ಇನ್ನಷ್ಟು ಶಾಸಕರು ರಾಜೀನಾಮೆ ಸಾಧ್ಯತೆ: ಇಲ್ಲಿದೆ ಪಟ್ಟಿ
ಬೆಂಗಳೂರು, ಜುಲೈ 08: ಈಗಾಗಲೇ 14 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಸರ್ಕಾರ ಈಗಾಗಲೇ ಅಲ್ಪ ಮತಕ್ಕೆ ಕುಸಿದಿದೆ. ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಮೈತ್ರಿ ಪಕ್ಷ, ಕೈಬಿಟ್ಟುಹೋಗಿರುವ ಶಾಸಕರನ್ನು ಕರೆತರುವ ಜೊತೆಗೆ ಇನ್ನಷ್ಟು ಶಾಸಕರು ಕೈಬಿಟ್ಟು ಹೋಗಬಾರದು ಎಂದು ಎಚ್ಚರಿಕೆ ವಹಿಸುತ್ತಿದ್ದಾರೆ.
14 ಶಾಸಕರ ಬಲ ಬಿಜೆಪಿ ಪ್ರಸ್ತುತ ಸಾಕಾಗಿದೆಯಾದರೂ ಬಿಜೆಪಿ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವಂತಿಲ್ಲ. ಹಾಗಾಗಿ ಇನ್ನೂ ಕೆಲವು ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿ ಸರ್ವ ತಯಾರಿ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲವು ಶಾಸಕರ ಮೇಲೆ ತೀವ್ರ ನಿಗಾ ಇಟ್ಟಿದೆ.
ಬಿಜೆಪಿಯು ಇನ್ನೂ ಕೆಲವು ಅತೃಪ್ತ ಶಾಸಕರಿಗಾಗಿ ಗಾಳ ಹಾಕಿದ್ದು, ಶಾಸಕರ ಸೆಳೆಯುವ ಕಾರ್ಯ ಮುಂದುವರೆಸಿದೆ. ಇಂದು ಸಚಿವ ನಾಗೇಶ್ ರಾಜೀನಾಮೆ ನೀಡಿ, ಮುಂಬೈಗೆ ಹಾರಿದ್ದಾರೆ, ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಅತ್ಯಂತ ಎಚ್ಚರಿಕೆಯಿಂದ ಇವೆ.
ರಾಜೀನಾಮೆ ನೀಡಬಹುದಾದ ಶಾಸಕರ ಪಟ್ಟಿ ಇಲ್ಲಿದೆ.....

ಅಪ್ಪನ ಹಾದಿ ಹಿಡಿವರೇ ಶಾಸಕಿ ಸೌಮ್ಯಾ ರೆಡ್ಡಿ
ರಾಮಲಿಂಗಾ ರೆಡ್ಡಿ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ, ತಂದೆಗೆ ಸಚಿವ ಸ್ಥಾನ ಸಿಗದ ಬಗ್ಗೆ ಈ ಹಿಂದೆಯೇ ಅಸಮಾಧಾನ ಹೊರಹಾಕಿದ್ದ ಮಗಳು, ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಸಹ ತಂದೆಯ ಹಾದಿಯನ್ನೇ ಹಿಡಿಯಬಹುದು ಎಂಬ ಅನುಮಾನ ಇವೆ.

ಸಚಿವ ಆರ್.ಶಂಕರ್ ರಾಜೀನಾಮೆ ನೀಡುವ ಸಾಧ್ಯತೆ
ಕೆಪಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದ ಆರ್.ಶಂಕರ್ ಈಗಾಗಲೇ ಒಮ್ಮೆ ಬಿಜೆಪಿಗೆ ಹೋಗಿ ಮರಳಿ ಬಂದು ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿ ಸಚಿವರಾಗಿದ್ದಾರೆ. ಆದರೆ ಅವರೂ ಸಹ ರಾಜೀನಾಮೆ ನೀಡುವ ಅಥವಾ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಒಬ್ಬ ಪಕ್ಷೇತರ ಶಾಸಕ ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಪಕ್ಷೇತರರಾಗಿ ಗುರಿತಿಸಿಕೊಂಡಿದ್ದ ಇವರೂ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ರಮೇಶ್ ಜಾರಕಿಹೊಳಿ ಬಣದ ಬಳ್ಳಾರಿ ಶಾಸಕ ಬಿ.ನಾಗೇಂದ್ರ
ಬಳ್ಳಾರಿ ಶಾಸಕ ಬಿ.ನಾಗೇಂದ್ರ ರಮೇಶ್ ಜಾರಕಿಹೊಳಿ ಬಣದಲ್ಲಿ ಕಾಣಿಸಿಕೊಂಡಿದ್ದರು, ಈ ಹಿಂದೆಯೂ ಒಮ್ಮೆ ಮುಂಬೈಗೆ ಹೋಗಿ ವಾಪಸ್ಸಾಗಿದ್ದರು, ಅವರು ಅತೃಪ್ತರ ಬಣದಲ್ಲಿ ಇರುವವರೇ ಹಾಗಾಗಿ ಅವರೂ ರಾಜೀನಾಮೆ ನೀಡುವ ಆತಂಕ ಇದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಅವರ ಮೇಲೆ ಕಣ್ಣಿಟ್ಟಿದೆ.

ಶಿವಾಜಿನಗರ ಶಾಸಕ ರೋಷನ್ ಬೇಗ್ ರಿಂದ ಬೆಂಬಲ ವಾಪಸ್?
ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ರೋಷನ್ ಬೇಗ್ ಅವರು ರಾಜೀನಾಮೆ ನೀಡುವ ಸಾಧ್ಯತೆ ಇಲ್ಲವಾದರೂ, ಅವರು ಬಿಜೆಪಿಗೆ ಬೆಂಬಲ ಘೋಷಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿತ್ತು.

ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದ ಶಾಸಕ ಸುಧಾಕರ್
ಮೈತ್ರಿ ಸರ್ಕಾರ ಆರಂಭವಾದಾಗಿನಿಂದಲೂ ಜೆಡಿಎಸ್ ಮತ್ತು ಕುಮಾರಸ್ವಾಮಿ ಮೇಲೆ ಅಸಮಾಧಾನ ಹೊರಹಾಕುತ್ತಲೇ ಇರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರೂ ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸುಧಾಕರ್ ಅವರು ಸಚಿವ ಸ್ಥಾನ ಸಿಗದೇ ಇದ್ದದ್ದಕ್ಕೆ ಅಸಮಾಧಾನಗೊಂಡು ಅತೃಪ್ತ ಬಣ ಸೇರಿದ್ದರು. ಈಗಲೂ ಅವರ ಅತೃಪ್ತಿ ಕಡಿಮೆ ಆಗಿಲ್ಲ.

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್
ಭೀಮಾನಾಯ್ಕ್ ಅವರು ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು ಆದರೆ ಅವರಿಗೆ ಅವಕಾಶ ದೊರೆತಿರಲಿಲ್ಲ, ಇದರ ಬಗ್ಗೆ ಅಸಮಾಧಾನ ಹೊಂದಿದ್ದರು, ಹಾಗಾಗಿ ಅವರು ಸಹ ರಾಜೀನಾಮೆಗೆ ಯತ್ನಿಸುವ ಸಾಧ್ಯತೆ ಇದೆ.

ಕಂಪ್ಲಿ ಶಾಸಕ ಗಣೇಶ್ ಮೇಲೆ ಕಾಂಗ್ರೆಸ್ ತೀವ್ರ ನಿಗಾ
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿ ಈಗ ಜಾಮೀನಿನ ಮೇಲೆ ಹೊರಗಿರುವ ಕಂಪ್ಲಿ ಶಾಸಕ ಗಣೇಶ್ ಅವರ ಮೇಲೂ ಕಾಂಗ್ರೆಸ್ ನಿಗಾ ವಹಿಸಿದೆ. ಅವರನ್ನು ಕಾಂಗ್ರೆಸ್‌ಗೆ ಪುನಃ ಸೇರಿಸಿಕೊಳ್ಳಲಾಗಿದೆಯಾದರೂ, ಅವರ ಬಗ್ಗೆ ಕಾಂಗ್ರೆಸ್‌ಗೆ ಅನುಮಾನ ಇಲ್ಲದೇ ಇಲ್ಲ.

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮೇಲೆ ಡಿಕೆಶಿ ನಿಗಾ
ಶಿಢ್ಲಘಟ್ಟ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ ಅವರೂ ಸಹ ಸಚಿವ ಸ್ಥಾನಕ್ಕಾಗಿ ಯತ್ನಿಸಿದ್ದರು, ಆದರೆ ಅವರನ್ನು ಸಿಎಂ ಅವರು ರಾಜಕೀಯ ಕಾರ್ಯದರ್ಶಿ ಆಗಿ ನೇಮಿಸಲಾಯಿತು. ಅವರೂ ಸಹ ರಾಜೀನಾಮೆ ನೀಡುವ ಸಾಧ್ಯತೆ ಇರುವ ಕಾರಣ ಅವರನ್ನು ಈಗಾಗಲೇ ಡಿ.ಕೆ.ಶಿವಕುಮಾರ್ ಅವರು ತಮ್ಮ ಸುಪರ್ಧಿಗೆ ಪಡೆದಿದ್ದು, ಎರಡು ದಿನಗಳಿಂದಲೂ ಮುನಿಯಪ್ಪ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗೇ ಇದ್ದಾರೆ.











Click it and Unblock the Notifications