Karnataka Poll 2023: ಕಳೆದೊಂದು ಗಂಟೆಯಲ್ಲಿ ವೃದ್ಧರಿಂದಲೇ ಅತ್ಯಧಿಕ ಮತದಾನ
ಬೆಂಗಳೂರು, ಮೇ 10: ಕರ್ನಾಟಕ ರಾಜ್ಯ ಚುನಾವಣೆಗೆ ಇಂದು ಬುಧವಾರ ಮೇ 10ರಂದು ಬೆಳಗ್ಗೆ 7ಗಂಟೆಯಿಂದಲೇ ಮತದಾನ ನಡೆಯುತ್ತಿದೆ. ಕಳೆದ ಒಂದೇ (7am- 8am) ಗಂಟೆಯಲ್ಲಿ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆದಿದೆ. ವಿಶೇಷ ವೆಂದರೆ ಮತದಾನ ಮಾಡಿದವರಲ್ಲಿ ಹಿರಿಯ ನಾಗರಿಕರ ಸಂಖ್ಯೆಯೇ ಅತ್ಯಧಿಕವಾಗಿದೆ.
ಒಂದು ಗಂಟೆಯಲ್ಲಿ ರಾಜ್ಯಾದ್ಯಂತ ಸುಮಾರು 11,000ಕ್ಕೂ ಹೆಚ್ಚು ಮಂದಿ ಯುವ ಮತದಾರರು ಮತದಾನ ಮಾಡಿದ್ದಾರೆ. ಸುಮಾರು 15,000ದಷ್ಟು ವೃದ್ಧರು ಮತ ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ಳಂಬೆಳಗ್ಗೆಯೇ ಹಿರಿಯ ನಾಗರಿಕರು ಮತದಾನ ಮಾಡುವ ಮೂಲಕ ಯುವ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆ. ವಿಜಯನಗರದಲ್ಲಿ ವೃದ್ಧರೊಬ್ಬರು ಕಳೆದ 55ವರ್ಷಗಳಿಂದ ಮತಗಟ್ಟೆ ತೆರೆಯುತ್ತಿದ್ದಂತೆ ಮೊದಲ ವೋಟ್ ತಾವೇ ಹಾಕುತ್ತಾ ಬಂದಿದ್ದು, ಇವತ್ತು ಸಹ ಮತದಾನ ಮಾಡಿದ ವ್ಯಕ್ತಿ ಅವರೇ ಆಗಿದ್ದಾರೆ.
ಬಳ್ಳಾರಿ ಮತ್ತು ಕೊಪ್ಪಳ್ಳದಲ್ಲಿ ಮತದಾನ ಆರಂಭವಾದ ಕೆಲವು ನಿಮಿಷಗಳಲ್ಲಿ ಮತಯಂತ್ರಗಳು ಕೈ ಕೊಟ್ಟವು. ಅಧಿಕಾರಿಗಳು ಮತದಾರರಲ್ಲಿ ಸಹಕರಿಸುವಂತೆ ಮನವಿ ಮಾಡಿದರು. ಆದಷ್ಟು ಶೀಘ್ರವೇ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದರು. ಪರ್ಯಾಯ ಮತ ಯಂತ್ರಕ್ಕೂ ವ್ಯವಸ್ಥೆ ಮಾಡಲಾಯಿತು.

ಬಿರುಸಿನ ಮತದಾನ: ಎಂ.ಕೃಷ್ಣಪ್ಪ ನಡೆಗೆ ಜನ ಗರಂ
ಬೆಂಗಳೂರಿನ ವಿವಿಧೆಡೆ ಹಿರಿಯ ನಾಗರಿಕರ ಜೊತೆಗೆ ಚಿತ್ರರಂಗ ಕಲಾವಿದರು ಮತ ಚಲಾಯಿಸಿದ್ದಾರೆ. ಮಠಾಧೀಶರಾದ ಹರಿಹರದ ವಚನಾನಂದ ಶ್ರೀ, ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರಿ ಅವರು ಮತದಾನ ಮಾಡಿದ್ದಾರೆ. ಅಲ್ಲದೇ ರಾಜಕೀಯ ನಾಯಕರಾದ ಬಿ.ಎಸ್.ಯಡಿಯೂರಪ್ಪನವರ ಕುಟುಂಬ, ಡಾ.ಕೆ ಸುಧಾಕರ್, ಎಂ.ಕೃಷ್ಣಪ್ಪ ಇನ್ನಿತರರು ಸಹ ಕುಟುಂಬ ಸಮೇತರಾಗಿ ಬಂದು ಮತ ಹಾಕಿದ್ದಾರೆ. ಕೆಲವು ಮತದಾನಕ್ಕೂ ಮೊದಲು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನ ಪದ್ಮನಾಭನಗರದಲ್ಲಿ ನಾಯಕ ಎಂ.ಕೃಷ್ಣಪ್ಪ ಅವರು ಸ್ವಕ್ಷೇತ್ರಕ್ಕೆ ತೆರಳಬೇಕು ಎಂಬ ಕಾರಣಕ್ಕೆ ಸರತಿ ಸಾಲಿನಲ್ಲಿ ನಿಲ್ಲದೇ ಬಂದು ಮತದಾನ ಮಾಡಿದ್ದಾರೆ. ಇದರಿಂದ ಕೆಲವು ಮತದಾರರು ಕಿರಿಕಿರಿ ಅನುಭವಿಸಿದ್ದಾರೆ. ಜನಪ್ರತಿನಿಧಿಯಾದ ನೀವೆ ಜನರಿಗೆ ಸಹಕರಿಸದಿದ್ದರೇ ಹೇಗೆ ಎಂದು ಎಂ.ಕೃಷ್ಣಪ್ಪ ಅವರ ನಡೆಗೆ ಗರಂ ಆಗಿದ್ದಾರೆ. ನಂತರ ಸ್ಥಳದಲ್ಲಿದ್ದ ಅಧಿಕಾರಿ, ಪೊಲೀಸ್ ಸಿಬ್ಬಂದಿ ಎಲ್ಲವನ್ನು ಶಾಂತಗೊಳಿಸಿದ್ದಾರೆ.












Click it and Unblock the Notifications