ಶ್ರೀರಾಮುಲು ಕಾಂಗ್ರೆಸ್ ಸೇರುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ!
ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಒಳಜಗಳ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಎನ್ನುವ ವಿಷಯಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಶ್ರೀರಾಮುಲು ಅವರು ಕಾಂಗ್ರೆಸ್ ಸೇರಲಿದ್ದಾರೆಯೇ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಕಟ್ಟಿಹಾಕುವ ಉದ್ದೇಶದಿಂದಲೇ ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಸೆಳೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈಚೆಗೆ ಶ್ರೀರಾಮುಲು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದೇ ಇದಕ್ಕೆ ಕಾರಣ. ಇನ್ನು ಈ ರೀತಿಯ ಚರ್ಚೆಗಳ ನಡುವೆಯೇ ಶ್ರೀರಾಮುಲು ಅವರು ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸತೀಶ್ ಜಾರಕಿಹೊಳಿ ಅವರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಶ್ರೀರಾಮುಲು ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆಗಳು ನಡೆದಿರುವಾಗಲೇ ಸತೀಶ್ ಜಾರಕಿಹೊಳಿ ಅವರು ಶ್ರೀರಾಮುಲು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಬಗ್ಗೆ ಮಾತನಾಡಿದ್ದಾರೆ. ಶ್ರೀರಾಮುಲು ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್‌ಗೆ ಬರುವುದಾದರೆ, ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಇದು ಭಾರೀ ಅಚ್ಚರಿಗೆ ಕಾರಣವಾಗಿದೆ. ವಾಲ್ಮೀಕಿ ಸಮುದಾಯದ ನಾಯಕರೊಬ್ಬರನ್ನು ಸತೀಶ್ ಜಾರಕಿಹೊಳಿ ಅವರಿಗೆ ಪೈಪೋಟಿಯಾಗಿ ಕಾಂಗ್ರೆಸ್‌ನಲ್ಲಿ ಬೆಳೆಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ಲಾನ್ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಶ್ರೀರಾಮುಲು ಅವರನ್ನು ಸೆಳೆಯಲಾಗುತ್ತಿದೆ ಎನ್ನುವ ವಿಷಯ ಚರ್ಚೆಯಾಗುತ್ತಿರುವಾಗಲೇ ಸತೀಶ್ ಜಾರಕಿಹೊಳಿ ಅವರು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.

ಶ್ರೀರಾಮುಲು ಬಿಜೆಪಿ ಬಿಡುವುದಿಲ್ಲ ಹಾಗೂ ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದಾರೆ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತಹ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಹೀಗಾಗಿ ಶ್ರೀರಾಮುಲು ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಗಳು ಮುಂದುವರಿದಿವೆ.
ಶ್ರೀರಾಮುಲು ಬಂದರೆ ಅಭ್ಯಂತರವಿಲ್ಲ: ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಯಾವುದೇ ಅಭ್ಯಂತರವಿಲ್ಲ ಅಂತ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಅಲ್ಲದೆ ಅವರು ಪಕ್ಷಕ್ಕೆ ಬರುತ್ತಾರೆ ಎನ್ನುವುದು ಕೇವಲ ವದಂತಿ ಮಾತ್ರ. ವಿರೋಧದ ಬಗ್ಗೆ ಏನಾದರು ಮಾತನಾಡಿದರೆ ನನಗೆ ಹೈಕಮಾಂಡ್‌ನಿಂದ ನೋಟಿಸ್ ಬರುತ್ತೆ. ಆ ನೋಟಿಸ್‌ಗೆ ಉತ್ತರ ಕೊಡಬೇಕಾಗುತ್ತದೆ ಎಂದಿದ್ದಾರೆ. ಈ ಮೂಲಕ ಅವರು ಪೂರ್ಣ ಮನಸ್ಸಿನಿಂದ ಕರೆದಂತಿಲ್ಲ ಎಂದೂ ಹೇಳಲಾಗುತ್ತಿದೆ.

ನಾನು ಸಿಎಂ ಆಗುತ್ತೇನೆ ಎಂದಿಲ್ಲ: ಸಿಎಂ ಆಗುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ನಾನು ಸಿಎಂ ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಸಿಎಂ ಅಭ್ಯರ್ಥಿ ಅಂತ ಮಾತ್ರ ಹೇಳಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲರ ಪಾತ್ರವೂ ಇದೆ. ಅದರಲ್ಲಿ ನನ್ನ ಪಾತ್ರವೂ ಇದೆ. ಉಳಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಂದಾಗಿದ್ದೇವೆ ಎಂದಿದ್ದಾರೆ.












Click it and Unblock the Notifications