ಮುಖ್ಯಮಂತ್ರಿ ಬದಲಾವಣೆ ಕುರಿತು ಅಚ್ಚರಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ
ಮೈಸೂರು, ಅಕ್ಟೋಬರ್ 09: ಮುಡಾ ಹಗರಣ ಮುಖ್ಯಮಂತ್ರಿ ಕೊರಳಿಗೆ ಸುತ್ತಿಕೊಂಡಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಅವರ ಮೇಲೆ ಹೆಚ್ಚು ಒತ್ತಡಗಳು ಕೇಳಿಬಂದಿದೆ. ಈ ಬೆನ್ನಲ್ಲೇ ದಲಿತ ಸಿಎಂ ಕೂಗು ಕೇಳಿ ಬಂದಿದ್ದು, ಹೈಕಮಾಂಡ್ ನಾಯಕರನ್ನ ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿರುವುದು ಹಲವು ಅನುಮಾನಗಳು ಹುಟ್ಟಿಕೊಳ್ಳುವಂತೆ ಮಾಡಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಲಿ ಸಚಿವ ಹಾಗೂ ದಲಿತ ನಾಯಕ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸ್ಥಾನದ ಕುರಿತು ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಐದು ವರ್ಷ ಇರ್ತಾರೋ, ಮೂರು ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ಆ ಕುರಿತು ಮಾಹಿತಿ ಬೇಕಿದ್ದರೆ ಹೈಕಮಾಂಡ್ ಅನ್ನೇ ಕೇಳ ಬೇಕು. ಆದರೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯ ಮಂತ್ರಿಗಳು. ಇದರಲ್ಲಿ ಯಾವುದೇ ಪ್ರಶ್ನೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ನಾನು ಸಿದ್ದರಾಮಯ್ಯ ಅವರ ಜೊತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂಥ ಯಾವುದೇ ಚರ್ಚೆಗಳೂ ನಡೆದಿಲ್ಲ. ವಿಪಕ್ಷಗಳು, ಮಾಧ್ಯಮಗಳು ಚರ್ಚೆ ಮಾಡುತ್ತಿವೆ ಅಷ್ಟೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಮುಖ್ಯಮಂತ್ರಿ ರೇಸ್ ನಲ್ಲಿ ತಮ್ಮ ಹೆಸರು ಕೇಳಿ ಬಂದಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಸ್ಥಾನದ ಚರ್ಚೆ ಬಂದಾಗ ವಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆಯಾಗಲಿ, ಬೆಳವಣಿಗೆಗಳಾಗಲಿ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಬೆಂಬಲಿಗರು ತಮ್ಮ ನಾಯಕರಿಗೆ ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಹಾಕೋದು ಸಾಮಾನ್ಯ. ಅದನ್ನೇ ಮುಂದಿಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಅನ್ನುವುದು ಸರಿಯಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಡಿ.ಕೆ.ಶಿವಕುಮಾರ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮತ್ತೊಬ್ಬರ ವಿಚಾರ ನಾನು ಹೇಳಲು ಆಗುವುದಿಲ್ಲ. ರಾಜಕಾರಣಿಗಳು ಒಂದೆಡೆ ಸೇರಿದ ಮೇಲೆ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ವಿಶೇಷ ಏನೂ ಇಲ್ಲ. ಮೈಸೂರು ಭೇಟಿಯಲ್ಲೂ ಯಾವುದೇ ವಿಶೇಷ ಇಲ್ಲ. ಇಡೀ ದಿನ ಮೈಸೂರಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ ಅಷ್ಟೇ ಎಂದು ತಿಳಿಸಿದರು.
ಮುಡಾ ಹಗರಣದಿಂದ ಕಂಗೆಟ್ಟಿರುವ ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಕೆಳಗಿಳಿಸಲು ಕಾಂಗ್ರೆಸ್‌ನೊಳಗೆಯೇ ತೀವ್ರ ಪ್ರಯತ್ನ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ದಲಿತ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ಜಿ.ಪರಮೇಶ್ವರ್ ಸಾಲು ಸಾಲು ಸಭೆಗಳನ್ನ ನಡೆಸಿದ್ದು, ಇದರ ಹಿಂದೆ ನಾನಾ ರೀತಿಯ ಊಹಾಪೋಹಗಳು ಹರಡುತ್ತಿವೆ. ಮಂಗಳವಾರ ರಾತ್ರಿ ಮೈಸೂರಿನಲ್ಲಿ ಸತೀಶ್ ಜಾರಕಿಹೊಳಿ, ಜಿ. ಪರಮೇಶ್ವರ್ ಮತ್ತು ಎಚ್.ಸಿ.ಮಹದೇವಪ್ಪ ಡಿನ್ನರ್ ನೆಪದಲ್ಲಿ ರಹಸ್ಯ ಸಮಾಲೋಚನೆ ನಡೆಸಿರುವುದು ಮತ್ತಷ್ಟು ಕುತೂಹಲ ಉಂಟುಮಾಡಿದೆ.












Click it and Unblock the Notifications