ಅಪಹರಣಕಾರರೆಂದು ತಿಳಿದು ದೊಡ್ಡಬಳ್ಳಾಪುರ ಪೊಲೀಸರ ಮೇಲೆ ಹಲ್ಲೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13: ತಪ್ಪು ತಿಳುವಳಿಕೆಯಿಂದಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯೊಂದರ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ವಿಶ್ವನಾಥಪುರ ಗ್ರಾಮಸ್ಥರು ಹಲ್ಲೆ ನಡೆಸಿ, ಇನ್ಸ್ ಪೆಕ್ಟರ್ ಮೂಳೆ ಮುರಿತಕ್ಕೊಳಗಾಗಿರುವ ವಿಲಕ್ಷಣ ಪ್ರಸಂಗವೊಂದು ವರದಿಯಾಗಿದೆ.

ಕಳ್ಳತನ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ದೊಡ್ಡಬಳ್ಳಾಪುರ ಟೌನ್ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಯಶವಂತ್ ಕುಮಾರ್ ಹಾಗೂ ಅದೇ ಠಾಣೆಯ ಇಬ್ಬರು ಪೇದೆಗಳು ಇತ್ತೀಚೆಗೆ ಮಾಮೂಲು ಬಟ್ಟೆ ತೊಟ್ಟು ಕಳ್ಳರ ಜಾಡು ಹಿಡಿದು ಹೊರಟಿದ್ದಾರೆ.

Mistaken as kidnappers, villagers assault police officials of Doddaballapur

ಅಲ್ಲಿ ಅಲೆದಾಡಿದ ಅವರಿಗೆ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ನ ಸದಸ್ಯನೊಬ್ಬ ತನ್ನ 13 ವರ್ಷದ ಮಗನೊಂದಿಗೆ ವಿಶ್ವನಾಥ ಪುರ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿದ್ದಾನೆ.

ತಕ್ಷಣವೇ ಜಾಗೃತರಾದ ಪೊಲೀಸ್ ಸಿಬ್ಬಂದಿ ಆತನತ್ತ ದಾಪುಗಾಲು ಹಾಕಿದೆ. ಯಾರೋ ಅಪರಿಚಿತರು ತನ್ನ ಕಡೆಗೇ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಕಳ್ಳರ ಗ್ಯಾಂಗ್ ನ ಸದಸ್ಯ ಅವರು ಹತ್ತಿರ ಬರುತ್ತಿದ್ದಂತೆ ಕಾಲ್ಕಿತ್ತಿದ್ದಾನೆ. ಆತನನ್ನು ಓಡಿಸಿಕೊಂಡು ಸ್ವಲ್ಪ ದೂರ ಹೋದರೂ ಆತ ಸಿಕ್ಕಿಲ್ಲ. ಹಾಗಾಗಿ, ಪುನಃ ಆತನಿದ್ದ ಸ್ಥಳಕ್ಕೆ ವಾಪಸ್ಸಾದ ಪೊಲೀಸರು ಅಲ್ಲೇ ವಿಚಲಿತನಾಗಿ ನಿಂತಿದ್ದ ಆತನ ಮಗನನ್ನು ಮಾತನಾಡಿಸಿ ಮನೆ ತೋರಿಸುವಂತೆ ಒತ್ತಾಯಿಸಿದ್ದಾರೆ.

ಹಾಗಾಗಿ, ಆ ಹುಡುಗ ಪೊಲೀಸರನ್ನು ತನ್ನೊಂದಿಗೆ ತನ್ನ ಮನೆಯ ಕಡೆಗೆ ಕರೆದುಕೊಂಡು ಹೋಗಿದ್ದಾನೆ.

ಆದರೆ, ಅಷ್ಟರಲ್ಲಿ ಗ್ರಾಮಕ್ಕೆ ತೆರಳಿದ ಕಳ್ಳರ ಗ್ಯಾಂಗ್ ನ ಸದಸ್ಯ, ಯಾರೋ ತನ್ನ ಮಗನನ್ನು ಅಪಹರಿಸಿದ್ದು ಇತ್ತ ಕಡೆಯೇ ಬರುತ್ತಿದ್ದಾರೆಂದು ಬಾಯಿ ಬಡಿದುಕೊಂಡಿದ್ದಾನೆ. ಇದರಿಂದ ರೊಚಿಗೆದ್ದ 15 ಗ್ರಾಮಸ್ಥರು ಬೈಕ್ ಮೇಲೆ ಹತ್ತಿಕೊಂಡು ಕಳ್ಳರ ಗ್ಯಾಂಗಿನವ ಹೇಳಿದ ಕಡೆಗೆ ಬಂದು, ಪೊಲೀಸ್ ಸಿಬ್ಬಂದಿ ಮೇಲೆ ಹಿಂದು ಮುಂದು ವಿಚಾರಿಸದೇ ಹಲ್ಲೆ ನಡೆಸಿದ್ದಾರೆ.

ಈ ವೇಳೆ, ಕುಮಾರ್ ಎಷ್ಟೇ ಸಮಜಾಯಿಷಿ ನೀಡಲು ಯತ್ನಿಸಿದರೂ, ತಮ್ಮ ನಿಜವಾದ ಗುರುತು ಹೇಳಲು ಪ್ರಯತ್ನಿಸಿದರೂ ಅದಕ್ಕೆ ಗ್ರಾಮಸ್ಥರು ಅವಕಾಶವನ್ನೇ ಕೊಡದೇ ಥಳಿಸಲಾರಂಭಿಸಿದ್ದಾರೆ. ಇನ್ನು, ಇಲ್ಲಿ ಹೆಚ್ಚು ಹೊತ್ತಿದ್ದರೆ ಅಪಾಯ ಎಂದರಿತ ಪೊಲೀಸರು ತಕ್ಷಣವೇ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಘಟನೆಯಲ್ಲಿ ಕುಮಾರ್ ಅವರಿಗೆ ಮೂಳೆಮುರಿತವಾಗಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A police sub-inspector of Doddaballapura Town Police Station and two of his colleagues were attacked by villagers of Vishwanathapura, after they mistook them as kidnappers.
Please Wait while comments are loading...