KPSC: ಕೆಪಿಎಸ್‌ಸಿ ರಿಪೇರಿ ಆಗದಿದ್ದರೆ ಇದು ನಿಶ್ಚಿತ: ಯತ್ನಾಳ್ ಕೊಟ್ಟ ಎಚ್ಚರಿಕೆ ಏನು?
ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮದ ಆರೋಪ ಹೊತ್ತಿರುವ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ (KPSC) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೆಪಿಎಸ್‌ಸಿಯ ವಿಳಂಬ ಧೋರಣೆಯಿಂದಾಗಿ ಬಡ ಅಭ್ಯರ್ಥಿಗಳು ತಮ್ಮ ಖರ್ಚಿಗಾಗಿ ವಿವಿಧ ಪಾರ್ಟ್‌ಟೈಮ್ ಕೆಲಸಗಳಲ್ಲಿ ತೊಡಗುತ್ತಿರುವ ಬಗ್ಗೆಯೂ ಯತ್ನಾಳ್ ಧ್ವನಿ ಎತ್ತಿದ್ದಾರೆ. ನಾಡಿನ ಭವಿಷ್ಯವಾದ ಯುವ ಜನತೆಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ, ಅಧಿಸೂಚನೆ ಹೊರಡಿಸುವುದಕ್ಕೂ ಹಿಂದೂ ಮುಂದೂ ನೋಡುವಂತಾಗಿದೆ. ಕೂಡಲೇ ಎಚೆತ್ತುಕೊಂಡು ಅಧಿಸೂಚನೆಯನ್ನು ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದ ನಿಷ್ಕ್ರಿಯತೆ, ವಿಳಂಬ ಧೋರಣೆ, ಬ್ರಹ್ಮಾಂಡ ಭ್ರಷ್ಟಾಚಾರ, ಉತ್ತರದಾಯಿತ್ವದ ಕೊರತೆಯಿಂದ ಪರೀಕ್ಷಾರ್ಥಿಗಳ ಪಾಡು ಹೇಳತೀರದಂತಾಗಿದೆ. ಅಧಿಸೂಚನೆ ನಿರೀಕ್ಷೆಯಲ್ಲಿರುವ ಬಡ ಅಭ್ಯರ್ಥಿಗಳು ರೂಂ ಬಾಡಿಗೆ, ಕೋಚಿಂಗ್ ಸೆಂಟರ್ ಶುಲ್ಕ, ಊಟ-ತಿಂಡಿ, ಪ್ರಯಾಣದ ಖರ್ಚುಗಳಿಗೆ ಪೆಟ್ರೋಲ್ ಬಂಕ್‌ನಲ್ಲಿ ಸಹಾಯಕರಾಗಿ, ಸೆಕ್ಯೂರಿಟಿ, ಪಾರ್ಸೆಲ್ ಡೆಲಿವರಿ, ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವುದು ಮನಕಲಕುವಂತ ವಿಷಯ ಎಂದು ಬೇಸರ ಹೊರಹಾಕಿದ್ದಾರೆ.

ಭವಿಷ್ಯದ ಅನಿಶ್ಚಿತತೆ, ವಯಸ್ಸಾದ ಪೋಷಕರನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ, ತಮ್ಮ ಖರ್ಚುಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವರ ಮನೋಸ್ಥೈರ್ಯ ಕುಸಿದಿದೆ. ನಿಗದಿತ ಸಮಯದಲ್ಲಿ ಅಧಿಸೂಚನೆ ಹೊರಡಿಸಿ ಫಲಿತಾಂಶ ನೀಡಬೇಕಾಗಿದ್ದ ಆಯೋಗ ಸರ್ಕಾರದ ಬಿಳಿ ಆನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟರಿಗೆ ಗೇಟ್ ಪಾಸ್ ನೀಡಿ
ಆಯೋಗದಲ್ಲಿರುವ ಭ್ರಷ್ಟರಿಗೆ ಗೇಟ್ ಪಾಸ್ ನೀಡಿ, ಆಯೋಗಕ್ಕೆ ಹೊಸ ರೂಪು ರೇಷೆ ಕೊಡಬೇಕಾಗಿದ್ದ ಸರ್ಕಾರ ರಾಜಕೀಯದ ಆಟದಲ್ಲಿ ಮಗ್ನವಾಗಿದೆ. ನಾಡಿನ ಭವಿಷ್ಯವಾದ ಯುವ ಜನತೆಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ಅಧಿಸೂಚನೆ ಹೊರಡಸಿವುದಕ್ಕೂ ಹಿಂದೂ ಮುಂದೂ ನೋಡುತ್ತಿದೆ. ಆಯೋಗಕ್ಕೆ 'ರಿಪೇರಿ' ಆಗದಿದ್ದರೆ ಯುವ ಜನತೆ ಸಿಡಿದೆದ್ದು ದೊಡ್ಡ ಕ್ರಾಂತಿ ಆಗುವುದು ನಿಶ್ಚಿತ. ಸರ್ಕಾರ ಕೂಡಲೇ ಎಚೆತ್ತುಕೊಂಡು ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರೋಸ್ಟರ್ ಸಮಸ್ಯೆಯಿಂದ 3ಎ, 3ಬಿ ಸ್ಪರ್ಧಾತ್ಮಕ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯಯುತವಾಗಿ ಅವರಿಗೆ ಬೇಕಾದ ಮೀಸಲಾತಿ ಸಿಗದೇ ಪರಿತಪಿಸುವಂತಾಗಿದೆ. ಸರ್ಕಾರ ಒಂದು ಅಧಿಸೂಚನೆ ಒಂದೇ ರೋಸ್ಟರ್ ಅಡಿ ಸಮಾನವಾದ ಮೀಸಲಾತಿ ನೀಡಿದರೆ ಆರೋಗ್ಯಕರ ಪೈಪೋಟಿ ಹಾಗೂ ಎಲ್ಲಾ ಸಮುದಾಯಕ್ಕೂ ನ್ಯಾಯ ಒದಗಿಸಿದಂತೆ ಆಗುತ್ತದೆ. ಇಲ್ಲದಿದ್ದರೆ, ಕಾನೂನು ಸಂಘರ್ಷದಿಂದ ಮತ್ತೊಮ್ಮೆ ನೇಮಕಾತಿ ವಿಳಂಬವಾಗುತ್ತದೆ ಎಂದಿದ್ದಾರೆ.
ಇದರಿಂದ ಸರ್ಕಾರಕ್ಕೂ ಹಾಗೂ ಹಲವು ವರ್ಷಗಳಿಂದ ಅಧಿಸೂಚನೆಗೆ ಕಾಯುತ್ತಿರುವ ಪರೀಕ್ಷಾರ್ಥಿಗಳಿಗೆ ತೀವ್ರ ತೊಂದರೆಯಾಗಬಹುದು. ಈಗಾಗಲೇ ಅಧಿಸೂಚನೆಗಳ ವಿಳಂಬದಿಂದ ಮಾನಸಿಕವಾಗಿ ಜರ್ಜರಿತವಾಗಿರುವ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಗಾಯದ ಮೇಲೆ ಬರೆಯಾಗುತ್ತದೆ. ಸರ್ಕಾರ ಕೂಡಲೇ ರೋಸ್ಟರ್ ತಿದ್ದುಪಡಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications