ಯತ್ನಾಳ್ ಮತ್ತೆ ಬಿಜೆಪಿ ಪಕ್ಷಕ್ಕೆ ವಾಪಸ್: ಸುಳಿವು ಕೊಟ್ಟ ಸಂಸದ
ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷವಿರೋಧಿ ನಡೆ ಆರೋಪದ ಮೇಲೆ ಯತ್ನಾಳ್ ಅವರನ್ನು ಉಚ್ಛಾಟಿಸಲಾಗಿದ್ದು, ಪಕ್ಷಕ್ಕೆ ಮತ್ತೆ ಮರಳುತ್ತಾರಾ? ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿಲ್ಲ. ಮತ್ತೊಂದಡೆ ಹಿಂದೂಗಳಿಗಾಗಿ ಹೊಸ ಪಕ್ಷ ಘೋಷಿಸುವುದಾಗಿಯೂ ಯತ್ನಾಳ್ ತೊಡೆತಟ್ಟಿದ್ದಾರೆ. ಆದರೆ ಬಿಜೆಪಿಗೆ ಅವರು ಮತ್ತೆ ಮರಳುವ ಸುಳಿವನ್ನು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಧಾಕರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಣಯವನ್ನು ನಾವು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಯತ್ನಾಳ್ ಅವರು ನನಗೆ ಒಬ್ಬ ಒಳ್ಳೆಯ ಸ್ನೇಹಿತರು. ಅವರ ಬಗ್ಗೆ ನನಗೆ ಸಹಾನುಭೂತಿ ಇದೆ. ಅವರು ಒಬ್ಬ ಒಳ್ಳೆಯ ನಾಯಕ, ಜನನಾಯಕ ಹಾಗೂ ಜನಪ್ರಿಯರಾದವರು. ಅವರಿಗೆ ನಾನು ಕೆಲವು ಸಂದರ್ಭಗಳಲ್ಲಿ ಕಿವಿಮಾತು ಕೂಡ ಹೇಳಿದ್ದೆ. ಆದರೆ ಅವರ ಉಚ್ಛಾಟನೆಯನ್ನು ನಾನು ದುರದೃಷ್ಟಕರ ಎಂದೇ ಹೇಳಬಹುದು ಎಂದಿದ್ದಾರೆ.

ಪಕ್ಷ ಖಂಡಿತವಾಗಿಯೂ ಯತ್ನಾಳ್ ಅವರನ್ನ ಮುಂದೆ ಯಾವ ರೀತಿ ಸೇಪರ್ಡೆ ಮಾಡಿಕೊಳ್ಳುತ್ತೆ? ಅನ್ನೋದನ್ನ ಕಾದು ನೋಡೋಣ. ಒಂದು ವೇಳೆ ಬಿಜೆಪಿ ಅವರನ್ನ ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದರೆ, ಅದಕ್ಕೆ ನಾವೆಲ್ಲರೂ ಸಹಕಾರದಿಂದ ಇರುತ್ತೇವೆ ಎಂದು ಸುಧಾಕರ್ ಹೇಳಿದ್ದಾರೆ.
ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಅವರನ್ನು ಪಕ್ಷಕ್ಕೆ ವಾಪಸ್ ತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು. ಈ ಸಂಬಂಧ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸುತ್ತೇವೆ ಎಂದು ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಕೂಡ ಹೇಳಿದ್ದಾರೆ. ಯತ್ನಾಳ್ ಅವರನ್ನ ಖಂಡಿತವಾಗಿಯೂ ಪಕ್ಷಕ್ಕೆ ವಾಪಸ್ ಕರೆತರಲು ಮುಂದೆ ಬರುತ್ತೇವೆ. ಹೈಕಮಾಂಡ್ ಜೊತೆಗೂ ಚರ್ಚೆ ಮಾಡುತ್ತೇವೆ. ಯತ್ನಾಳ್ ಅವರನ್ನ ವಾಪಸ್ ಕರೆತರಲು ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಪಕ್ಷ ಕಟ್ಟಿದವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಮಗನ ಪರವಾಗಿ ಪ್ರತಿಭಟನೆಗೆ ಬಂದು ಕೂತರು, ಆದರೆ, ಉಳಿದ ನಾಯಕರು ಯಾಕೆ ಬರಲಿಲ್ಲ? ಎಂದು ಕುಮಾರ್ ಬಂಗಾರಪ್ಪ ಪ್ರಶ್ನಿಸಿದ್ದಾರೆ. ಕರ್ನಾಟಕ ಏಕೀಕರಣದ ನಂತರ ಇಂದು ಕಾಂಗ್ರೆಸ್ ವಿರುದ್ಧ ಒಗ್ಗೂಡುವ ಸಮಯ ಬಂದಿದೆ. ಅದನ್ನು ಬಿಟ್ಟು ಕೇವಲ ಹೋರಾಟ ಮಾಡುತ್ತಿದ್ದಾರೆ. ಅಲ್ಲದೆ ಆದಷ್ಟು ಬೇಗನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕೂಡ ನೇಮಕ ಆಗಲಿದ್ದು, ರಾಜ್ಯದ ವಿಚಾರವಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುತ್ತೇನೆ ಎಂದು ಹೇಳಿಲ್ಲ ಎಂದೇ ನಾನು ಭಾವಿಸುತ್ತೇನೆ. ಅವರು ಮುಂದಿನ ನಿರ್ಧಾರವನ್ನ ವಿಜಯದಶಮಿ ಬಳಿಕ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಆದರೆ ನಾವು ಯಾರೂ ಬಿಜೆಪಿ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದೂ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications