ಶಾಸಕರ ಫೋನ್ ಸಮಸ್ಯೆ, ಸಿಎಂ ಸಿದ್ದರಾಮಯ್ಯಗೆ ಪತ್ರ!
ಬೆಂಗಳೂರು, ಮಾ.11 : ಶಾಸಕರ ದೂರವಾಣಿ ಕರೆಗಳನ್ನು ಅಧಿಕಾರಿಗಳು ಸ್ವೀಕರಿಸುತ್ತಿಲ್ಲವಂತೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ಕೆ.ಬಿ ಕೋಳಿವಾಡ ಅವರು ಪತ್ರ ಬರೆದಿದ್ದಾರೆ. ಶಾಸಕರ ಫೋನ್ ನಂಬರ್‌ಗಳನ್ನು ಅಧಿಕಾರಿಗಳು ಸೇವ್ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ (ಕಾಂಗ್ರೆಸ್) ಅವರು ಈ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಯಾವ ಅಧಿಕಾರಿಗಳು ಶಾಸಕರ ದೂರವಾಣಿ ಕರೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. [ಸಿಎಂ ಸಿದ್ದರಾಮಯ್ಯಗೆ ಪ್ರವೀಣ್ ತೊಗಾಡಿಯಾ ಪತ್ರ!]

ಪತ್ರದ ವಿವರ : ಅಧಿಕಾರಿಗಳು ಶಾಸಕರ ಮೊಬೈಲ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಅವರು ಸಭೆಯಲ್ಲಿದ್ದರೂ ಸಭೆ ಮುಗಿದ ಬಳಿಕವೂ ಮರಳಿ ಕರೆ ಮಾಡುವುದಿಲ್ಲ. ಆದ್ದರಿಂದ ಎಲ್ಲಾ ಅಧಿಕಾರಿಗಳು ತಪ್ಪದೇ ಶಾಸಕರ ಮೊಬೈಲ್ ನಂಬರ್‌ಗಳನ್ನು ಸೇವ್ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಕೋಳಿವಾಡ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಧಿಕಾರಿಗಳು ಶಾಸಕರ ಕರೆಗಳಿಗೆ ಸ್ಪಂದಿಸುವುದಿಲ್ಲ ಎಂದರೆ ಜನ ಸಮಾನ್ಯರು ಸಮಸ್ಯೆಗಳನ್ನು ಬಗೆಹರಿಸುತ್ತಾರೆಯೇ? ಎಂದು ಪತ್ರದಲ್ಲಿ ಪ್ರಸ್ತಾಪಿಸಿರುವ ಶಾಸಕರು, ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕರು ಕರೆ ಮಾಡಿದ ತಕ್ಷಣ ಉತ್ತರ ನೀಡಲು ಸಾಧ್ಯವಾಗದಿದ್ದರೆ, ನಂತರವಾದರೂ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಆದರೆ, ಅಧಿಕಾರಿಗಳು ಇದನ್ನು ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಸುತ್ತೋಲೆ ಹೊರಡಿಸಿ, ಶಾಸಕರ ಸಮಸ್ಯೆ ಬಗೆಹರಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications