ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್ ಕೇಸ್: ಮಾಹಿತಿ ನೀಡಲು ಸೂಚನೆ
ಬೆಂಗಳೂರು, ಜನವರಿ 11: 2020ರ ಸೆಪ್ಟೆಂಬರ್ 19ರ ನಂತರದಲ್ಲಿ ರಾಜ್ಯದ ವಿಶೇಷ ನ್ಯಾಯಾಲಯದಲ್ಲಿ ಬಾಕಿಯಿರುವ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರ ವಿರುದ್ಧ ದಾಖಲಾಗಿ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ಮುಂದಿನ ಮೂರು ವಾರಗಳಲ್ಲಿ ಮಾಹಿತಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದೆ.
ಶಾಸಕರು ಹಾಗೂ ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಹಾಜರಿದ್ದ ಪ್ರಕರಣದ ಅಮಿಕಸ್ ಕ್ಯೂರಿ ಆದಿತ್ಯ ಸೋಂದಿ ನ್ಯಾಯಾಲಯಕ್ಕೆ ನೆರವಾಗುವರು. ಈ ಸಂಬಂಧ ಸಾಕಷ್ಟು ಪ್ರಕರಣಗಳಿದ್ದು, ಸುಧೀರ್ಘ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಜತೆಗೆ, ಈ ಸಂಬಂಧ ವಿಶೇಷ ನ್ಯಾಯಾಲಯಗಳಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯದ ಮುಂದೆ ಹಾಜರಿಪಡಿಸಬೇಕು ಎಂದು ರಿಜಿಸ್ಟ್ರಾರ್‌ಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ: ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರ ವಿರುದ್ದದ ಪ್ರಕರಣಗಳ ಶೀಘ್ರ ವಿಲೇವಾರಿ ಮತ್ತು ಮೇಲ್ವಿಚಾರಣೆ ನಡೆಸುವಂತೆ ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
ಈ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತುವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಪ್ರಕರಣದಲ್ಲಿ ಆದಿತ್ಯ ಸೋಂದಿ ಅವರನ್ನು ಅಮಿಕಾಸ್ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿತ್ತು.












Click it and Unblock the Notifications