ಚುನಾವಣೆ ಬರುತ್ತಿದ್ದಂತೆ ಪ್ರಧಾನಿ ಮೋದಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು,ಜನವರಿ 19: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಿರುವ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಸಂಪ್ರದಾಯದಂತೆ ಕರ್ನಾಟಕ ನೆನಪಾಗಿದೆ. ಹೀಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೋದಿಯವರು ರಾಜ್ಯದ ಕಡೆ ಮುಖ ಮಾಡುವ ವೇಳೆಗೆ ಬಿಜೆಪಿಯ ಸುಳ್ಳಿನ ಕಾರ್ಖಾನೆಯ ಕಾರ್ಮಿಕರು ಸುಳ್ಳುಗಳ ಉತ್ಪಾದನೆಯಲ್ಲಿ ಬಿರುಸಾಗಿದ್ದಾರೆ ಎಂದು ತಿಳಿಸಿದ್ದಾರೆ. ದೇಶದ ಆರ್ಥಿಕತೆ ಕುಸಿದಿರುವುದು, ಹಣದುಬ್ಬರ ಸೇರಿದಂತೆ ಪ್ರಧಾನಿ ಮೋದಿ ಅವರು ಆಡಳಿತಾತ್ಮಕವಾಗಿ ದೇಶವನ್ನು ಸೋಲಿಸಿದ್ದಾರೆ. ದೇಶದ ಜನ ಎರಡು ಬಾರಿ ಕೊಟ್ಟ ಬಹುಮತಕ್ಕೆ ಅನ್ಯಾಯ, ಅವಮಾನ ಮಾಡಿರುವ ಕೇಂದ್ರ ಸರ್ಕಾರ ತಮಗೆ ಮತ ಹಾಕಿದವರ ಬದುಕನ್ನೂ ಹೈರಾಣ ಮಾಡಿಟ್ಟು ಕೇವಲ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿಸುವ ಸುಳ್ಳಿನ ಆಧಾರದಲ್ಲಿ ತನ್ನ ಸಂಪ್ರದಾಯದಂತೆ ಜನರನ್ನು ಬಕ್ರಾ ಮಾಡಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದೆ.
ದೇಶದ ವಿದೇಶಿ ಸಾಲ 2013-14ರಲ್ಲಿ 409.4 ಬಿಲಿಯನ್ ಡಾಲರುಗಳಷ್ಟಿತ್ತು. 2014ರ ಮೇನಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 58 ರೂಪಾಯಿಗಳಷ್ಟಿತ್ತು. ಹಾಗಾಗಿ ಅಂದು 23.74 ಲಕ್ಷ ಕೋಟಿಗಳಷ್ಟು ವಿದೇಶಿ ಸಾಲ ಇತ್ತು. 2022ರ ಜೂನ್‌ನಲ್ಲಿ ಆರ್‌ಬಿಐ ಪ್ರಕಟಿಸಿರುವಂತೆ ಭಾರತದ ವಿದೇಶಿ ಸಾಲ 619 ಬಿಲಿಯನ್ ಡಾಲರುಗೆ ಏರಿದೆ. ಈಗ ರೂಪಾಯಿಯ ಬೆಲೆ 82 ರೂ. ಆಗಿದೆ. ಆದ್ದರಿಂದ ಈಗ ವಿದೇಶಿ ಸಾಲ 50.76 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಹೊರ ದೇಶಗಳಲ್ಲಿ ಮಾಡಿದ ಸಾಲ 27 ಲಕ್ಷ ಕೋಟಿ ರೂಪಾಯಿಗಳು. ಆದರೆ, ಸುಳ್ಳಿನ ಕಾರ್ಖಾನೆಯಲ್ಲಿ, "ಮೋದಿಯವರು ದೇಶದ ಸಾಲ ತೀರಿಸಿದ್ದಾರೆ" ಎಂದು ಭಜನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

2014ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರದ ಒಟ್ಟಾರೆ ಸಾಲ 53.11 ಲಕ್ಷ ಕೋಟಿಗಳಷ್ಟಿತ್ತು. ಈಗ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ 153 ಲಕ್ಷ ಕೋಟಿಗಳಷ್ಟಾಗುತ್ತದೆ. ಎಂಟು ವರ್ಷಗಳಲ್ಲಿ 100 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮೋದಿ ಸರ್ಕಾರ ಮಾಡಿದೆ. ಮೋದಿ ಸರ್ಕಾರ ರಾಜ್ಯಗಳನ್ನೂ ಸಾಲಕ್ಕೆ ಸಿಕ್ಕಿಸಿದೆ. 2014ರಲ್ಲಿ ದೇಶದ ಎಲ್ಲ ರಾಜ್ಯಗಳ ಸಾಲ 24.71 ಲಕ್ಷ ಕೋಟಿಗಳಷ್ಟಿತ್ತು. ಈಗ 80 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಅಧಿಕಾರದಿಂದ ಇಳಿದಾಗ 2.42 ಲಕ್ಷ ಕೋಟಿಗಳಷ್ಟಿತ್ತು. ಈಗ 5.4 ಲಕ್ಷ ಕೋಟಿಗೆ ಏರಿಕೆಯಾಗುತ್ತಿದೆ.
ದೇಶದ 18500 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡುವುದಕ್ಕಾಗಿ ಮೋದಿಯವರು ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹಾಕಿದರು ಎನ್ನುವ ಭಯಾನಕ ಸುಳ್ಳನ್ನು ಮತ್ತೆ ಹೇಳುತ್ತಿದ್ದಾರೆ. ಸತ್ಯ ಏನೆಂದರೆ ದೇಶದ 6.69 ಲಕ್ಷ ಹಳ್ಳಿಗಳಲ್ಲಿ ಮೋದಿಯವರು 2014 ರಲ್ಲಿ ಅಧಿಕಾರ ವಹಿಸಿಕೊಳ್ಳುವ ವೇಳೆಗಾಗಲೇ 650548 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಉಳಿದಿದ್ದ ಗ್ರಾಮಗಳ ಸಂಖ್ಯೆ ಮೋದಿ ಸರ್ಕಾರವೆ ಹೇಳಿರುವ ಹಾಗೆ 18452 ಮಾತ್ರ. ಮನಮೋಹನಸಿಂಗರ ಯುಪಿಎ ಸರ್ಕಾರ ಸುಮಾರು 1.8 ಲಕ್ಷ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು.
10 ವರ್ಷಗಳಲ್ಲಿ ಮನಮೋಹನ್ ಸಿಂಗರು 2 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದರು. ಅದರಲ್ಲಿ 1.9 ಕೋಟಿ ಮನೆಗಳಿಗೆ ಉಚಿತ ಸಂಪರ್ಕ ಕೊಟ್ಟಿದ್ದರು. ಭಾರತದ ಚರಿತ್ರೆಯಲ್ಲೇ ಮೊಸರು, ಮಜ್ಜಿಗೆ, ಹಾಲು, ಲಸ್ಸಿ, ಗೋಧಿ, ಬಾರ್ಲಿ, ಬೆಲ್ಲ, ಜೇನು ತುಪ್ಪ, ಮಕ್ಕಳ ಪೆನ್ನು, ಪುಸ್ತಕ, ಪೆನ್ಸಿಲ್ಲುಗಳಿಗೆ ತೆರಿಗೆ ಹಾಕಿದ ಉದಾಹರಣೆಗಳಿಲ್ಲ. ಆದರೆ ಮೋದಿ ಸರ್ಕಾರ ಇವಕ್ಕೆಲ್ಲಾ 5% ರಿಂದ 18% ತೆರಿಗೆ ಹಾಕಿದೆ. ಮತ್ತೊಂದು ಕಡೆ ಅಂಬಾನಿ ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ತೆರಿಗೆಯನ್ನು ಮೋದಿ ಇಳಿಸಿದ್ದಾರೆ. ಮನಮೋಹನಸಿಂಗರು ಶೇ.30 ರಷ್ಟು ತೆರಿಗೆಯನ್ನು ದೊಡ್ಡ ದೊಡ್ಡ ಬಂಡವಾಳಿಗರ ಮೇಲೆ ಹಾಕುತ್ತಿದ್ದರು. ಮೋದಿಯವರು ಅದನ್ನು ಶೇ.22 ಕ್ಕೆ ಇಳಿಸಿದರು ಎಂದರು.












Click it and Unblock the Notifications