ಸದನಕ್ಕೆ ಉತ್ತರಿಸಿ, ಸಚಿವ ಕೆಜೆ ಜಾರ್ಜ್ ಸಮರ್ಥಿಸಿಕೊಂಡ ಸಿಎಂ

Posted By:
Subscribe to Oneindia Kannada

ಬೆಂಗಳೂರು, ಜುಲೈ 13 : 'ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರ ಪಾತ್ರವಿಲ್ಲ, ಅವರು ಪೂರ್ವಗ್ರಹ ಪೀಡಿತರಾಗಿದ್ದರು ಎಂಬುದಕ್ಕೆ ಸಾಕ್ಷಿಗಳು ಬೇಕಲ್ಲ. ಅವರು ಸೇಡಿನ ರಾಜಕಾರಣ ಮಾಡಿಲ್ಲ, ಮಾಡಲೂ ಬಾರದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಬುಧವಾರದ ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿವೈಎಸ್‌ಪಿ ಗಣಪತಿ, ಡಿವೈಎಸ್‌ಪಿ ಕಲ್ಲಪ್ಪ ಅವರ ಆತ್ಮಹತ್ಯೆ ಬಗ್ಗೆ ಎರಡು ದಿನಗಳಿಂದ ನಿಯಮ 69ರ ಅಡಿ ನಡೆದ ಚರ್ಚೆಗೆ ಉತ್ತರ ನೀಡಿದರು. ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಮರ್ಥಿಸಿಕೊಂಡ ಅವರು, 'ಆತ್ಮಹತ್ಯೆ ಮಾಡಿಕೊಳ್ಳಬೇಡಿ' ಎಂದು ಅಧಿಕಾರಿಗಳಿಗೆ ಕರೆ ನೀಡಿದರು. [ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]

CM Siddaramaiah speech in assembly

ಇಬ್ಬರು ಡಿವೈಎಸ್‌ಪಿಗಳ ಸಾವಿನಿಂದ ನೋವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರೈತರಿಗೂ ಇದನ್ನೇ ಹೇಳಿದ್ದೆ. ಅಧಿಕಾರಿಗೂ ಇದನ್ನೇ ಹೇಳುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಿಮ್ಮ ಕುಟುಂಬದ ಬಗ್ಗೆ ಒಮ್ಮೆ ಆಲೋಚನೆ ಮಾಡಿ. 'ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು' ಜೀವನದಲ್ಲಿ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಬೇಕು.['ಸಿದ್ದರಾಮಯ್ಯ ಕೇಳಿದರೆ ರಾಜೀನಾಮೆ ಕೊಡುವೆ']

'ಅಧಿಕಾರ ಕೈಯಲ್ಲಿದ್ದವರು ದರ್ಪ ತೋರಿಸಬಾರದು. ಅಧಿಕಾರ ಎಂದೂ ಶಾಶ್ವತವಲ್ಲ. ಸೇಡಿನ ರಾಜಕಾರಣ ಯಾರೂ ಮಾಡಬಾರದು. ಸಾರ್ವಜನಿಕ ಜೀವನದಲ್ಲಿ ನಾನು ಸೋಲು-ಗೆಲುವು ನೋಡಿದ್ದೇನೆ. ಅಧಿಕಾರ ಮತ್ತು ವಿಪಕ್ಷದಲ್ಲಿ ಕೂತಿದ್ದೇನೆ, ಎಂದಿಗೂ ಅಧಿಕಾರಿಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ'. [ಎಂಕೆ ಗಣಪತಿ ಆತ್ಮಹತ್ಯೆ : ಸದನದಲ್ಲಿ ಯಾರು, ಏನು ಹೇಳಿದರು?]

ಸಿದ್ದರಾಮಯ್ಯ ಅವರ ಉತ್ತರದ ಪ್ರಮುಖ ಅಂಶಗಳು....[ಸಚಿವ ಜಾರ್ಜ್ ವಿರುದ್ಧ ಗಣಪತಿ ಪತ್ನಿ, ಪುತ್ರರಿಂದ ದೂರು]

* ಡಿವೈಎಸ್‌ಪಿ ಗಣಪತಿ ಅವರು ಬೆಂಗಳೂರಿಗೆ ಹೋಗುವುದಾಗಿ ಅಂದು ಹೊರಟು ಮಡಿಕೇರಿಗೆ ಬಂದಿದ್ದರು. 11.30ರ ಸುಮಾರಿಗೆ ಟಿವಿ ಮಾಧ್ಯಮಗಳ ಕಚೇರಿಗೆ ಹೋಗಿ ಮಧ್ಯಾಹ್ನ 1.45ರ ಸುಮಾರಿಗೆ ವಿನಾಯಕ ಲಾಡ್ಜ್‌ಗೆ ಬಂದಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡರು.

* ಟಿವಿ ಮಾಧ್ಯಮದವರು ಪೊಲೀಸರಿಗೆ ಅಥವ ಅವರ ಕುಟುಂಬದವರಿಗೆ ಗಣಪತಿ ಅವರ ಹೇಳಿಕೆ ಬಗ್ಗೆ ಮಾಹಿತಿ ನೀಡಿದ್ದರೆ ಗಣಪತಿ ಅವರ ಸಾವನ್ನು ತಪ್ಪಿಸುವ ಸಾಧ್ಯತೆ ಇತ್ತು. ಅಂದು ಸಂಜೆ 5 ಗಂಟೆಗೆ ಇನ್ಸ್‌ಪೆಕ್ಟರ್ ಮೇದಪ್ಪ ಅವರಿಗೆ ಮಾಹಿತಿ ನೀಡಲಾಗಿದೆ. ಮೊದಲೇ ತಿಳಿಸಿದ್ದರೆ ಜೀವ ಉಳಿಸಬಹುದಿತ್ತು.

* ಟಿವಿ ಮಾಧ್ಯಮಗಳ ಜೊತೆ ಮಾತನಾಡುವಾಗ ನಿರೂಪಕರು ಕೇಳಿದ್ದಕ್ಕೆ 'ನನ್ನ ಜೀವಕ್ಕೆ ಅಪಾಯವಾದರೆ ಇವರು ಕಾರಣ' ಎಂದು ಗಣಪತಿ ಅವರು ಹೇಳಿದ್ದಾರೆ. ಇದನ್ನು ಮೊದಲಿಗೆ ಊಹಿಸಿ ಪೊಲೀಸರಿಗೆ ತಿಳಿಸಿದ್ದರೆ, ಸಾವು ತಪ್ಪಿಸಬಹುದಿತ್ತು.

* ಟಿವಿ ನಿರೂಪಕರು ಕೇಳಿದ್ದಕ್ಕೆ 'ನನಗೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿಲ್ಲ. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

'ಎಂ.ಕೆ.ಗಣಪತಿ ಅವರ ಪತ್ನಿ ಮತ್ತು ಮಕ್ಕಳ ದೂರನ್ನು ಸ್ವೀಕರಿಸಲು ಪೊಲೀಸರು ನಿರಾಕರಿಸಿದ ಕಾರಣ ನಾನು ವಕೀಲರನ್ನು ನೇಮಕ ಮಾಡಿ, ಗಣಪತಿ ಅವರ ಪುತ್ರ ನೇಹಾಲ್ ಮೂಲಕ ಮಡಿಕೇರಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಖಾಸಗಿ ದೂರು ಕೊಡಿಸಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲೇ ತೀರ್ಮಾನವಾಗಲಿ'

* ಗಣಪತಿ ಅವರು ಸುಮಾರು 22 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಿದ್ದಾರೆ. ಆದರೆ, ಎಂದಿಗೂ
ಹಿರಿಯ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂದು ಯಾವ ಅಧಿಕಾರಿಗಳಿಗೂ ಹೇಳಿಲ್ಲ. ಎಲ್ಲಿಯೂ ದೂರು ಕೊಟ್ಟಿಲ್ಲ. ಇದನ್ನು ಪ್ರತಿಪಕ್ಷದವರು ಒಪ್ಪಬೇಕು.

* 2008ರ ಚರ್ಚ್ ದಾಳಿಯ ಬಳಿಕ ಕೆ.ಜೆ.ಜಾರ್ಜ್ ಪೂರ್ವಾಗ್ರಹ ಪೀಡಿತರಾಗಿದ್ದರು ಎಂಬುದು ಸುಳ್ಳು. ಚರ್ಚ್ ದಾಳಿ ನಡೆದು ಐದು ವರ್ಷಗಳ ಬಳಿಕ ಜಾರ್ಜ್ ಅವರು ಸಚಿವರಾದರು. 2013ರ ಜುಲೈನಲ್ಲಿ ಜಾರ್ಜ್ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಆಗ ಅವರ ಚರ್ಚ್, ದೇವಾಲಯಕ್ಕೆ ಭೇಟಿ ನೀಡಿದ್ದರು.

'ಕಾನೂನಿನ ಬಗ್ಗೆ ಬೋಪಯ್ಯ ಅವರಿಗೆ ಹೇಳುವ ಅಗತ್ಯವಿಲ್ಲ. ಅವರು ಲಾಯರ್ ಆಗಿದ್ದವರು. ಅಲ್ಲವೇ. ಆರ್.ವಿ.ದೇಶಪಾಂಡೆ ಅವರ ತಂದೆ ಉತ್ತಮ ಲಾಯರ್ ಆಗಿದ್ದರು. ಇವರು ಸರಿಯಾಗಿ ಪ್ರಾಕ್ಟೀಸ್ ಮಾಡಿದಂತೆ ಕಾಣುತ್ತಿಲ್ಲ. ನಮಗೆ ಉತ್ತಮ ಪ್ರಾಕ್ಟೀಸ್ ಆಗಿದ್ದರೆ ಇಲ್ಲಿಗೆ ಏಕೆ ಬರುತ್ತಿದ್ದೆವು. ರಮೇಶ್ ಕುಮಾರ್ ಅವರು ಲಾ ಓದದೆ ಲಾಯರ್ ಆಗಿದ್ದಾರೆ'

* 2013ರ ಸೆಪ್ಟೆಂಬರ್‌ನಲ್ಲಿ ಎಂ.ಕೆ.ಗಣಪತಿ ಅವರಿಗೆ ರಾಜಗೋಪಾಲನಗರಕ್ಕೆ ಪೋಸ್ಟಿಂಗ್ ಆಯಿತು. ಆಗ ಜಾರ್ಜ್ ಅವರು ಗೃಹ ಸಚಿವರಾಗಿದ್ದರು. ಜಾರ್ಜ್ ಅವರು ಪೂರ್ವಾಗ್ರಹ ಪೀಡಿತರಾಗಿದ್ದರೆ. ಪೋಸ್ಟಿಂಗ್ ಆಗದಂತೆ ತಡೆಯಬಹುದಿತ್ತಲ್ಲವೇ?

* ಎಂ.ಕೆ.ಗಣಪತಿ ಅವರು ವಿಡಿಯೋದಲ್ಲಿ ಜಾರ್ಜ್ ಅವರ ಜೊತೆಗೆ ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರ ಹೆಸರನ್ನು ಹೇಳಿದ್ದಾರೆ. ಆದರೆ, ಅವರು ಎಂದೂ ಮೊಹಾಂತಿ ಅವರ ಕೈ ಕೆಳಗೆ ಕೆಲಸವನ್ನು ಮಾಡಿಲ್ಲ.

* ಗಣಪತಿ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಡೈಯಿಂಗ್ ಡಿಕ್ಲೆರೇಷನ್ ಆಗುವುದಿಲ್ಲ. ಕಿರುಕುಳ ಕೊಟ್ಟಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಸಿಐಡಿ ತನಿಖೆ ಬಗ್ಗೆ ನನಗೆ ನಂಬಿಕೆ ಇದೆ. ನಮ್ಮ ಅಧಿಕಾರಿಗಳ ಬಗ್ಗೆ ನನಗೆ ನಂಬಿಕೆ ಇದೆ.

* ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ-ಬೇರೆ ಪಕ್ಷಗಳ ಸರ್ಕಾರಗಳು ಇರುವಾಗ ಯಾರೂ ಸಿಬಿಐ ತನಿಖೆಗೆ ಶಿಫಾರಸು ಮಾಡುವುದಿಲ್ಲ. ಆದರೆ, 2013ರ ಮೇ ನಂತರ ಸುಮಾರು 8 ಕೇಸುಗಳನ್ನು ನಾವು ಸಿಬಿಐಗೆ ಕೊಟ್ಟಿದ್ದೇವೆ. ಲಕ್ಷಾಂತರ ಕೋಟಿಯ ಗಣಿ ಹಗರಣವನ್ನು ಏಕೆ ನೀವು ಸಿಬಿಐಗೆ ಕೊಟ್ಟಿಲ್ಲ.

* ಸಿಬಿಐ ಅಂದರೆ ಕಾಂಗ್ರೆಸ್ ಬ್ಯುರೋ ಆಫ್ ಇನ್‌ವೆಸ್ಟಿಗೇಶನ್ ಎಂದು ಹೇಳಿದ್ದಿರಿ. ಈಗ ನರೇಂದ್ರ ಮೋದಿ ಪ್ರಧಾನಿಯಾದ ತಕ್ಷಣ ಸಿಬಿಐ ಗಂಗೆಯಂತೆ ಪವಿತ್ರ ಆಯಿತೇ?. ನಾನು ನಿಮ್ಮಂತೆ ಮಾತನಾಡಲು ಹೋಗುವುದಿಲ್ಲ.

'ಡಿ.ಕೆ.ರವಿ ಅವರ ಪ್ರಕರಣವನ್ನು ಸಿಬಿಐಗೆ ಕೊಟ್ಟು ಒಂದು ವರ್ಷ ಆಯಿತು' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ. 'ಕೇಸಿನಲ್ಲಿನ ಎಲ್ಲಾ ಸಾಕ್ಷಿಗಳನ್ನು ನಾಶಪಡಿಸಿ ಅದನ್ನು ಸಿಬಿಐಗೆ ನೀಡಲಾಗಿದೆ' ಎಂದು ಆರೋಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್. ಈ ಪದವನ್ನು ಕಡತದಿಂದ ತೆಗೆಯುವಂತೆ ಸಚಿವ ರಮೇಶ್ ಕುಮಾರ್ ಒತ್ತಾಯ. ಈ ಬಗ್ಗೆ ಬಿಜೆಪಿ-ಕಾಂಗ್ರೆಸ್ ಸದಸ್ಯರಿಂದ ಆರೋಪ ಪ್ರತ್ಯಾರೋಪ.

* '2013ರ ಮೇ ನಂತರ ಸುಮಾರು 8 ಕೇಸುಗಳನ್ನು ನಾವು ಸಿಬಿಐಗೆ ಕೊಟ್ಟಿದ್ದೀರಿ. ಎಂ.ಕೆ.ಗಣಪತಿ ಅವರ ಕೇಸನ್ನು ಕೊಟ್ಟುಬಿಡಿ, 9 ಕೇಸುಗಳಾಗಲಿ' ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru DySP MK Ganapathi suicide case. Chief Minister Siddaramaiah speech in assembly on Wednesday, July 13, 2016.
Please Wait while comments are loading...