ಗೃಹಿಣಿಯರಿಗೆ ಗುಡ್ ನ್ಯೂಸ್: ಗೃಹಲಕ್ಷ್ಮೀ 3 ತಿಂಗಳ ಹಣ ಮೇನಲ್ಲಿ ಬಿಡುಗಡೆ
ಬೆಳಗಾವಿ ಏಪ್ರಿಲ್ 30: ರಾಜ್ಯಾದ್ಯಂತ ಇರುವ 'ಗೃಹಲಕ್ಷ್ಮೀ'ಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಗೃಹಲಕ್ಷ್ಮೀ ಮೂರು ತಿಂಗಳ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಹೌದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಕೂಡ ಒಂದು. ಗೃಹಲಕ್ಷ್ಮೀ ಹಣ ಪ್ರತೀ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ಜಮವಾಗುತ್ತಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಗೊಂಡಿಲ್ಲ. ಇದರಿಂದಾಗಿ ಅದೆಷ್ಟೋ ಜನ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಈ ಹಣವನ್ನು ಬಿಡುಗಡೆ ಮಾಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಅಂದಹಾಗೆ ಗೃಹಲಕ್ಷ್ಮೀ ಹಣ ಜನವರಿ, ಫೆಬ್ರವರಿ, ಮಾರ್ಚ್ ಈ ಮೂರು ತಿಂಗಳು ಫಲಾನುಭವಿಗಳಿಗೆ ತಲುಪಿಲ್ಲ. ಈ ಕಂತಿನ ಹಣದಿಂದ ಮನೆ ನಡೆಸುವ ಅದೆಷ್ಟೋ ಫಲಾನುಭವಿಗಳು ಹಣ ಬರದೇ ಇದ್ದರಿಂದ ಬೇಸರ ಹಂಚಿಕೊಂಡಿದ್ದರು. ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಕೂಡ ಮಾಡಿದ್ದರು.
ಕಳೆದ ದಿನ (ಏಪ್ರಿಲ್ 29) ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಕಂತಿನ ಹಣವನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿದ್ದಾರೆ. ಬಾಕಿ ಉಳಿಸಿದರು ಜನವರಿ, ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಇನ್ನೆರೆಡು ತಿಂಗಳ ಹಣವನ್ನು ಗೃಹಲಕ್ಷ್ಮೀ ಖಾತೆಗೆ ಜಮ ಮಾಡಲಾಗುವುದು ಎಂದರು.
ಆದರೆ ಬಿಜೆಪಿ ಈ ಬಗ್ಗೆ ಕಿಡಿ ಕಾರಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ರಾಜ್ಯವನ್ನು ಸಾಲದಲ್ಲಿ ಮುಳುಗಿಸುತ್ತಿದೆ. ಅಲ್ಲದೆ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವಂತಹ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ದಾಳಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ. ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಹೊರೆ ಮಾಡಿದೆ. ಇಂದನ ಬೆಲೆ ಏರಿಕೆ ಮಾಡಿದೆ, ಗ್ಯಾಸ್ ಬೆಲೆ ಏರಿಕೆ ಮಾಡಿದೆ, ಪ್ರತಿಯೊಂದು ದಿನಸಿ ಬೆಲೆಗಳು ಏರಿಕೆಯಾಗಿದೆ. ಇದರ ಬಗ್ಗೆ ಮೊದಲು ಬಿಜೆಪಿಯರು ಕೇಂದ್ರವನ್ನು ಪ್ರಶ್ನೆ ಮಾಡಲಿ. ನಾವು ಹಾಲಿನ ಬೆಲೆ ಏರಿಸಿದ್ದು ರೈತರಿಗೆ ಅನುಕೂಲ ಆಗಿದೆ ಹೊರೆ ಆಗಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಅಲ್ಲದೆ ರಾಜ್ಯ ಬಿಜೆಪಿಯಲ್ಲಿ ಘಟಾನುಘಟಿ ನಾಯಕರಿದ್ದಾರೆ, ರಾಜ್ಯಕ್ಕೆ ನ್ಯಾಯಕೊಡಿಸಲಿ. ನಮ್ಮ ಹಕ್ಕು ನಮ್ಮ ತೆರಿಗೆ ಎಂದು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿಗೆ ಇಲ್ಲ. ಸುಮ್ನೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಾರೆ. ಇದು ಪ್ರಯೋಜನವಿಲ್ಲ. ಕೇಂದ್ರದಲ್ಲಿ ಪ್ರಶ್ನಿಸಲಾಗದೇ ಇರುವವರು ರಾಜ್ಯ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ ಎಂದು ಗುಡುಗಿದ್ದಾರೆ.












Click it and Unblock the Notifications