ಕೊಡಗಿಗೆ ಬಲಗಾಲಿಟ್ಟು ಪ್ರವೇಶಿಸಿದ ಮುಂಗಾರು ಮಳೆ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜೂನ್ 10 : ಕೊಡಗಿನಲ್ಲಿ ಮುಂಗಾರು ಮಳೆ ಬಲಗಾಲಿಟ್ಟು ಪ್ರವೇಶಿಸಿದೆ. ಭಾರೀ ಅಲ್ಲದಿದ್ದರೂ ಜಿಲ್ಲೆಯ ಎಲ್ಲೆಡೆಯಲ್ಲಿ ಮಳೆಯಾಗುತ್ತಿದ್ದು, ಬೇಸಿಗೆಯಲ್ಲಿ ತತ್ತರಿಸಿದ್ದ ರೈತಾಪಿ ಜನರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ಮುಳುಗಿರುವುದು ಎಲ್ಲೆಡೆಯೂ ಕಂಡುಬರುತ್ತಿದೆ.

ಈ ಬಾರಿ ಬೇಸಿಗೆಯಲ್ಲಿ ಮಳೆ ಬಾರದೆ ಬೆಳೆಗಾರರು ಕಂಗಾಲಾಗಿದ್ದರು. ಕೆರೆಕಟ್ಟೆಗಳು ಒಣಗಿದ್ದವು, ಬೆಳೆಗಳು ಬಾಡಿದ್ದವು. ಆದರೆ ಇದೀಗ ಮಳೆ ಆರಂಭವಾಗಿರುವುದರಿಂದ ಕಾಫಿ ತೋಟಗಳಿಗೆ ಗೊಬ್ಬರ ಹಾಕುವುದು, ಭತ್ತದ ಗದ್ದೆ ಉಳುಮೆ ಮಾಡುವುದು ಜಿಲ್ಲೆಯಾದ್ಯಂತ ಭರದಿಂದ ಸಾಗಿದೆ.

Monsoon enters Karnataka through Madikeri

ಇದುವರೆಗೆ ಕಂಡು ಬಾರದಷ್ಟು ಉಷ್ಣಾಂಶ ಈ ವರ್ಷ ಕಂಡು ಬಂದಿತ್ತು. ಇದು ಒಂದು ರೀತಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮಳೆಗಾಲದ ವಾತಾವರಣ ಕಂಡು ಬಂದಿರುವುದರಿಂದ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಾರ್ವಜನಿಕರು ಕೂಡ ಮಳೆಗಾಲವನ್ನು ಸಂತಸದಿಂದ ಸ್ವಾಗತಿಸಿದ್ದಾರೆ.

ಶುಕ್ರವಾರ ಜಿಲ್ಲೆಯಲ್ಲಿ 18.39 ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 241.17 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 396.18 ಮಿ.ಮೀ ಮಳೆಯಾಗಿತ್ತು.

Monsoon enters Karnataka through Madikeri

ಮಡಿಕೇರಿ ತಾಲೂಕಿನಲ್ಲಿ ಶುಕ್ರವಾರ ಮಳೆ 30.85 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಮಳೆ 14.82 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಮಳೆ 9.5 ಮಿ.ಮೀ ಸುರಿದಿದೆ.
Monsoon enters Karnataka through Madikeri

ಗರಿಷ್ಠ 2,859 ಅಡಿಯಿರುವ ಹಾರಂಗಿ ಜಲಾಶಯದಲ್ಲಿ ಶುಕ್ರವಾರ ನೀರಿನ ಮಟ್ಟ 2,797.77 ಅಡಿಯಿದೆ. ಕಳೆದ ವರ್ಷ ಇದೇ ದಿನ 2,805.48 ಅಡಿಯಷ್ಟು ನೀರಿತ್ತು. ಜಲಾಶಯದ ನೀರಿನ ಒಳ ಹರಿವು 308 ಕ್ಯೂಸೆಕ್ಸ್‌ನಷ್ಟಿದೆ. ಒಟ್ಟಾರೆ ಕೊಡಗಿನಲ್ಲಿ ಮುಂಗಾರು ಚೇತರಿಕೆ ಕಾಣುತ್ತಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.
Monsoon enters Karnataka through Madikeri

ಮಡಿಕೇರಿಯಲ್ಲಿ ಜಿಟಿಜಿಟಿ ಮಳೆ ಮತ್ತು ಮುಂಜಾನೆಯ ಮಂಜಿನ ಮುಸುಕು ಸ್ವರ್ಗಲೋಕವನ್ನು ಸೃಷ್ಟಿಸಿದ ಅನುಭವ ನೀಡುತ್ತಿದೆ. ಇಡೀ ನಿಸರ್ಗವನ್ನು ಅಪ್ಪಿಕೊಳ್ಳುವ ಮೂಲಕ ಮಂಜಿನ ಸಾಗರವನ್ನೇ ನೋಡುಗರ ಮುಂದಿಡುತ್ತಿದೆ. ಹೀಗಾಗಿ ಸುಂದರ ದೃಶ್ಯವನ್ನು ನೋಡುವ ಸಲುವಾಗಿ ಪ್ರವಾಸಿಗರು ಕೂಡ ದೌಡಾಯಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South-West monsoon has entered Karnataka officially through Madikeri (Coorg). It is raining all over the district inducing farmers to indulge in agricultural activities. The rain has brought much needed relief to the public, who had seen severe summer.
Please Wait while comments are loading...