ಖರಾಬು ಜಮೀನು ಮಂಜೂರು ಬಗ್ಗೆ ಸಚಿವ ಕೃಷ್ಣಬೈರೇಗೌಡ ಮಹತ್ವದ ಮಾಹಿತಿ
ರಾಜ್ಯದಲ್ಲಿ ಹಲವರ ಜಮೀನಿನಲ್ಲೇ ಖರಾಬು ಭೂಮಿ ಕೂಡ ಇರುತ್ತದೆ. ಇದನ್ನು ಕೆಲವರು ತಮ್ಮ ಸ್ವಾಧೀನಪಡಿಸಿಕೊಂಡಿರುವ ಉದಾಹರಣೆಗಳೂ ಇವೆ. ಸಾಮಾನ್ಯವಾಗಿ ಈ ಖರಾಬು ಜಮೀನಿನ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ. ಖರಾಬು ಜಮೀನನ್ನು ಮಂಜೂರು ಮಾಡಿಸಿಕೊಳ್ಳಬಹುದಾ? ಎನ್ನುವುದು ಹಲವರ ಪ್ರಶ್ನೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಮಹತ್ವದ ಮಾಹಿತಿ ನೀಡಿದ್ದಾರೆ. ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗಾದರೂ ಮಂಜೂರು ಮಾಡಲು ಸಾಧ್ಯವೇ? ಎಂಬ ಬಗ್ಗೆ ಸ್ಪಷ್ಟನೆಯೂ ನೀಡಿದ್ದಾರೆ.
ಈ ಬಗ್ಗೆ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಖರಾಬು ಜಮೀನಿನ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಿದ ಸಚಿವ ಕೃಷ್ಣಬೈರೇಗೌಡ, ಜಂಗಲ್ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ. ಆಗಿನ ಸರ್ಕಾರ ಸರಿಯಾದ ಹೆಜ್ಜೆಯನ್ನ ಇಟ್ಟಿಲ್ಲ. ಆದರೆ, ಅದನ್ನು ನಾವು ಸರಿಮಾಡುವ ಕೆಲಸದಲ್ಲಿದ್ದೇವೆ. ಈಗಾಗಲೇ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಇದರ ನೈಜತೆ ಪರಿಶೀಲಿಸುವ ಜವಾಬ್ದಾರಿ ಕೊಟ್ಟಿದ್ದೇವೆ. ಇದರ ಬಗ್ಗೆ ತನಿಖೆ ಆರಂಭವಾಗಿದೆ. ಆದರೆ, ಇನ್ನೂ ಪ್ರಗತಿ ಆಗಿಲ್ಲ. ಈ ತನಿಖೆಯನ್ನು ಶೀಘ್ರದಲ್ಲೇ ಮುಗಿಸಲು ಸೂಚಿಸಿದ್ದೇನೆ ಎಂದಿದ್ದಾರೆ.

ಖರಾಬು ಜಮೀನುಗಳ ಪೋಡಿ ಬಂದ್?
ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ಕೆಲವು ಪ್ರಕರಣಗಳು ಕಂಡು ಬಂದಿದ್ದು ಈ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ. ಇಂತಹ ಜಮೀನುಗಳು ಪೋಡಿ ಆಗುವುದು ಅಥವಾ ಭೂ ವ್ಯವಹಾರ ನಿಲ್ಲಿಸಬೇಕು ಎಂಬ ಕೂಗು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದಾರೆ. ಈಗಾಗಲೇ ಮಂಜೂರಾವರಿಗೆ ಆ ಜಮೀನು ಗ್ರ್ಯಾಂಟ್ ಆಗಿರುವುದರಿಂದ ಅವರ ಹಕ್ಕನ್ನು ಸರ್ಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನಾತ್ಮಕ ಸೂಚನೆ ನೀಡಿದ್ದಾರೆ. ಅವರ ಪತ್ರ ಕಾನೂನಿಗೆ ಬದ್ದವಾಗಿದೆ ಎಂದಿದ್ದಾರೆ.

ಇದರ ನಡುವೆ ಒಂದೇ ಕುಟುಂಬಕ್ಕೆ ಸುಮಾರು 119 ಎಕರೆ ಜಾಗ ಕೊಟ್ಟಿದ್ದಾರೆ. ಈ ವಿಧಾನದಲ್ಲಿ ಮಂಜೂರಾದ ಜಮೀನು ಜಂಗಲ್ ಖರಾಬು. ಈ ಎರಡೂ ಪ್ರಶ್ನೆ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಶೀಘ್ರ ವಿಚಾರಣೆ ಮುಗಿದರೆ, ಇದರ ರದ್ದತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಹೀಗಾಗಿ ಶೀಘ್ರ ವಿಚಾರಣೆಗೆ ಸೂಚಿಸಲಾಗಿದೆ. ಅಲ್ಲದೆ, ವಿಚಾರಣೆ ಮುಗಿಯುವವರೆಗೆ ಏನು ಮಾಡಬಹುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಬಳಿಯೂ ಸಲಹೆ ಕೇಳಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಒಟ್ಟಾರೆ ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications