ ಗಮನದಲ್ಲಿದೆ ಎಂದು ನನ್ನ ಭಾವನೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಭೋವಿ ನಿಗಮದ ಕಚೇರಿ ಎಂಥ ಪರಿಸ್ಥಿತಿಯಲ್ಲಿತ್ತೆಂದರೆ ಸಮಾಜ ಕಲ್ಯಾಣ ಇಲಾಖೆಯ ಹಣದಿಂದ ನಿರ್ಮಿತವಾದಂತ ಕಟ್ಟಡ ಸಮಾಜ ಕಲ್ಯಾಣ ಇಲಾಖೆಗೆ ಬಾಡಿಗೆ ಕೊಡಲಾಗಿತ್ತು. ಅಂತಹ ಭೋವಿ ನಿಗಮದ ಇಡೀ ಪ್ರಕರಣವನ್ನು ನಾನೇ ಸಚಿವನಾಗಿದ್ದಾಗ ಸಿಐಡಿಗೆ ನೀಡಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಆದೇಶ ಮಾಡಿದ್ದೆ.

ಸರ್...ರಾಜಕಾರಣದ ವ್ಯತ್ಯಾಸದ ನಡುವೆ ನಾನು ಮಂತ್ರಿ ಬದಲಾದದ್ದು ಬಿಟ್ಟರೆ ನಿಮ್ಮ ಮೇಲೆ ಗೌರವ ಹೊಂದಿರುವ ಅಂದಿನ ಹಿರಿಯ ಅಧಿಕಾರಿಗಳು ಇಂದೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇದ್ದಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌, ಆಯುಕ್ತ ರಾಕೇಶ್, ಇಲಾಖೆಯ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಲಹೆಗಾರ ಇ. ವೆಂಕಟಯ್ಯ, ಇಲಾಖೆಯಲ್ಲಿ ಅನೇಕ ಕೆಲಸ ಮಾಡಿ ಸೇವಾ ಸರ್ವೋತ್ತಮ ಪ್ರಶಸ್ತಿ ಪಡೆದ ಊರ್ಮಿಳರಂತಹ ಅಧಿಕಾರಿಗಳನ್ನು ಒಮ್ಮೆ ಕರೆದು ಕೇಳಿ. ಮೇಲಿನ ಪ್ರಮುಖ ಜಾಗದಲ್ಲಿರುವ ಮತ್ತು ಇದೀಗ ನಿಮ್ಮ ಅಧೀನದಲ್ಲಿರುವ ಯಾವುದಾದರೂ ಒಬ್ಬ ಅಧಿಕಾರಿ ಆತ್ಮಸಾಕ್ಷಿಯಾಗಿ ಅಂದಿನ ಮಂತ್ರಿಯಾದ ನಾನು ಒಂದು ರೂಪಾಯಿ ಭ್ರಷ್ಟಾಚಾರಕ್ಕೆ ಎಡಮಾಡಿ ಕೊಟ್ಟಿದ್ದೇನೆಂದು ನಿಮ್ಮ ಅಧಿಕಾರಿಗಳು ದೃಢೀಕರಿಸಿದರೂ ತಮಗೆ ಕೈಮುಗಿದು ಕ್ಷಮೆ ಕೇಳಲು ಸಿದ್ಧನಿದ್ದೇನೆ.

ಇದನ್ನೆಲ್ಲ ಯಾಕೆ ಹೇಳಿದೆನೆಂದರೆ, ಸಾರ್ವಜನಿಕ ಜೀವನದಲ್ಲಿ ಸತ್ಯಕ್ಕೆ ಅಪಚಾರವಾಗಬಾರದೆಂಬ ಕಾರಣಕ್ಕೆ. ಈ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿಗಳಾದ ತಮ್ಮಲ್ಲಿ ಪತ್ರದ ಮೂಲಕ ನಾನು ಆಗ್ರಹಿಸಿದ್ದು ನನ್ನ ಮೇಲಿನ ಆರೋಪವನ್ನು ನೀವು ಹಿಂಪಡೆಯದಿದ್ದರೆ ನೀವು ದೂರಿದಂತೆ, ನನ್ನ ಮೇಲಿರುವ ನಿಮ್ಮ ಆರೋಪವನ್ನು ತನಿಖೆಗಾಗಿ ದೇಶದ ಸರ್ವೋಚ್ಛ ತನಿಖೆ ಸಂಸ್ಥೆಯಾದ ಸಿಬಿಐಗೆ ನೀಡಲು ಶಿಫಾರಸ್ಸು ಮಾಡಿ ಎಂಬುದಾಗಿತ್ತು.

ಮಾನ್ಯ ಮುಖ್ಯಮಂತ್ರಿಗಳೇ...ಇದಕ್ಕೂ ನಿಮಗಿರುವ ತೊಂದರೆಯೇನು!, ನನ್ನ ಅವಧಿಯಲ್ಲಿ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸಿದ್ದೇನೆಂಬ ನನ್ನ ನಿಲುವನ್ನು ನೀವು ಒಪ್ಪದೇ ಇರಬಹುದು ಅಥವಾ ನನ್ನ ಆಡಳಿತದಲ್ಲಿ ಅಧಿಕಾರ ದುರುಪಯೋಗ ಮಾಡಿಲ್ಲವೆಂದು ನಾನು ಹೇಳಿದರೂ, ಇಲ್ಲ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುವ ಹಕ್ಕು ನಿಮ್ಮದೆಂದು ನೀವು ಭಾವಿಸಿರಬಹುದು. ಈ ಗೊಂದಲದಿಂದ ರಾಜ್ಯದ ಜನತೆಗೆ ಸ್ಪಷ್ಟನೆ ಸಿಗಬೇಕಾದರೆ ಕನಿಷ್ಠ ಸಿಬಿಐ ತನಿಖೆಯಾದರೂ ಮಾಡಿ ಎಂಬ ನನ್ನ ಆಗ್ರಹಕ್ಕೆ ತಾವು ಒಪ್ಪಬೇಕೆಂದು ಮತ್ತೊಮ್ಮೆ ಈ ಮೂಲಕ ಆಗ್ರಹಿಸುತ್ತೇನೆ.

ಸಂವಿಧಾನದ ಸೃಷ್ಟಿಕರ್ತ ಬಾಬಾ ಸಾಹೇಬ ಅಂಬೇಡ್ಕರ್‌ರವರ ಆಶಯ ಇದ್ದದ್ದು, ರಾಜಕಾರಣವೆಂಬ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಬೇಕಾದರೆ ಸತ್ಯವನ್ನು ಒಪ್ಪುವ ಕನಿಷ್ಠ ಮನೋಸ್ಥಿತಿ ಆಳುವವರಲ್ಲಿ ಇರಬೇಕು. ನನ್ನ ದೃಷ್ಟಿಯಲ್ಲಿ ಇನ್ನೂ ಕೂಡ ನೀವು ಮಾಡಿದ ಆರೋಪವನ್ನು ಹಿಂಪಡೆದುಕೊಳ್ಳುವ ಅವಕಾಶ ತಮಗಿದೆ. ಆದಾಗ್ಯೂ ನಿಮ್ಮ ನಿಲುವಿನಲ್ಲಿ ಬದಲಾವಣೆ ಆಗದಿದ್ದರೆ ಅಥವಾ ನನ್ನ ಮೇಲಿನ ಆರೋಪವನ್ನು ಸಿಬಿಐಗೆ ಕೊಡದಿದ್ದರೆ ನಾನೇ ಹೇಳಿದಂತೆ ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯೆದುರು ಧರಣಿ ಕೂತು ಸತ್ಯ ನ್ಯಾಯಕ್ಕಾಗಿ ಆಗ್ರಹಿಸುವ ನನ್ನ ಹಕ್ಕನ್ನು ಕಾದಿರಿಸಿಕೊಂಡಿದ್ದೇನೆ ಮತ್ತು ಇಂದು ನ್ಯಾಯಗ್ರಹಿಸಿ ಸಾಂಕೇತಿಕವಾಗಿ ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಕೂರುತ್ತೇನೆ, ಇದು ರಾಜ್ಯದ ಜನತೆಯ ಮುಂದೆ ಸತ್ಯ ದರ್ಶನ ಮಾಡುವ ಕಿರು ಪ್ರಯತ್ನ ನನ್ನದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+