ಡಿಸಿಎಂ ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಶುರು ಮಾಡಿದ ಸಚಿವ ಜಮೀರ್!
ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಸಚಿವ ಜಮೀರ್ ಅಹಮದ್ ಖಾನ್ ಅವರು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಕೊಡುವಾಗ ಗಪ್‌ಚುಪ್ ಆಗಿದ್ದವರು ಈಗ ಎಗರಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ನಾಯಕು ಈಚೆಗೆ ಭೇಟಿಯಾಗಿದ್ದರು. ಇಬ್ಬರು ನಾಯಕರು ನಗುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಮತ್ತೆ ಇವರಿಬ್ಬರ ನಡುವೆ ವಾಕ್ಸಮರ ಜೋರಾಗಿದೆ. ಸಚಿವ ಜಮೀರ್ ಹಾಗೂ ಯತ್ನಾಳ್ ನಡುವೆ ವಾಕ್ಸಮರ ಶುರುವಾಗಿದ್ದು. ಬಿಜೆಪಿ ವಿರುದ್ಧವೂ ಸಚಿವ ಜಮೀರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮಾತ್ರ ಬ್ಯಾಟಿಂಗ್ ಮಾಡುತ್ತಿದ್ದ ಜಮೀರ್ ಅವರು ಇದೀಗ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪರವಾಗಿಯೂ ಬ್ಯಾಟಿಂಗ್ ಮಾಡುವುದಕ್ಕೆ ಶುರುಮಾಡಿಕೊಂಡಿದ್ದಾರೆ.
ಹೌದು ಸಚಿವ ಜಮೀರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಜೋರು ಬ್ಯಾಟಿಂಗ್ ಮಾಡುತ್ತಿದ್ದರು. ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪಗಳು ಕೇಳಿ ಬಂದಾಗ ಮೊದಲು ರಿಯಾಕ್ಟ್ ಮಾಡುತ್ತಿದ್ದವರೇ ಜಮೀರ್. ಇದೀಗ ಅವರು ಡಿಸಿಎಂ ಪರವಾಗಿಯೂ ಮಾತನಾಡುತ್ತಿರುವುದು ಕೂತೂಹಲ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಕತ್ತಿ ಮಸಿದಿರುವ ಅವರು, ಗುಂಪುಗಾರಿಕೆ ಹಾಗೂ ಆಂತರಿಕ ಕಚ್ಚಾಟದಿಂದ ಕೆಂಗೆಟ್ಟು ಬೌದ್ಧಿಕವಾಗಿ ದಿವಾಳಿಯಾಗಿರುವ ಬಿಜೆಪಿಯು ರಾಜ್ಯದ ಜನಪರ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

ರಾಜ್ಯದಲ್ಲಿ ಎಂದೂ ಜನರಿಂದ ಬಹುಮತ ಪಡೆಯದ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿತ್ತು. ಹತ್ತಾರು ಹಗರಣ ಮಾಡಿ 40 ಪರ್ಸೆಂಟ್ ಸರ್ಕಾರ ಎಂಬ ಕುಖ್ಯಾತಿ ಪಡೆದು ಜನರಿಂದ ತಿರಸ್ಕೃತವಾಗಿದೆ. ಪ್ರತಿ ಪಕ್ಷ ಸ್ಥಾನದ ಜವಾಬ್ದಾರಿಯನ್ನೂ ಸಹ ಸರಿಯಾಗಿ ನಿಭಾಯಿಸದೆ ವಿಫಲಗೊಂಡು. ಇದೀಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಎಂಬ ಹೊಸ ನಾಟಕ ಆರಂಭಿಸಿದೆ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮರ್ಪಕವಾಗಿ ಜಾರಿ ಮಾಡಿದೆ. ಜನಪರ ತೀರ್ಮಾನಗಳನ್ನು ಮಾಡಿದೆ ಇದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅನಗತ್ಯ ವಿಷಯಗಳ ಚರ್ಚೆ ಮಾಡ್ತಿದೆ. ಮೊದಲಿಗೆ ಮುಡಾ ಹಗರಣ ಎಂದರು, ನಂತರ ವಖ್ಫ್ ಆಸ್ತಿ ವಿಷಯ ತಂದರು. ಇದೀಗ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣ ವಿಷಯವಾಗಿ ಹೋರಾಟ ಎನ್ನುತ್ತಿದ್ದಾರೆ. ರಾಜಕೀಯವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಪ್ರಿಯಾಂಕಾ ಅವರಿಗೆ ಸಂಬಂಧವೇ ಇಲ್ಲದಿರುವ ಪ್ರಕರವಾಗಿರುವ ಸಚಿನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ಕೇಳುತ್ತಿದ್ದಾರೆ. ಇದು ಬಿಜೆಪಿ ಅವರ ಎಳಸುತನಕ್ಕೆ ಸಾಕ್ಷಿ ಎಂದು ಜಮೀರ್ ಅಹಮದ್ ಖಾನ್ ಲೇವಡಿ ಮಾಡಿದ್ದಾರೆ.
ವಖ್ಫ್ ವಿಚಾರದಲ್ಲಿ ಅಧಿವೇಶನದಲ್ಲಿ ಎರಡು ಸದನಗಳಲ್ಲಿ ಸಮರ್ಪಕ ಉತ್ತರ ನೀಡಿದ್ದೇವೆ. ಆಗ ಗಪ್ ಚುಪ್ ಆಗಿದ್ದರು. ಬಿಜೆಪಿಯ ಯಾವ ನಾಯಕರೂ ಏನೂ ಮಾತನಾಡಲಿಲ್ಲ. ವಿಧಾನಸಭೆಯಲ್ಲಿ ಉತ್ತರ ನೀಡುವಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಪ್ಪಿಸಿಕೊಂಡು ಹೋದರು. ಅಂದು ನಾಪತ್ತೆ ಆಗಿದ್ದವರು ಈಗ ಮತ್ತೆ ಕಂಪ್ಲಿಯಿಂದ ಹೋರಾಟ ಎಂದು ಹೊರಟಿದ್ದಾರೆ. ಜನರ ದಿಕ್ಕನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಪಾಠವನ್ನು ಜನ ಕಲಿಸಲಿದ್ದಾರೆ. ಬಿಜೆಪಿಯವರು ಎಷ್ಟೇ ಬಟ್ಟೆ ಹರಿದುಕೊಂಡು ಅರಚಿಕೊಂಡರೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದಿದ್ದಾರೆ.












Click it and Unblock the Notifications