Minister Nagendra : ಜನಪ್ರತಿನಿಧಿಗಳು ಒಪ್ಪಿದರೆ ಮತ್ತೆ ಬಳ್ಳಾರಿ ಅಖಂಡ ಜಿಲ್ಲೆಗೆ ಕ್ರಮ: ಸಚಿವ ನಾಗೇಂದ್ರ
ಬಳ್ಳಾರಿ, ಜೂನ್ 06: ದೊಡ್ಡ ಜಿಲ್ಲೆಯಾಗಿದ್ದ ಬಳ್ಳಾರಿಯನ್ನು ಎರಡು ಜಿಲ್ಲೆಗಳನ್ನಾಗಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಸ್ಥಳೀಯರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅವರೆಲ್ಲರೂ ಒಪ್ಪುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಚರ್ಚಿಸಿ ಅಖಂಡ ಜಿಲ್ಲೆಯಾಗಿ ಮಾಡುವ ಆಸೆಯನ್ನ ಸಚಿವ ನಾಗೇಂದ್ರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ನಾನಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ದೊಡ್ಡ ಜಿಲ್ಲೆಯಾಗಿದ್ದ ಬಳ್ಳಾರಿಯನ್ನು ಎರಡು ಜಿಲ್ಲೆಗಳನ್ನಾಗಿ ಮಾಡಲಾಗಿದೆ.

ಜಿಲ್ಲೆಯನ್ನು ಇಬ್ಭಾಗ ಮಾಡಿರುವುದು ಅತ್ಯಂತ ನೋವು ತಂದಿದೆ. ಹಂಪಿ, ತುಂಗಭದ್ರಾ ಜಲಾಶಯ ನಮ್ಮ ಜತೆ ಇಲ್ಲಎನ್ನುವ ಕೊರಗು ಇಂದಿಗೂ ಕಾಡುತ್ತಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ.
ಮತ್ತೆ ಅಖಂಡ ಬಳ್ಳಾರಿ ಮಾಡಬೇಕೆನ್ನುವ ಆಸೆ ವ್ಯಕ್ತಪಡಿಸುವುದು ತಪ್ಪಲ್ಲ. ಈ ಹಿಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮತ್ತೆ ಅಖಂಡ ಜಿಲ್ಲೆಯನ್ನು ಒಂದು ಮಾಡುತ್ತೇವೆ ಎಂದು ಹೇಳಿದ್ದೆವು. ವಿಜಯನಗರ ಜಿಲ್ಲೆಯ ಸ್ಥಳೀಯರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅವರೆಲ್ಲರೂ ಒಪ್ಪುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಚರ್ಚಿಸಲಾಗುವುದು ಎಂದು ಸಚಿವ ನಾಗೇಂದ್ರ ತಿಳಿಸಿದರು.
ಬಳ್ಳಾರಿ ಸೇರಿ ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ತೊಂದರೆ ನೀಡುವಂತಹ ರೌಡಿಸ್‌ಂ, ದೌರ್ಜನ್ಯ ನಡೆಸುವುದು ಸೇರಿ ಯಾವುದೇ ರೀತಿಯ ರೌಡಿಸ್‌ಂ ನಡೆಸುವಂತಿಲ್ಲ, ರೌಡಿಸ್‌ಂ ಎಂದು ಯಾರೂ ಬಾಲ ಬಿಚ್ಚುವಂತಿಲ್ಲ ಎಂದು ಸಚಿವ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರಿಗೆ ಹೆದರಿಸಿ, ದೌರ್ಜನ್ಯ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ರೌಡಿಸ್‌ಂ ಬಿಟ್ಟು ಜೀವನ ನಡೆಸುವವರು ಪುನಃ ದೌರ್ಜನ್ಯಕ್ಕೆ ಮುಂದಾದಲ್ಲಿ ಜೈಲಿಗೆ ಕಳುಹಿಸಲಾಗುವುದು ಅಥವಾ ಊರು ಬಿಡಿಸಲಾಗುವುದು ಎಂದು ಎಚ್ಚರಿಸಿದರು.
ನಗರದಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯ ಹೆಸರನ್ನು ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಗಿ ಬದಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ಕಲ್ಯಾಣ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಹೇಳಿದರು.
ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಹಾಗೂ ನಡೆಯುತ್ತಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಕ್ರಮಕೈಗೊಳ್ಳಲಾಗುವುದು. ಪ್ರಾಮಾಣಿಕವಾಗಿ ಮತ್ತು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೂಚಿಸಲಾಗುವುದು. ಆದರೂ, ನಿರ್ಲಕ್ಷ್ಯ ಮುಂದುವರಿದಲ್ಲಿಅಮಾನತು ಅಥವಾ ವಜಾಗೊಳಿಸಲು ಸಹ ಹಿಂಜರಿಯುವುದಿಲ್ಲ. ಸರಕಾರಿ ಕಚೇರಿಗಳಲ್ಲಿ ಪಕ್ಷಗಳ ಕಾರ್ಯಕರ್ತರ ಹೆಸರಲ್ಲಿದೌರ್ಜನ್ಯಕ್ಕೆ ಮುಂದಾದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದಲ್ಲಿ ಲಾರಿಗಳ ಸಂಚಾರ ಮುಕ್ತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಗಲು ಹೊತ್ತಲ್ಲಿ ಭಾರಿ ವಾಹನ ಸಂಚಾರ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ಅಧಿಕಾರಗಳ ಜತೆ ಚರ್ಚಿಸಿ ವಾಹನಗಳ ಸಂಚಾರ ನಿರ್ಬಂಧಿಸಲಾಗುವುದು. ಇದಲ್ಲದೆ, ನಗರದಲ್ಲಿ ಮತ್ತೊಂದು ರಿಂಗ್ ರೋಡ್ ನಿರ್ಮಾಣಕ್ಕೆ ಚರ್ಚಿಸಲಾಗುವುದು. 24*7 ಕುಡಿಯುವ ನೀರಿನ ಯೋಜನೆ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
ಕಾಮಗಾರಿ ಗುತ್ತಿಗೆ ಪಡೆದಿದ್ದ ಏಜೆನ್ಸಿ, ಕಾಮಗಾರಿ ಪೂರ್ಣಗೊಳಿಸಲು ವಿಫಲವಾಗಿದ್ದು ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಕುಡಿಯುವ ನೀರು ಪೂರೈಕೆ ಬಗ್ಗೆ ಸಮಗ್ರ ಚರ್ಚೆ ಮಾಡಿ, ನಿರಂತರ ನೀರು ಪೂರೈಕೆ ಮಾಡಲಾಗುವುದು. ಅಭಿವೃದ್ಧಿ ವಿಚಾರದಲ್ಲಿಮುಂದಿನ ದಿನಗಳಲ್ಲಿರಾಜ್ಯ ಬಳ್ಳಾರಿ ಕಡೆ ನೋಡುವಂತೆ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications