Yatnal: ಮತ್ತೆ ಬಿಜೆಪಿಗೆ ಬರುತ್ತೇನೆ: ಯಾವಾಗ ಎಂದೂ ತಿಳಿಸಿದ ಯತ್ನಾಳ್
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದ ವಿರೋಧಿ, ಅಶಿಸ್ತು ಆರೋಪದ ಮೇರೆಗೆ ಬಿಜೆಪಿ ಉಚ್ಚಾಟನೆ ಮಾಡಿತ್ತು. ಬಳಿಕ ಅವರು ತಮ್ಮದೇ ಹೊಸ ಪಕ್ಷ ಕಟ್ಟುವುದಾಗಿ ಹೇಳಿ, ವಿಜಯದಶಮಿಯಂದು ಈ ಬಗ್ಗೆ ನಿರ್ಣಯ ತಿಳಿಸುತ್ತೇನೆ ಎಂದು ಹೇಳಿದ್ದರು. ಆದರೆ, ಯತ್ನಾಳ್ ಬಣದವರು ಮತ್ತೆ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಬಗ್ಗೆ ಮಾತನಾಡಿದ್ದರು. ಇದೀಗ ಯತ್ನಾಳ್ ಅವರು ಕೂಡ ಬಿಜೆಪಿಗೆ ಮರಳುವ ಬಗ್ಗೆ ಸುಳಿವು ನೀಡಿದ್ದಾರೆ. ಅದು ಯಾವಾಗ ಎಂದೂ ಅವರೇ ಸ್ಪಷ್ಟಪಡಿಸಿದ್ದಾರೆ.
ನನ್ನನ್ನು ಪಕ್ಷದಿಂದ ಶಾಶ್ವತವಾಗಿ ಹೊರಹಾಕಲಾಗಿದೆ ಎಂದು ಹಲವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರಿಗೆ ಹುಚ್ಚು ಹಿಡಿದಿದ್ದು, ಎಲ್ಲರೂ ನನ್ನನ್ನು ಬಿಜೆಪಿ ಮತ್ತೆ ಕರೆಸಿಕೊಳ್ಳುವುದಿಲ್ಲ ಎಂದು ಭಾವಿಸಿದ್ದಾರೆ. ಆದರೆ ಮೇಲಿನವರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಾನು ರಾಜ್ಯದ ಯಾವ ನಾಯಕರ ಮೆನಗೂ ಹೋಗಿಲ್ಲ, ಹೋಗೋದು ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇನ್ನು ಬಿಜೆಪಿಗೆ ಮತ್ತೆ ವಾಪಸ್ ಆಗುವ ಬಗ್ಗೆ ಮಾತನಾಡಿರುವ ಯತ್ನಾಳ್ ಅವರು, ಬಿವೈ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದ ನಂತರವೇ ನನ್ನ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವುದಾಗಿ ಪಕ್ಷದ ವರಿಷ್ಠರು ಹೇಳಿದ್ದಾರೆ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ರಾಮುಲು ಕೂಡ ಸುಳಿವು
ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿದ್ದು, ಇದಕ್ಕೆ ಪೂರಕವಾಗಿ ಯತ್ನಾಳ್ ಅವರು ಕೇಂದ್ರ ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ ಎಂದು ಬಿ.ಶ್ರೀರಾಮುಲು ಕೂಡ ಸುಳಿವು ನೀಡಿದ್ದರು. ಯತ್ನಾಳ್ ಅವರು ಈ ಹಿಂದೆ ಪಕ್ಷಕ್ಕಾಗಿ ಮಾಡಿರುವ ಕೆಲಸವನ್ನು ವರಿಷ್ಠರು ಗುರುತಿಸಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಶೀಘ್ರದಲ್ಲೇ ಆಗಲಿದೆ ಎಂದು ಹೇಳಿದ್ದರು. ಇದೀಗ ಯತ್ನಾಳ್ ಅವರು ಕೂಡ ಪಕ್ಷಕ್ಕೆ ಮರಳುವ ಬಗ್ಗೆ ದೃಢಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಭಾರತಕ್ಕೆ ಪಿಒಕೆ ಬಿಟ್ಟುಕೊಡುವುದು, ಸಿಂಧೂ ನದಿ ನೀರನ್ನು ನಾವೇ ಬಳಸಿಕೊಳ್ಳುವುದು ಸೇರಿದಂತೆ ಮೋದಿ ಅವರ ಷರತ್ತುಗಳು ಸರಿಯಾಗಿವೆ. ಈ ಎಲ್ಲವನ್ನೂ ನಾನು ಸ್ವಾಗತಿಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ. ಯುದ್ಧ ವಿರಾಮ ಘೋಷಣೆ ಮಾಡಿದಾಗ ಬಹಳ ದೇಶ ಭಕ್ತರಿಗೆ ಬೇಸರವಾಗಿತ್ತು. ಈ ಹಿಂದೆ ಕಾಂಗ್ರೆಸ್‌ನ ನೆಹರೂ ಹಾಗೂ ಇಂದಿರಾ ಗಾಂಧಿ ಅವರು ಮಾಡಿದ ತಪ್ಪನ್ನು ಮೋದಿ ಅವರು ಮಾಡಬಾರದು ಎನ್ನುವುದು ದೇಶದ ಜನರ ಭಾವನೆಯಾಗಿತ್ತು. ಇಂದಿರಾ ಗಾಂಧಿ ಮಾಡಿದ ತಪ್ಪಿನಿಂದ ಲಾಹೋರ್ ನಮ್ಮ ದೇಶದ ಭಾಗ ಆಗುವುದು ತಪ್ಪಿತು. ಆದರೆ ದೇಶದ ಜನರಿಗೆ ಮೋದಿ ಅವರ ಮೇಲೆ ಅಪಾರ ನಂಬಿಕೆಯಿದೆ ಎಂದೂ ಯತ್ನಾಳ್ ಹೇಳಿದ್ದಾರೆ.
ವಿಜಯೇಂದ್ರ ಅವರ ವಿರುದ್ಧ ತೊಡೆತಟ್ಟಿದ್ದ ಯತ್ನಾಳ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ದರು. ಅಲ್ಲದೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುವ ಸವಾಲ್ ಕೂಡ ಹಾಕಿದ್ದರು. ನಾನು ಕೂಡ ಆ ಸ್ಥಾನದ ಆಕಾಂಕ್ಷಿ ಎಂದಿದ್ದ ಯತ್ನಾಳ್ ಅವರನ್ನೇ ಪಕ್ಷ ದಿಢೀರನೆ ಉಚ್ಚಾಟಿಸಿತ್ತು. ಇದೀಗ ಮತ್ತೆ ಅವರು ವಿಜಯೇಂದ್ರ ಅವರ ಸ್ಥಾನದ ಬಗ್ಗೆ ಮಾತನಾಡಿದ್ದು, ಮತ್ತೆ ಬಿಜೆಪಿಗೆ ಮರಳುವ ಸೂಚನೆ ನೀಡಿದ್ದಾರೆ.












Click it and Unblock the Notifications