ಮುಂದಿನ 168 ಗಂಟೆ ಭರ್ಜರಿ ಮಳೆ, ಯಾವ ಯಾವ ಜಿಲ್ಲೆಗಳಲ್ಲಿ ಆತಂಕ?
ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಬಲು ಜೋರಾಗಿದ್ದು, ಭರ್ಜರಿಯಾಗಿ ಮಳೆ ಬೀಳ್ತಿದೆ. ಎಲ್ಲೆಲ್ಲೂ ಮಳೆಯ ಬಗ್ಗೆಯೇ ಮಾತುಕತೆ ನಡೆಯುತ್ತಿದೆ. ಇಷ್ಟುದಿನ ಒಣಗಿ ಹೋಗುತ್ತಿದ್ದ, ಕರ್ನಾಟಕದ ಜಲಾಶಯಗಳಿಗೆ ಇದೀಗ ಭರ್ಜರಿ ನೀರು ಹರಿದು ಬರುತ್ತಿದೆ. ಬತ್ತಿ ಹೋಗಿದ್ದ ನದಿಗಳು ಈಗ ಮೈದುಂಬಿ ಹರಿಯುತ್ತಿವೆ. ಹೀಗಿದ್ದಾಗಲೇ ಮುಂದಿನ 168 ಗಂಟೆ ಕಾಲ ಅಂದ್ರೆ ಬರೋಬ್ಬರಿ 7 ದಿನ ಕಾಲ ನಿರಂತರವಾಗಿ ಭಾರಿ ಮಳೆ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಹಾಗಿದ್ರೆ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು? ಮುಂದೆ ಓದಿ.
ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಮುತ್ತಿಗೆ ಹಾಕಿದ್ದು, ಕರಾವಳಿ & ಮಲೆನಾಡು ಭಾಗ ಈಗ ತೊಯ್ದು ಹೋಗಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವಾಗ ಜನರು ಕೂಡ ಕಂಗಾಲಾಗಿದ್ದಾರೆ. ಜನಜೀವನ ಭಾರಿ ಮಳೆಗೆ ಅಸ್ತವ್ಯಸ್ತವಾಗಿ ಹೊಗಿದೆ. ಈ ಸಮಯದಲ್ಲೇ ಮಳೆ ನಿಲ್ಲಬಹುದು ಅಂತಾ ಕಾಯುತ್ತಿದ್ದ ಜನರಿಗೆ ಇದೀಗ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಭರ್ಜರಿ ಮಳೆ ಸುರಿಯಲಿದೆ? ಆ ಬಗ್ಗೆ ಮಾಹಿತಿ ತಿಳಿಯೋಣ ಮುಂದೆ ಓದಿ.

ಮಳೆ.. ಮಳೆ.. ಭರ್ಜರಿ ಮಳೆ!
ಹವಾಮಾನ ಇಲಾಖೆ ಈಗ ಕರಾವಳಿ ಕರ್ನಾಟಕ ಸೇರಿದಂತೆ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆ ನೀಡಿದೆ. ಒಂದಲ್ಲ.. ಎರಡಲ್ಲ ಬರೋಬ್ಬರಿ 7 ದಿನ ನಿರಂತರವಾಗಿ ಕರಾವಳಿ & ಮಲೆನಾಡು ಭಾಗದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಸಮಯದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 1 ವಾರ ಇಲ್ಲೆಲ್ಲಾ ಭಾರಿ ಮಳೆ ಬೀಳುವ ಎಚ್ಚರಕೆ ನೀಡಲಾಗಿದೆ.
ಮಹಾರಾಷ್ಟ್ರದ ಮಹಾ ಅನ್ಯಾಯ?
ಹೌದು, ಮಹಾರಾಷ್ಟ್ರ ರಾಜ್ಯ ಪದೇ ಪದೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ತನ್ನ ಬಳಿ ನೀರು ಇದ್ದರೂ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಕೂಡ ಆಟ ಆಡಿಸುವ ಮಹಾರಾಷ್ಟ್ರ ರಾಜ್ಯ, ಮಳೆ ಶುರುವಾದ ತಕ್ಷಣ ಬೆಚ್ಚಿಬಿದ್ದು ತನ್ನ ಡ್ಯಾಂಗಳಿಂದ ನೀರನ್ನು ಹೊರಗೆ ಬಿಡುತ್ತದೆ. ಯಾಕಂದ್ರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮುಂಗಾರು ಮಳೆಯ ಅಬ್ಬರ ಬಲು ಜೋರಾಗಿ ಇರುತ್ತೆ, ಹೀಗಾಗಿ ಅಲ್ಲಿನ ಡ್ಯಾಂಗಳು ಬೇಗ ತುಂಬಿಕೊಳ್ಳುತ್ತವೆ. ಈ ಕಾರಣಕ್ಕೆ ಕರ್ನಾಟಕ ಹಲವು ಬಾರಿ ಮನವಿ ಮಾಡಿದರೂ ಮತ್ತೆ ಮತ್ತೆ ಅದೇ ಕೃತ್ಯ ಎಸಗಿ ವಿಕೃತಿ ಮೆರೆಯುತ್ತಿರುವ ಮಹಾರಾಷ್ಟ್ರ ರಾಜಕಾರಣಿಗಳು ಈಗ ಮತ್ತೆ ಅದನ್ನೇ ಮಾಡಿದ್ದಾರೆ.
ಮುಳುಗಿ ಹೋಗುತ್ತಿವೆ ಸೇತುವೆಗಳು!
ಅಷ್ಟಕ್ಕೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಮತ್ತು ಮಹಾರಾಷ್ಟ್ರ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನ ಹೊರಗೆ ಬಿಡುತ್ತಿರುವ ಕಾರಣ ಇದೀಗ ಕೃಷ್ಣ ನದಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದು ಕರ್ನಾಟಕದ ಎರಡು ಸೇತುವೆ ಮುಳುಗಡೆ ಆಗಿವೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ & ಬಾವನ ಸೌದತ್ತಿಯಲ್ಲಿ ಎರಡು ಹಳೆಯ ಸೇತುವೆ ಮುಳುಗಡೆ ಆಗಿವೆ. ಈಗಾಗಲೇ ಕೃಷ್ಣ ನದಿ ನೀರಿನ ಒಳ ಹರಿವಿನಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗಿದ್ದು, ಬರದ ಬವಣೆಗೆ ಬೇಸತ್ತ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಮಹಾರಾಷ್ಟ್ರದ ಎಡವಟ್ಟು ಈಗ ಪ್ರವಾಹ ಸೃಷ್ಟಿಸುವ ಭಯವೂ ಕಾಡ್ತಾ ಇದೆ.
ನೀರಿನ ಕೊರತೆಗೆ ಸಿಕ್ಕಿತಾ ಮುಕ್ತಿ?
ರಾಜಧಾನಿ ಬೆಂಗಳೂರು ಸೇರಿದಂತೆ ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಸೇರಿ ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ ಜಿಲ್ಲೆಯ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಆಗಲಿದೆ. ಈ ಮೂಲಕ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಇದೀಗ ನೀರಿನ ಕೊರತೆ ನೀಗುವ ನಿರೀಕ್ಷೆ ಇದೆ.












Click it and Unblock the Notifications