Yatnal: ಬಿಜೆಪಿಯಲ್ಲಿ ಅಸಮಾಧಾನದ ಹೊಗೆ- ನಮ್ಮ ತಂಡದವರೇ ಮುಂದಿನ ಸಿಎಂ ಎಂದ ಯತ್ನಾಳ್!
ಬೆಂಗಳೂರು ನವೆಂಬರ್ 27: ವಕ್ಫ್ ಆಸ್ತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾರಿರುವ ಸಮರ ಯತ್ನಾಳ್ ಹಾಗೂ ಬಿಎಸ್ ಯಡಿಯೂರಪ್ಪ ಕಾಳಗವಾಗಿ ಬದಲಾಗಿದೆ. ಯತ್ನಾಳ್ ಹೇಳಿಕೆಗಳನ್ನು ಕೆಲ ಬಿಜೆಪಿ ನಾಯಕರುಗಳು ಸಮರ್ಥಿಸಿಕೊಳ್ಳುತ್ತಿದ್ದರೆ, ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಿಡಿಮಿಡಿಗೊಂಡಿದ್ದಾರೆ. ಫಿಲ್ಟರ್ ಇಲ್ದೆ ಮಾತನಾಡುವ ಯತ್ನಾಳ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ಹೀಗೆ ಬಿಜೆಪಿಯಲ್ಲಿ ಭಿನ್ನಮತ ಬಿರುಸುಗೊಂಡಿದ್ದು 'ನಮ್ಮ ತಂಡದವರೇ ಮುಖ್ಯಮಂತ್ರಿ' ಎಂದು ಯತ್ನಾಳ್ ಹೇಳಿರುವ ಮಾತು ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಹೌದು.... ವಕ್ಫ್ ಮಂಡಳಿ ಆಸ್ತಿ ವಿವಾದ ಭುಗಿಲೆದ್ದಿದ್ದು ಯತ್ನಾಳ್ ನಡೆಗೆ ಸ್ವ ಪಕ್ಷದಲ್ಲಿ ಆಕ್ಷೇಪ ಹೆಚ್ಚಾಗಿದೆ. ವರಿಷ್ಠರ ಗಮನಕ್ಕೆ ತರುವಂತೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ವಕ್ಫ್ ಆಸ್ತಿ ವಿವಾದದ ವಿರುದ್ಧ ಯತ್ನಾಳ್ ಹಾಗೂ ರಾಜ್ಯದ ಬಿಜೆಪಿ ನಾಯಕರು ದೊಡ್ಡದಾಗಿ ಧ್ವನಿ ಎತ್ತಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರು, 'ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಸಿಕ್ಕಾಪಟ್ಟೆ ಬೇಸತ್ತಿದ್ದಾರೆ. ಹೀಗಾಗಿ ಜನ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲಿದ್ದು ನಮ್ಮ ತಂಡದವರೇ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಅಧಿಕಾರ ನಮಗೇ ಸಿಗಲಿದೆ' ಎಂದು ಹೇಳಿದ್ದಾರೆ.
ವಕ್ಫ್ ಮಂಡಳಿ ವಿರುದ್ಧ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಯತ್ನಾಳ್ ಅವರು ಈ ಹೇಳಿಕೆಯನ್ನು ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ನಮ್ಮ ಹೋರಾಟ ವಕ್ಫ್ ವಿಚಾರದಲ್ಲಿ ರೈತರಿಗೆ ನ್ಯಾಯ ಸಿಗುವವರೆಗೂ ಮುಂದುವರೆಯಲಿದೆ. ಕೆಲ ಬಿಜೆಪಿ ನಾಯಕರು ಇದರಿಂದ ದೂರವಿರಬಹುದು. ಆದರೆ ನಾವು ಈ ಬಗ್ಗೆ ತಲೆಕೆಡೆಸಿಕೊಳ್ಳುವುದಿಲ್ಲ ಎಂದಿದ್ದಾರೆ ಯತ್ನಾಳ್.
ಬಿಜೆಪಿಯ ಕೆಲ ಮುಖಂಡರು ಬೆಂಗಳೂರಿನಲ್ಲಿ ಕುಳಿತಿರುವವರಿಗೆ (ಯಡಿಯೂರಪ್ಪ, ವಿಜಯೇಂದ್ರ) ಹೆದರಿ ನಮ್ಮ ಹೋರಾಟಕ್ಕೆ ಬಂದಿಲ್ಲ ಎಂದು ಹೇಳಿದ ಯತ್ನಾಳ್ ತಮ್ಮದೇ ಆದ ಶೈಲಿಯಲ್ಲಿ ಬಿಎಸ್‌ವೈ ಹಾಗೂ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ. ದೊಡ್ಡ ಮಠಗಳ ಸ್ವಾಮಿಗಳೂ ಬಂದಿಲ್ಲ. ಅವರೆಲ್ಲಾ ತಮ್ಮ ಶಿಕ್ಷಣ ಸಂಸ್ಥೆಗಳ ಫೈಲ್ ಅನುಮೋದನೆಗೆ ಸಿಎಂ ಚೇಂಬರ್‌ನಲ್ಲಿ ಕುಳಿತಿರುತ್ತಾರೆ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಇನ್ನೂ ಯತ್ನಾಳ್ ಹೋರಾಟದಲ್ಲಿ ಕುಮಾರ್ ಬಂಗಾರಪ್ಪ, ಜಿ.ಎಂ. ಸಿದ್ದೇಶ್ವರ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ರಾಜಕುಮಾರ ಪಾಟೀಲ ತೇಲ್ಕೂರ ಭಾಗವಹಿಸಿದ್ದರು.
ಯತ್ನಾಳ್ ಹೋರಾಟದ ಬಗ್ಗೆ ಮಾತನಾಡಿದ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ, 'ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ. ನಾವು ಇದನ್ನು ಕೇಂದ್ರದ ನಾಯಕರ ಗಮನಕ್ಕೆ ಬಂದಿದ್ದೇವೆ. ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಪಕ್ಷದಲ್ಲಿ ಸಮಸ್ಯೆ ಇದ್ದರೆ ಸರಿಪಡಿಸೋಣ. ಪಕ್ಷದ ಹಿತದೃಷ್ಟಿಯಿಂದ ಚರ್ಚೆ ಮಾಡೋಣ. ಪಕ್ಷ ಬಲಪಡಿಸುವ ಕೆಲಸ ಮಾಡೋಣ' ಎಂದು ಮನವಿ ಮಾಡಿದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಮೂರು ತಂಡಗಳು ಡಿ.4ರಿಂದ 6ರವರೆಗೆ ಸಂಬಂಧಪಟ್ಟ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅಭಿಪ್ರಾಯ ಸಂಗ್ರಹಕ್ಕೆ ಸಜ್ಜಾಗಿವೆ. ಆದರೆ ಯತ್ನಾಳ್ ಹಾಗೂ ಬೆಂಬಲಿಗರು ಶಾಸಕರು, ಪ್ರಮುಖರು ಈಗಾಗಲೇ ಹೋರಾಟ ನಡೆಸಿರುವ ಜಿಲ್ಲೆಗಳಲ್ಲಿ ಮತ್ತೆ ಹೋರಾಟ ನಡೆಸುವುದು ಹೇಗೆ ಎಂಬ ಕಸಿವಿಸಿಯಲ್ಲಿ ಸಿಲುಕಿದ್ದಾರೆ.












Click it and Unblock the Notifications