ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು: ಸದನದಲ್ಲಿ ಶಾಸಕರ ಆಗ್ರಹ
Mysore Airport Rename Row: ಬೆಳಗಾವಿ, ಡಿಸೆಂಬರ್ 15: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಿ ಎಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕರು ಮುಸ್ಲಿಂ ರಾಷ್ಟ್ರೀಯ ನಾಯಕರನ್ನ ವಿರೋಧಿಸಿಕೊಂಡು ಬಂದಿದ್ದಾರೆ. ಟಿಪ್ಪು ಒಬ್ಬ ರಾಷ್ಟ್ರೀಯ ಪ್ರೇಮಿ. ಮೊದಲ ಸ್ವಾತಂತ್ರ್ಯ ಹೋರಾಟಗಾರರು. ಮೈಸೂರು ಆಂಗ್ಲೋ ಮೂರು ಯುದ್ದ ಮಾಡಿದವರು. ತಮ್ಮ ಮಗನನ್ನೇ ಒತ್ತೆ ಇಟ್ಟ ಇತಿಹಾಸವಿದೆ. ಆದ್ರೆ ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಯಾರು ಬ್ರಿಟಿಷರಿಗೆ ಸೆರೆಂಡರ್ ಆಗಿದ್ದರೋ, ಯಾರು ಬ್ರಿಟಿಷ್ ರಿಂದ ಪಿಂಚಣಿ ಪಡೆಯುತ್ತಿದ್ದರೋ ಅವರನ್ನ ಬಿಜೆಪಿ ರಾಷ್ಟ್ರ ಪ್ರೇಮಿ ಎಂದು ಬಿಂಬಿಸಲು ಹೊರಟಿದೆ. ಬಿಜೆಪಿಯವರಿಗೆ ಹಿಂದು ಮುಸ್ಲಿಂ ಅನ್ನೋ ಅಜೆಂಡಾ ಬಿಟ್ಟು ಬೇರೆ ಏನು ಇಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಲ್ಲ, ಇತಿಹಾಸ ಒಪ್ಪಿಕೊಳ್ಳೋದಿಲ್ಲ. ಹೀಗಾಗಿ ಅವರು ಆಕ್ಷೇಪ ವ್ಯಕ್ತಪಡಿಸೋದು ಸಹಜ. ಆದ್ರೆ ನಾವು ಒಬ್ಬ ರಾಷ್ಟ ಪ್ರೇಮಿ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟವರು ಎಂದು ಹೇಳಿದರು.
ಸಾಂಬರ್ ಪದಾರ್ಥಗಳನ್ನ ಎಕ್ಸಪೋರ್ಟ್ ಮಾಡಿದ್ದು, ರೇಷ್ಮೆ ವ್ಯಾಪಾರ ಬೆಳೆಸಿದ್ದು ಸೇರಿದಂತೆ ಹಲವು ಕೊಡುಗೆಗಳಿವೆ ಎಂದ ಶಾಸಕ ಪ್ರಸಾದ್ ಅಬ್ಬಯ್ಯ, ಇದರಿಂದ ನಾವು ಮೈಸೂರಿಗೆ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಪ್ರಸ್ತಾಪಿಸಿದ್ದೇನೆ. ಮುಂದೆ ಸಿಎಂ ಜೊತೆಯೂ ಇದ್ರ ಬಗ್ಗೆ ಚರ್ಚೆ ಮಾಡ್ತೀನಿ. ಜೊತೆಗೆ ಟಿಪ್ಪು ಜಯಂತಿ ಖಂಡಿತವಾಗಿ ಆಚರಣೆ ಮಾಡಬೇಕು ಎಂದು ಹೇಳಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್, ಚರಿತ್ರೆ ಬಗ್ಗೆ ಬಹಳಷ್ಟು ಅವಲೋಕನ ಮಾಡಬೇಕು. ನಾವು ಚಿಕ್ಕ ಮಕ್ಕಳಿಂದ ಟಿಪ್ಪು ಬಗ್ಗೆ ಓದಿದ್ದೇವೆ. ಮೈಸೂರು ಪ್ರಾಂತ್ಯ ಉಳಿಸಲು ಟಿಪ್ಪು ಸುಲ್ತಾನ ಹೋರಾಟದ ಬಗ್ಗೆ ಗೊತ್ತಿದೆ. ಶೃಂಗೇರಿ ಮಠ ಉಳಿಯಬೇಕಾದರೆ ಅವರ ಹೋರಾಟಕ್ಕೆ ಚರಿತ್ರೆ ಇದೆ. ತಿರುಪತಿ, ಶೃಂಗೇರಿಯಲ್ಲಿ ಮೊದಲ ಪೂಜೆ ಟಿಪ್ಪು ಸುಲ್ತಾನ್ ಹೆಸರಲ್ಲಿ ಆಗುತ್ತೆ, ಶ್ರೀರಂಗಪಟ್ಟಣ ದಲ್ಲಿ ರಂಗನಾಥ ದೇವಸ್ಥಾನ ಹಾಗೇ ಇದೆ ಎಂದು ಹೇಳಿದರು.
ಅಬ್ಬಯ್ಯ ಅವರ ಆಗ್ರಹಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ತೀವ್ರವಾಗಿ ವಿರೋಧಿಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಯಿತು. ನಿನ್ನೆಯಷ್ಟೇ ಸರ್ಕಾರ ಐತಿಹಾಸಿಕ ವ್ಯಕ್ತಿಗಳ ಹೆಸರುಗಳನ್ನು ನೂತನ ವಿಮಾನ ನಿಲ್ದಾಣಕ್ಕೆ ನಾಮಕರಣಕ್ಕೆ ಶಿಫಾರಸ್ಸು ಮಾಡಲು ನಿರ್ಧಾರ ಮಾಡಲಾಗಿದ್ದು, ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ.

ಸಚಿವ ಎಂ.ಬಿ ಪಾಟೀಲ್, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕವಿ ಕುವೆಂಪು ಹೆಸರು, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ಇಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡಿ ಅಂತ ಮನವಿ ಮಾಡಿದರು. ಅದಕ್ಕೆ ವೀರ ರಾಣಿ ಅಬ್ಬಕ್ಕ ದೇವಿ ಹೆಸರೂ ಕೂಡ ಕೇಳಿ ಬರ್ತಿದೆ ಎಂದು ಸ್ಪೀಕರ್ ಖಾದರ್ ಹೇಳಿದರು. ನಾಲ್ಕು ಕೂಡ ಕ್ಯಾಬಿನೆಟ್ ನಲ್ಲಿ ನಿರ್ಧಾರ ಆಗಿದೆ. ಹೆಸರಿಡುವ ವಿಚಾರಕ್ಕೆ ವಾಗ್ವಾದ ಉಂಟಾಗಿದ್ದು, ಮಂಗಳೂರು, ಮೈಸೂರು ಕೂಡ ಇದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರಲ್ಲದೇ ಮುಂದೆ ಹೆಸರಿಡ್ತೀವಿ ಅಂತ ಸ್ಪಷ್ಟನೆ ನೀಡಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವುದಕ್ಕೆ ನಟ ಚೇತನ್ ಅಹಿಂಸಾ, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಾ? ಸರ್ಕಾರಿ ಕಟ್ಟಡಗಳಿಗೆ ಯೋಧರಿಗಿಂತ ಹೆಚ್ಚಾಗಿ ಅಹಿಂಸೆಯ ಐಕಾನ್ಗಳ ಹೆಸರನ್ನು ಇಡಬೇಕೆಂದು ನಾನು ಭಾವಿಸುತ್ತೇನೆ; ಆದಾಗ್ಯೂ, ಟಿಪ್ಪುವಿನ ಜನ್ಮಸ್ಥಳವಾದ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಧ ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಆ ನಿದರ್ಶನದ ಪ್ರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.
ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ, ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗು ಭಾರತಕ್ಕೆ ಅಪಾರವಾದದ್ದು ಎಂದು ಹೇಳಿದ್ದಾರೆ.












Click it and Unblock the Notifications