ರಾಜ್ಯದಿಂದ ಕೇಂದ್ರಕ್ಕೆ 3 ಲಕ್ಷ ಕೋಟಿ ತೆರಿಗೆ; ವಾಪಸ್ ಬಂದಿದ್ದು 43 ಸಾವಿರ ಕೋಟಿ: ಸಿದ್ದರಾಮಯ್ಯ
ಬೆಂಗಳೂರು, ಫೆ. 23: ಮೋದಿ ಸರ್ಕಾರವು ರಾಜ್ಯದಿಂದ 3 ಲಕ್ಷ ಕೋಟಿ ರೂ.ಗಳಷ್ಟು ವಿವಿಧ ರೂಪದ ತೆರಿಗೆಗಳನ್ನು ಸಂಗ್ರಹಿದೆ. ಆದರೆ, ರಾಜ್ಯಕ್ಕೆ ಕೇವಲ 43 ಸಾವಿರ ಕೋಟಿ ರೂ. ವಾಪಸ್ ನೀಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ಮುಖ್ಯಮಂತ್ರಿಗಳು ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿ ಇಲ್ಲ ಎಂದು ಟೀಕಿಸಿದ್ದಾರೆ. ಇದರಿಂದ ರಾಜ್ಯದ ಆರ್ಥಿಕತೆಯೂ ದಿಕ್ಕುತಪ್ಪಿದೆ. 2018 ರ ವರೆಗೆ 2.42 ಲಕ್ಷ ಕೋಟಿಗಳಷ್ಟಿದ್ದ ರಾಜ್ಯದ ಸಾಲ ಈಗ 4.57 ಲಕ್ಷ ಕೋಟಿಗಳಷ್ಟಾಗಿದೆ ಎಂದು ಜರಿದಿದ್ದಾರೆ.
ರಾಜ್ಯಪಾಲರು ಈ ಬಾರಿ ಸರ್ಕಾರದ ಒಂದು ವರ್ಷದ ಸಾಧನೆಯ ವರದಿಯನ್ನು ಸದನದಲ್ಲಿ ಓದಿದರು. ಸರ್ಕಾರವು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ ಮಾತುಗಳಲ್ಲಿ ಬಹುಪಾಲು ಜೊಳ್ಳು ಹಾಗೂ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳು ಇಲ್ಲ ಎಂಬುದರ ಸೂಚಕವಾಗಿವೆ. ಅನೇಕ ಕಡೆ ಕೇಂದ್ರದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಸೂಚನೆಗಳನ್ನು ಮಂಡಿಸಿದ ಬಿಜೆಪಿಯ ಶಾಸಕರು ಮೋದಿಯವರನ್ನು ಮತ್ತು ಕೇಂದ್ರದ ಯೋಜನೆಗಳನ್ನು ಶ್ಲಾಘಿಸುವುದಕ್ಕಷ್ಟೆ ಸೀಮಿತಗೊಂಡರು. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕಳಪೆ ಭಾಷಣವನ್ನು ಹಿಂದೆಂದೂ ಕೇಳಿರಲಿಲ್ಲ ಎಂದಿದ್ದಾರೆ.

ಬಂಡವಾಳಿಗರ ಮತ್ತು ಕಾರ್ಪೋರೇಟ್ ಕುಳಗಳ ಮೂಗಿನ ನೇರಕ್ಕೆ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರೆ, ಭಾರತದ ಅತಿ ಶ್ರೀಮಂತರಾದ ಅದಾನಿ ಅಂಬಾನಿ ಮುಂತಾದ 142 ಜನರ ಸಂಪತ್ತು 23 ಲಕ್ಷ ಕೋಟಿಗಳಿದ್ದದ್ದು ಈಗ ಅದು 53 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಆದರೆ ಜನರ ಮೇಲಿನ ತೆರಿಗೆ ಹೊರೆ, ಬೆಲೆ ಏರಿಕೆ ಎರಡೂ ದುಪ್ಪಟ್ಟಾಗಿವೆ.
ಮನಮೋಹನ ಸಿಂಗ್ ಅವರ ಕಾಲದಲ್ಲಿ ದೇಶ ಸಂಗ್ರಹಿಸುವ 100 ರೂ ತೆರಿಗೆಯಲ್ಲಿ ಜನರ ತೆರಿಗೆಯ ಪಾಲು 58 ರಷ್ಟಿತ್ತು. ಬಂಡವಾಳಿಗರ ತೆರಿಗೆ ಪಾಲು ಶೇ. 42 ರಷ್ಟಿತ್ತು. ಈಗ ಜನರ ಪಾಲು 75 ಕ್ಕೆ ಏರಿಕೆಯಾಗಿದೆ. ಬಂಡವಾಳಿಗರಿಂದ 25 ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಇದರ ಫಲವಾಗಿ ದೇಶದ ಬಡವರ ಸಂಖ್ಯೆ ಹೆಚ್ಚುತ್ತಿದೆ. ದೇಶ ದೊಡ್ಡ ಸಾಲಗಾರನಾಗುತ್ತಿದೆ ಎಂದು ವಿವರಿಸಿದ್ದಾರೆ.
2014 ರಲ್ಲಿ 53 ಲಕ್ಷ ಕೋಟಿಗಳಿದ್ದ ದೇಶದ ಸಾಲ 2022 ರ ಕೊನೆಗೆ 152 ಲಕ್ಷ ಕೋಟಿಗಳಷ್ಟಾಗುತ್ತಿದೆ. ದೇಶವು ಸಂಗ್ರಹಿಸುವ 22 ಲಕ್ಷ ಕೋಟಿ ತೆರಿಗೆಯಲ್ಲಿ 9.40 ಲಕ್ಷ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ. ಅಂದರೆ ದುಡಿದ 100 ರೂಪಾಯಿನಲ್ಲಿ 43 ರೂಪಾಯಿ ಬಡ್ಡಿ ಕಟ್ಟುವುದಕ್ಕೆ ಖರ್ಚು ಮಾಡಲಾಗುತ್ತಿದೆ. ಹಾಗಾಗಿ ಮೋದಿ ಸರ್ಕಾರ ದೇಶದ ಆಸ್ತಿಗಳನ್ನೆಲ್ಲ ಮಾರಾಟಕ್ಕಿಟ್ಟಿದ್ದು, ಏರ್ ಇಂಡಿಯಾ ಸಾಲವನ್ನು ಮೋದಿ ಸರ್ಕಾರವೆ ತೀರಿಸಿ ಕೇವಲ 2700 ಕೋಟಿಗಳನ್ನು ನಗದು ರೂಪದಲ್ಲಿ ಪಡೆದುಕೊಂಡು ಟಾಟಾಗಳಿಗೆ ಬಿಟ್ಟುಕೊಟ್ಟಿದೆ. ಇದನ್ನೇ ಆತ್ಮ ನಿರ್ಭರ ಭಾರತ ಎಂದು ದಾರಿತಪ್ಪಿಸಲಾಗುತ್ತಿದೆ ಎಂದಿದ್ದಾರೆ.
ಕೈಗಾರಿಕಾಭಿವೃದ್ಧಿಯಲ್ಲಿ ರಾಜ್ಯ ಹಿಂದೆ:
ನಮ್ಮ ಸರ್ಕಾರ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿ 1 ಅಥವಾ 2 ನೇ ಸ್ಥಾನಗಳತ್ತು. ಈಗ ಓಲಾ ಬೈಕ್, ಏಥರ್, ಟಾಟಾ ಎಲೆಕ್ಟ್ರಾನಿಕ್ಸ್ ಮುಂತಾದ ಬೃಹತ್ ಬಂಡವಾಳದ ಕಂಪೆನಿಗಳು 10000 ಕೋಟಿ ಬಂಡವಾಳ ಹೂಡಲು ತಯಾರಿದ್ದವು. ಆದರೆ ಈ ಸರ್ಕಾರ ಆಸಕ್ತಿ ವಹಿಸದ ಕಾರಣ ತಮಿಳುನಾಡಿನ ಪಾಲಾದವು. ರಾಜ್ಯವು ಕೈಗಾರಿಕಾಭಿವೃದ್ಧಿಯಲ್ಲೂ ಹಿಂದೆ ಬಿದ್ದಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯಂಥ ಮನೆಹಾಳು ನೀತಿಗಳನ್ನು ಸರ್ಕಾರ ಸಾಧನೆ ಎಂದು ಹೇಳಿಸಿದೆ. ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರುಗಳಿಲ್ಲ, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳಿಲ್ಲ. ವಿಶ್ವ ವಿದ್ಯಾಲಯಗಳಲ್ಲಿ ವೈಜ್ಞಾನಿಕ ಮನೋಭಾವಗಳಿರುವ ಅಧ್ಯಾಪಕರಿಲ್ಲ. ಸ್ವತಂತ್ರವಾಗಿ ಅಧ್ಯಯನ ಮಾಡುವ, ಬರೆಯುವ ಅಧ್ಯಾಪಕರಿಗೆ ಸರ್ಕಾರದ ಕಿರುಕುಳದ ಭಯ. ಹೀಗಾಗಿ ಸಂಸ್ಕೃತದಂತಹ ಭಾಷೆಗಳ ಹೇರಿಕೆಗಷ್ಟೆ ಎನ್‍ಇಪಿ ಸೀಮಿತವಾಗಿದೆ. ವಸತಿಯ ವಿಚಾರದಲ್ಲಿ ಕೇವಲ ಭವಿಷ್ಯ ನುಡಿಯಲಾಗಿದೆಯೇ ಹೊರತು ಸಾಧನೆಗಳಿಲ್ಲ.ಕಲ್ಯಾಣ ಕರ್ನಾಟಕದ ಹೆಸರು ಬದಲಾಯಿಸಿದೆವು, ಕಛೇರಿಯನ್ನು ಸ್ಥಳಾಂತರಿಸಿದೆವು ಎಂದು ಪ್ಯಾರಾ 75 ರಲ್ಲಿ ಹೇಳಿಕೊಳ್ಳಲಾಗಿದೆ. ಇದನ್ನು ಸಾಧನೆ ಎಂದು ಹೇಳಬಹುದೆ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ನಿಧಿಯ ಹಣವನ್ನು ಕಾರ್ಮಿಕರಿಗೆ ಕೊಟ್ಟು ನಾವು ಸಾಧನೆ ಮಾಡಿದ್ದೇವೆ ಎಂದು ಪ್ಯಾರಾ 39 ರಲ್ಲಿ ಪ್ರಸ್ತಾಪಿಸಲಾಗಿದೆ. ಪಶುಪಾಲನೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾಜ್ಯದ ಜಿಡಿಪಿಗೆ ರೂ.1 ಲಕ್ಷ ಕೋಟಿಯವರೆಗೂ ಕೊಡುಗೆ ನೀಡುತ್ತಿರುವ, ಸುಮಾರು 45 ಲಕ್ಷ ರೈತ ಕುಟುಂಬಗಳ ಜೀವನಾಧಾರವಾಗಿರುವ ಪಶುಪಾಲನೆಯನ್ನು ಈ ಮಟ್ಟಿಗೆ ನಿರ್ಲಕ್ಷಿಸಬಹುದೆ?
ಪತ್ರಕರ್ತರಿಗೆ ಕೆ.ಎಸ್‍ಆರ್‍ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಹಳೆಯ ಯೋಜನೆಯನ್ನೇ ಮುಂದುವರಿಸಿ ರಾಜ್ಯಪಾಲರ ಬಾಯಲ್ಲಿ ಸಾಧನೆ ಎಂದು ಹೇಳಿಸಲಾಗಿದೆ. ಸರ್ಕಾರ ಸುಳ್ಳು ಹೇಳಿ, ತನ್ನ ಬೆನ್ನನ್ನು ತಾನೆ ತಟ್ಟಿಕೊಂಡು ಓಡಾಡುತ್ತಿದೆ ಎಂಬುದಕ್ಕೆ ರಾಜ್ಯಪಾಲರ ಭಾಷಣವೆ ಸಾಕ್ಷಿ. ರಾಜ್ಯವು ಅತಿ ಕೆಟ್ಟ ಆಡಳಿತವನ್ನು ಎದುರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಭಾಷಣವಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.












Click it and Unblock the Notifications