• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಯಡಿಯೂರಪ್ಪರಿಗೆ ಕೊಡುತ್ತಿರುವ ಹಿಂಸೆ ನೋಡಿದ್ರೆ ಅಯ್ಯೋ ಎನಿಸುತ್ತದೆ!

|

ಬೆಂಗಳೂರು, ಫೆ. 13: ಅಧಿಕಾರ ವಹಿಸಿಕೊಂಡಾಗಿನಿಂದ ಒಂದಿಲ್ಲೊಂದು ಸಮಸ್ಯೆಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಡುತ್ತಿವೆ. ಇದೀಗ ಮತ್ತೊಂದು ಸಮಸ್ಯೆ ಎದುರಾಗಿದ್ದು, ಅದು ಕೂಡ ತಮ್ಮ ಸಮುದಾಯದಿಂದಲೇ ಯಡಿಯೂರಪ್ಪ ಅವರು ಒತ್ತಡ ಅನುಭವಿಸುತ್ತಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲ ತಿಂಗಳುಗಳಲ್ಲಿ ಕೊರೊನಾ ಮಾಹಾಮಾರಿ ಇನ್ನಿಲ್ಲದಂತೆ ಸಿಎಂ ಯಡಿಯೂರಪ್ಪ ಅವರನ್ನು ಕಾಡಿತ್ತು. ಯಾವುದೇ ಸಚಿವರು ಮನೆಯಿಂದ ಹೊರಗೆ ಬರದೇ ಇದ್ದಾಗ ಸಿಎಂ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಸಭೆಗಳನ್ನು ನಡೆಸುವ ಮೂಲಕ ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದರು. ನಿರಂತರ ಸಭೆಗಳಿಂದ ಸಿಎಂ ಯಡಿಯೂರಪ್ಪ ಅವರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರು.

ಕೊರೊನಾ ವೈರಸ್ ಸಂಕಷ್ಟ ಕಡಿಮೆಯಾಗುತ್ತ ಬಂದಿದ್ದರೂ, ಲಾಕ್‌ಡೌನ್‌ನಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ನೆಲೆಕಚ್ಚಿತ್ತು. ಹಣಕಾಸು ಸಚಿವರಾಗಿ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಲು ಯಡಿಯೂರಪ್ಪ ಅವರು ಹೆಣಗಾಡುತ್ತಿರುವಾಗಲೇ ಸಿಎಂ ಎದುರು ಸ್ವಸಮುದಾಯದವರಿಂದಲೇ ಮತ್ತೊಂದು ಒತ್ತಡ ಎದುರಾಗಿದೆ. ಇದೇ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ನೂರಕ್ಕೂ ಹೆಚ್ಚು ಮಠಾಧೀಶರು ಬೃಹತ್ ಸಭೆ ನಡೆಸಿದ್ದು, ಯಡಿಯೂರಪ್ಪ ಅವರ ಎದುರು ಮಹತ್ವದ ಬೇಡಿಕೆ ಇಟ್ಟಿದ್ದಾರೆ.

ವೀರಶೈವ ಲಿಂಗಾಯತ ಮಠಾಧೀಶರ ಬೇಡಿಕೆ

ವೀರಶೈವ ಲಿಂಗಾಯತ ಮಠಾಧೀಶರ ಬೇಡಿಕೆ

ಉಜೈನಿ ಮತ್ತು ಶ್ರೀಶೈಲ‌ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ಬೆಂಗಳೂರಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ರಾಷ್ಟ್ರೀಯ ವೀರಶೈವ ಲಿಂಗಾಯಿತ ಮಠಾಧೀಶರ ಒಕ್ಕೂಟದ ಸಭೆ ನಡೆದಿದ್ದು, ನೂರಕ್ಕೂ ಹೆಚ್ಚು ಮಠಾದೀಶರು ಸಭೆಯಲ್ಲಿ ಭಾಗಿಯಾಗಿದ್ದಾರೆ. ವೀರಶೈವ ಲಿಂಗಾಯಿತ ಅಭಿವೃದ್ದಿ ಮಂಡಳಿ ಅಧ್ಯಕ್ಷ ಪರಮಶಿವಯ್ಯ ಹಾಗು ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಅವರೂ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಮಹತ್ವದ ಬೇಡಿಕೆಯನ್ನು ವೀರಶೈವ ಮಠಾಧೀಶರು ಸರ್ಕಾರದ ಎದುರು ಇಟ್ಟಿದ್ದಾರೆ. ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ವೀರಶೈವ ಲಿಂಗಾಯತ ಸಮುದಾಯದ 104 ಉಪ ಪಂಗಡಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಉಪಪಂಗಡಗಳನ್ನು ಈವರೆಗೂ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಿಲ್ಲ. ಅವುಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿದ ಪರಮಶಿವಯ್ಯ

ಮನವಿ ಸ್ವೀಕರಿಸಿದ ಪರಮಶಿವಯ್ಯ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೈಸೂರು ಪ್ರವಾಸದಲ್ಲಿರುವುದರಿಂದ ಸರ್ಕಾರದ ಪರವಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪರಮಶಿವಯ್ಯ ಅವರು ಮಠಾಧೀಶರ ಮನವಿಯನ್ನು ಸ್ವೀಕರಿಸಿದ್ದಾರೆ. ಅವರ ಬೇಡಿಕೆಗಳನ್ನು ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತರುವುದದಾಗಿ ಪರಮಶಿವಯ್ಯ ಅವರು ಮಠಾಧೀಶರಿಗೆ ಭರವಸೆ ನಿಡಿದ್ದಾರೆ.

ಬಳಿಕ ಮಾತನಾಡಿರುವ ಅವರು, ನಮ್ಮ ನಾಯಕ ಸಿಎಂ ಯಡಿಯೂರಪ್ಪ ಅವರಿಗೆ ಕೊಡುತ್ತಿರುವ ಹಿಂಸೆ ನೋಡಿದರೆ ಯಾರಿಗಾದರೂ ಅಯ್ಯೋ ಎನಿಸುತ್ತದೆ. ಒಂದು ಕಡೆ ಕುರುಬರು ಮತ್ತೊಂದು ಕಡೆ ವಾಲ್ಮೀಕಿಗಳು ಇನ್ನೊಂದು ಕಡೆ ನಾವು ಅವರಿಗೆ ಹಿಂಸೆ ನೀಡುತ್ತಿದ್ದೇವೆ. ಅವರು ಅಂತಹಾ ಹಿಂಸೆಯ ನಡುವೆಯೂ ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದಾರೆ. ಕೊರೊನಾ ಸಂಕಷ್ಟದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ತುಂಬಾ ಕುಸಿದಿದೆ. ಇಂತಹ ಸಂಕಷ್ಟದಲ್ಲಿ ಬಜೆಟ್ ಮಂಡನೆಯ ಸವಾಲು ಅವರ ಮೇಲಿದೆ. ಆದರೂ ಫೆಬ್ರವರಿ 18 ಹಾಗೂ 19 ರಂದು ಪ್ರಮುಖ‌ ಮಠಾದೀಶರ ನಿಯೋಗವನ್ನು ಭೇಟಿ ಮಾಡಿ ಮನವಿ ಸ್ವೀಕರಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ ಎಂದು ಹೇಳಿದ್ದಾರೆ.

ಒಳಪಂಗಡಗಳನ್ನು ಒಬಿಸಿಗೆ ಸೇರಿಸಬೇಕು

ಒಳಪಂಗಡಗಳನ್ನು ಒಬಿಸಿಗೆ ಸೇರಿಸಬೇಕು

ಲಿಂಗಾಯಿತ ಅಭಿವೃದ್ದಿ ಮಂಡಳಿ ಅಧ್ಯಕ್ಷನಾಗಿ ನಾನು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಪರಮಶಿವಯ್ಯ ಹೇಳಿದ್ದಾರೆ. ನಾನೂ ಕೂಡ ಪಂಚಮಸಾಲಿ ಸಮಾಜಕ್ಕೆ ಸೇರಿದವನೇ. ಹಾಗಾಗಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ನಾನು ವಿರೋಧಿಸಲ್ಲ ಸ್ವಾಗತಿಸುತ್ತೇನೆ. ವೀರಶೈವ ಲಿಂಗಾಯಿತರ 106 ಒಳಪಂಗಡಗಳಿಗೆ ಒಬಿಸಿ ಮಾನ್ಯತೆ ನೀಡಿದ್ದಾರೆ. ಹಾಗಾದರೆ ಉಳಿದವರ ಕಥೆ ಏನು? ನಾವು ಕೇಳಬೇಕು. ಕೇಳದೇ ಇದ್ದರೆ ಸರ್ಕಾರ ಕೊಡಲ್ಲ. ಹೀಗಾಗಿ ವೀರಶೈವ ಲಿಂಗಾಯಿತರ ಎಲ್ಲ ಒಳಪಂಗಡಗಳನ್ನು ಒಬಿಸಿಗೆ ಸೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಎಲ್ಲ‌ಪಂಚಪೀಠಾದೀಶ್ವರರು ಹಾಗು ವಿರಕ್ತ ಮಠಗಳ ಪೀಠಾಧೀಶರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಎಲ್ಲ ಒಂದೇ ಎಂದು ತೋರಿಸಲು ಈ ಸಭೆ ಸೇರಿಸಿದ್ದೇವೆ ಎಂದರು.

  ನಿರ್ಮಲ ಸೀತಾರಾಮನ್ ಗೆ ಬಸವಣ್ಣನ ವಚನವನ್ನ ಬಿಡಿಸಿ ಹೇಳಿದ್ದು ಇದೆ ಕಾರಣಕ್ಕೆ | Oneindia Kannada
  ಉಪಸ್ಥಿತರಿದ್ದ ಮಠಾಧೀಶರು

  ಉಪಸ್ಥಿತರಿದ್ದ ಮಠಾಧೀಶರು

  ಶೈಲ ಪೀಠದ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಬಗವತ್ ಪಾದರು, ಉಜೈನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಬಗ್ವದ್ಪಾದರು ಸಧರ್ಮಪೀಠ, ಬಾಲೆ ಹೊಸೂರು ಮಠದ ದಿಂಗಾಲೇಶ್ವ ಸ್ವಾಮೀಜಿ, ಸಿಂದಗಿ ಸಾರಂಗ ಮಠದ ಡಾ. ಪ್ರಭು ಸಾರಂಗ ಶಿವಾಚಾರ್ಯ ಸ್ವಾಮೀಜಿ, ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ಸರ್ಪ ಭೂಶಣ ಮಠದ ಮಲ್ಲಿಕಾರ್ಜುನ ದೇವರು, ವಿಭೂತಿಪುರ ಮಠದ ಡಾ. ಮಾಂತಲಿಂಗ ಶಿವಾಚಾರ್ಯರು, ಶಿವಗಂಗೆ ಗವಿ ಮಠ ಡಾ. ಮಲೆಶಾಂತ ಮುನಿ ಶಿವಾಚಾರ್ಯರು ಸೇರಿದಂತೆ ನೂರಕ್ಕು ಹೆಚ್ಚು ಮಠಾಧೀಶರು ಭಾವಹಿದ್ದರು.

  English summary
  More than a hundred pontiffs in Bengaluru have appealed to CM Yediyurappa to include the Veerashaiva Lingayat community on the reservation list of other backward classes. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X