C.T.Ravi: ಸಿ.ಟಿ ರವಿ ಅವರನ್ನ ಎನ್‌ಕೌಂಟರ್ ಮಾಡಲು ನಡೆದಿತ್ತಾ ಪ್ಲ್ಯಾನ್? ಅನುಮಾನಕ್ಕೆ ಕಾರಣಗಳಿವು
ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿರುವ ಆರೋಪದ ಮೇರೆಗೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಈ ಬಂಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿ.ಟಿ.ರವಿ ಅವರನ್ನು ಪೊಲೀಸರು ಎನ್‌ಕೌಂಟರ್ ಮಾಡುವ ಪ್ಲ್ಯಾನ್ ಮಾಡಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿ.ಟಿ.ರವಿ ಅವರನ್ನು ಮುಗಿಸಬೇಕು ಎನ್ನುವ ಉದ್ದೇಶ ಪೊಲೀಸರಿಗೆ ಇತ್ತು ಎಂಬ ಅನುಮಾನವಿದೆ. ಆದರೆ, ಪೊಲೀಸರಿಗೆ ಒಳ್ಳೆಯ ಅವಕಾಶ ಸಿಗಲಿಲ್ಲ. ಸಿ.ಟಿ.ರವಿ ಅವರ ಲೈವ್ ಲೊಕೇಶನ್ ಕೂಡ ಸಿಕ್ಕಿದ್ದರಿಂದ ಅವರ ಚಲನವಲನ ಎಲ್ಲರಿಗೂ ತಿಳಿಯುತ್ತಿತ್ತು. ಮಾಧ್ಯಮದವರು ಕೂಡ ಸಿ.ಟಿ.ರವಿ ಅವರನ್ನು ಫಾಲೋ ಮಾಡುತ್ತಿದ್ದರು. ಈ ಕಾರಣದಿಂದಲೇ ಸಿ.ಟಿ.ರವಿ ಅವರಿಗೆ ಯಾವುದೇ ತೊಂದರೆಗಳು ಆಗಲಿಲ್ಲ. ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ.

ತಡರಾತ್ರಿಯೂ ಬೆಳಗಾವಿ ಮಾಧ್ಯಮ ಸಿಬ್ಬಂದಿ ಪೊಲೀಸರನ್ನು ಹಿಂಬಾಲಿಸಿದ್ದರು. ವಿಡಿಯೋ ಮಾಡಿ ಎಲ್ಲೆಡೆ ಹಂಚಿಕೊಳ್ಳುತ್ತಿದ್ದರು. ಒಂದು ವೇಳೆ ಇದೆಲ್ಲ ಆಗಿಲ್ಲ ಎಂದಿದ್ದರೆ ಸಿ.ಟಿ.ರವಿ ಅವರನ್ನ ಎನ್‌ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತು ಎಂದು ಅನಿಸುತ್ತಿದೆ ಎಂದು ಜೋಶಿ ಹೇಳಿದ್ದಾರೆ.
ಸಿ.ಟಿ.ರವಿ ವಿಚಾರದಲ್ಲಿ ತುಂಬಾ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ. ಸಿ.ಟಿ.ರವಿ ಬಂಧನದ ವಿಚಾರದಲ್ಲಿ ಸರ್ಕಾರದ ಕೈಗೊಂಬೆಗಳಾಗಿ ವರ್ತಸಿದ ಅಧಿಕಾರಿಗಳ ಮೇಲೆ ತಕ್ಕ ಪಾಠ ಕಲಿಸುತ್ತೇವೆ. ನ್ಯಾಯಾಲಯದಲ್ಲಿ ಈ ಬಗ್ಗೆಯೂ ಪ್ರಶ್ನಿಸುತ್ತೇವೆ. ರವಿ ಅವರು ಅಶ್ಲೀಲ ಪದ ಬಳಸಿದ್ದಾರೋ ಇಲ್ಲವೋ ಎಂಬುದನ್ನ ಸಭಾಪತಿಗಳು ನಿರ್ಧರಿಸುತ್ತಾರೆ, ಅವರ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಬಂಧಿತ ಸಿ.ಟಿ.ರವಿ ಅವರನ್ನು ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಎಂದು ಸೂಚನೆ ನೀಡಿದ್ದರು. ಆದರೆ ಅಜ್ಞಾತರ ನಿರ್ದೇಶನದಂತೆ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಪೊಲೀಸರ ಮೇಲೆ ಒತ್ತಡ ಹೇರಿದ ಪ್ರಭಾವಿಗಳು ಯಾರೆಂಬುದರ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಎಂದು ಬಿಜೆಪಿ ಆಗ್ರಹಿಸಿದೆ.
ಡಿಸಿಎಂ ಡಿಕೆಶಿ ಅವರು ಈ ಪ್ರಕರಣದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದು ಏಕೆ? ಪ್ರಭಾವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಉಸ್ತುವಾರಿ ಸಚಿವರನ್ನು ಬಿಟ್ಟು ನೇರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹಾಯ ಪಡೆದಿದ್ದೇಕೆ? ಎಂದು ಪ್ರಶ್ನಿಸಿದೆ. ವಿಧಾನಪರಿಷತ್ ಸಭಾಪತಿಯವರೇ ಕಲಾಪದಲ್ಲಿ ಆಕ್ಷೇಪಾರ್ಹ ಪದ ಬಳಿಕೆ ಮಾಡಿರುವುದಕ್ಕೆ ಯಾವುದೇ ಆಡಿಯೋ ವಿಡಿಯೋ ದಾಖಲೆ ಇಲ್ಲ ಎಂದು ಸ್ಪಷ್ಟಪಡಿಸಿದರೂ, ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫ್ರಾಸ್ಟರ್ಟೆಡ್‌ನಿಂದ ಹೊರಗೆ ಬಂದಿಲ್ಲ ಎಂದಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ನಿಮ್ಮ ಹಳದಿ ಕನ್ನಡಕವನ್ನು ಬಿಚ್ಚಿಟ್ಟು ಬರಿ ಕಣ್ಣಿನಿಂದ ನೋಡಿ ಎಲ್ಲವೂ ನೀಟಾಗಿ ಕಾಣುತ್ತದೆ. ಇಲ್ಲದ ಆರೋಪ ಮಾಡಿ ದೂರು ನೀಡಿ ರಾದ್ಧಾಂತ ಮಾಡಿದ ನಿಮಗೆ ನ್ಯಾಯಾಲಯದಲ್ಲೂ ಸೋಲಾಗಿದೆ. ಇನ್ನಾದರೂ ಸಿಂಪತಿಗಾಗಿ ಡ್ರಾಮಾ ಮಾಡುವುದನ್ನು ಬಿಡಿ ಎಂದು ವಾಗ್ದಾಳಿ ನಡೆಸಿದೆ.












Click it and Unblock the Notifications