40ಕ್ಕೂ ಅಧಿಕ ಶಾಸಕರಿಂದ ಯಡಿಯೂರಪ್ಪ ಭೇಟಿ; ಬೇಡಿಕೆ ಏನು?
ಬೆಂಗಳೂರು, ಮಾರ್ಚ್ 23: ಉಪ ಚುನಾವಣೆ ಘೋಷಣೆ, ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಬಿಜೆಪಿಯ 40ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತೆ ಒತ್ತಾಯವನ್ನು ಮಾಡಿದ್ದಾರೆ.
ಸೋಮವಾರ ರಾತ್ರಿ ಬಿ. ಎಸ್. ಯಡಿಯೂರಪ್ಪರನ್ನು ಶಾಸಕರು ಭೇಟಿ ಮಾಡಿದ್ದಾರೆ. 40ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿಗಳ ಜೊತೆ ಸುಧೀರ್ಘ ಮಾತುಕತೆಯನ್ನು ನಡೆಸಿದ್ದಾರೆ. ತಮ್ಮ-ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ಸಿಎಂ ಯಡಿಯೂರಪ್ಪ, ಪುತ್ರನ ಮೇಲೆ ಶಾಸಕ ಯತ್ನಾಳ್ ಮತ್ತೆ ಹಿಗ್ಗಾಮುಗ್ಗಾ ವಾಗ್ದಾಳಿ!
ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ. ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ಉಪ ಚುನಾವಣೆಗಳ ಬಗ್ಗೆಯೂ ಶಾಸಕರ ಜೊತೆ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. 2023ರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮ ವಹಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆ; ಯಡಿಯೂರಪ್ಪ ಸ್ಪಷ್ಟನೆ
ಬಜೆಟ್ ಅಧಿವೇಶನ ನಡೆಯುವಾಗಲೇ ಶಾಸಕರು ಯಡಿಯೂರಪ್ಪ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುವಂತೆಯೂ ಶಾಸಕರು ಮನವಿ ಮಾಡಿದ್ದಾರೆ. ಇದೇ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ಯಡಿಯೂರಪ್ಪ ಬದಲಾವಣೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ!

ಯತ್ನಾಳ್ ವಿರುದ್ಧ ಆಕ್ರೋಶ
ಬಿಜೆಪಿ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಎಚ್ಚರಿಕೆಯನ್ನೂ ಲೆಕ್ಕಿಸದೇ ಅವರು ವಾಗ್ದಾಳಿ ಮುಂದುವರೆಸಿದ್ದಾರೆ. ಪರಿಸ್ಥಿತಿ ಸುಧಾರಿಸದಿದ್ದರೆ ವರಿಷ್ಠರಿಗೆ ದೂರು ನೀಡುತ್ತೇವೆ ಎಂದು ಶಾಸಕರು ಹೇಳಿದ್ದಾರೆ.

ಪಕ್ಷಕ್ಕೆ ಮುಜುಗರ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದೆ. ವಿರೋಧ ಪಕ್ಷಗಳು ಸಹ ಇದನ್ನು ಅಸ್ತ್ರವಾಗಿ ಮಾಡಿಕೊಂಡಿವೆ. ಅವರ ಹೇಳಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಸಚಿವರ ಕೈಗೆ ಸಿಗುತ್ತಿಲ್ಲ
ಕೆಲವು ಸಚಿವರು ಶಾಸಕರ ಕೈಗೆ ಸಿಗುತ್ತಿಲ್ಲ ಎಂದು ಶಾಸಕರು ದೂರು ನೀಡಿದ್ದಾರೆ. ಸಚಿವರು ಶಾಸಕರ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳ ಬಗ್ಗೆ ಗಮನಹರಿಸುತ್ತಿಲ್ಲ. ಸಚಿವರು ಕಾರ್ಯವೈಖರಿ ತಿದ್ದಿಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಾಸಕಾಂಗ ಪಕ್ಷದ ಸಭೆ
ಕೆಲವು ಸಚಿವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಲು ಆಗ್ರಹಿಸಿದ್ದಾರೆ. ಯಡಿಯೂರಪ್ಪ ಅವರು ಸಚಿವರು ಮತ್ತು ಶಾಸಕರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ಶಾಸಕರಿಗೆ ಕೊಟ್ಟಿದ್ದಾರೆ.