ಕರ್ನಾಟಕದಲ್ಲಿ ಇಂದಿನಿಂದ ಮುಂಗಾರು ಚುರುಕು:ಬಹುತೇಕ ಜಿಲ್ಲೆಗಳಲ್ಲಿ ಮಳೆ
ಬೆಂಗಳೂರು, ಜೂನ್ 7: ಕರ್ನಾಟಕದಲ್ಲಿ ಇಂದಿನಿಂದ ಮುಂಗಾರು ಚುರುಕುಗೊಳ್ಳಲಿದೆ. ಗುರುವಾರ ಶುಕ್ರವಾರ ಕೊಂಚ ಬಿಡುವು ಪಡೆದಿದ್ದ ಮಳೆ ಶನಿವಾರ ಅಬ್ಬರಿಸಿತ್ತು. ಭಾನುವಾರದಿಂದ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ.
ಬೆಂಗಳೂರು ದಕ್ಷಿಣ ಭಾಗದಲ್ಲಿ ಸಾಮಾನ್ಯ ಮಳೆಯಾದರೆ , ರಾಜರಾಜೇಶ್ವರಿನಗರ ಭಾಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಜಯನಗರದಲ್ಲಿ ನಾಲ್ಕು ಮರಗಳು ಧರೆಗುರುಳಿವೆ.
ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ರಾಜರಾಜೇಶ್ವರಿನಗರ ಪ್ರದೇಶದಲ್ಲಿ ಎರಡು ಕಡೆ ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿತ್ತು. ಯಾವುದೇ ಅಪಾಯವಾಗಿಲ್ಲ ಎಂದು ಬಿಬಿಎಂಪಿ ಹೇಳಿದೆ. ಜೂನ್ 7ರಿಂದ ರಾಜ್ಯದಲ್ಲಿ ಮಳೆ ಚುರುಕಾದರೂ ಜೂನ್ 9ರಿಂದ ಹೆಚ್ಚು ಮಳೆಯಾಗಲಿದೆ.

ಒಂದು ತಿಂಗಳ ಮುಂಚೆಯೇ ಮೈದುಂಬುತ್ತಿರುವ ಕೃಷ್ಣೆ
ಈ ವರ್ಷ 1 ತಿಂಗಳು ಮುಂಚಿತವಾಗಿಯೇ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರ ಪರಿಣಾಮಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ನೀರು ಬರುತ್ತಿದೆ. ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಜೊತೆಗೆ ಹಿಪ್ಪರಗಿ ಜಲಾಶಯದಿಂದಲೂ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಜೂನ್ 9ರ ಬಳಿಕ ಹೆಚ್ಚು ಮಳೆ
ನೈಋತ್ಯ ಮುಂಗಾರು ಆಗಮಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಜೂನ್ 9ರ ಬಳಿಕ ಬಿರುಸುಗೊಳ್ಳಲಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಜೂನ್ 4ರಂದೇ ಕರಾವಳಿಗೆ ಆಗಮಿಸಿರುವ ಮುಂಗಾರು ಸದ್ಯ ದಕ್ಷಿಣ ಒಳನಾಡನ್ನು ಆವರಿಸಿದೆ. ಮೈಸೂರು ನಗರದಲ್ಲಿ ಶನಿವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಂಡ್ಯದ ಕೆಲವೆಡೆ ತುಂತುರು, ಕೊಡಗಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?
ಕೆಂಗೇರಿ 72ಮಿ.ಮೀ, ಕೊಡಿಗೇಹಳ್ಳಿ 61 ಮಿ.ಮೀ, ಜ್ಞಾನಭಾರತಿ 60 ಮಿ.ಮೀ, ನಾಗರಬಾವಿ 48 ಮಿ.ಮೀ, ಪರಪ್ಪನ ಅಗ್ರಹಾರ 41 ಮಿ.ಮೀ, ಬೇಗೂರು 40 ಮಿ.ಮೀ, ಆರ್‌ಆರ್ ನಗರ 40 ಮಿ.ಮೀ, ಹಂಪಿನಗರ 40 ಮಿ.ಮೀ, ಗಾಳಿ ಆಂಜನೇಯ ದೇವಸ್ಥಾನದ ಬಳಿ 37 ಮಿ.ಮೀ, ಹೆಬ್ಬಗೋಡಿ 28 ಮಿ.ಮೀ, ಸಾರಕ್ಕಿ 28 ಮಿ.ಮೀ, ಚಾಮರಾಜಪೇಟೆ 21 ಮಿ.ಮೀ, ಉತ್ತರಹಳ್ಳಿ 18 ಮಿ.ಮೀ ಮಳೆಯಾಗಿದೆ.

ಜೂನ್ 7ರಿಂದ ಎಲ್ಲೆಲ್ಲಿ ಮಳೆ ಹೆಚ್ಚು?
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಡಗು, ಕೋಲಾರ, ಮಂಡ್ಯ, ತುಮಕೂರು, ರಾಮನಗರ, ಮೈಸೂರು, ಹಾಸನ, ಕೊಪ್ಪಳ, ಹಾವೇರಿ, ಗದಗ, ಧಾರವಾಡದಲ್ಲಿ ಹೆಚ್ಚು ಮಳೆ ಬೀಳಲಿದೆ.
ಬೀದರ್,ರಾಯಚೂರು,ಯಾದಗಿರಿ, ಬಳ್ಳಾರಿಯಲ್ಲಿ ಒಣಹವೆ ಮುಂದುವರೆಯಲಿದೆ.