ಡಿವೈಎಸ್‌ಪಿ ಗಣಪತಿ ಕೇಸ್‌ನಲ್ಲಿ ಸಚಿವ ಜಾರ್ಜ್‌ಗೆ ಸುಪ್ರೀಂಕೋರ್ಟ್ ರಿಲೀಫ್
ನವದೆಹಲಿ: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣವು ಇಡೀ ರಾಜ್ಯದ್ಯಾಂತ ಸಂಚಲನ ಮೂಡಿಸಿತ್ತು. ಈ ಕೇಸ್‌ನಲ್ಲಿ ಕಾಂಗ್ರೆಸ್ ಸಚಿವರಾಗಿರುವ ಕೆ.ಜೆ.ಜಾರ್ಜ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ತನಿಖೆಯಲ್ಲಿ ಈ ಕೇಸ್‌ನಲ್ಲಿ ಜಾರ್ಜ್ ಅವರ ಪಾತ್ರವಿಲ್ಲ ಎಂದು ನೀಡಿದ್ದ ವರದಿ ಆಧರಿಸಿ ಹೈಕೋರ್ಟ್ ಕ್ಲೀನ್‌ಚಿಟ್ ನೀಡಿತ್ತು. ಆದರೂ ಇದನ್ನು ಪ್ರಶ್ನಿಸಿ ಗಣಪತಿ ಅವರ ಸಹೋದರಿ ಸಬೀತಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜಾರ್ಜ್ ಅವರಿಗೆ ಕ್ಲೀನ್‌ಚಿಟ್ ನೀಡಿದ್ದ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದಿದೆ. ಇದರಿಂದ ಕೆ.ಜೆ.ಜಾರ್ಜ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಈ ಮೂಲಕ ಸಬೀತಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.

ಏನಿದು ಪ್ರಕರಣ?: ಮೂಲತಃ ಕೊಡಗು ಜಿಲ್ಲೆಯವರಾದ ಗಣಪತಿಯವರು ಮಂಗಳೂರು ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2016ರ ಜುಲೈ 7ರಂದು ಮಡಿಕೇರಿಯ ಲಾಡ್ಜ್‌ವೊಂದರ ಕೊಠಡಿಯಲ್ಲಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ಇಡೀ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ, ಗಣಪತಿ ಅವರು ಆತ್ಮಹತ್ಯೆಗೆ ಶರಣಾಗುವ ಮುನ್ನ ಸುದ್ದಿ ವಾಹಿನಿಯೊಂದಕ್ಕೆ ಇಂಟರ್ವ್ಯೂ ನೀಡಿದ್ದರು. ಅದರಲ್ಲಿ ಅಂದಿನ ಹೋಂ ಮಿನಿಸ್ಟರ್ ಆಗಿದ್ದ ಕೆ.ಜೆ.ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ.ಪ್ರಸಾದ್ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಗಣಪತಿ ಆರೋಪಿಸಿದ್ದರು.
ಇದನ್ನು ಆಧರಿಸಿ ಗಣಪತಿ ಅವರ ಪುತ್ರ ನೀಡಿದ್ದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ವಿಚಾರಣೆ ನಡೆಸಿದ್ದ ಸಿಬಿಐ 2019ರಲ್ಲಿ ಬಿ ರಿಪೋರ್ಟ್ ಸಲ್ಲಿಸಿತ್ತು. 'ಸಾಯುವ ಮುನ್ನ ಗಣಪತಿ ಅವರು ಹೇಳಿದ್ದ ಯಾವುದೇ ಸಂಗತಿಯೂ ಅವರ ಆತ್ಮಹತ್ಯೆಗೆ ಕಾರಣವಲ್ಲ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ಕ್ಲೀನ್‌ಚಿಟ್ ಕೂಡ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಗಣಪತಿ ಸಹೋದರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಈಗ ಜಾರ್ಜ್ ಪರವಾಗಿ ತೀರ್ಪು ಬಂದಿದೆ. ಹಲವು ವರ್ಷಗಳಿಂದ ಜಾರ್ಜ್ ಅವರಿಗೆ ಸುತ್ತಿಕೊಂಡಿದ್ದ ಈ ಕೇಸ್‌ನ ಆರೋಪದಿಂದ ಮುಕ್ತಿ ಸಿಕ್ಕಂತಾಗಿದೆ. ಸುಪ್ರೀಂಕೋರ್ಟ್‌ನಲ್ಲೂ ಈ ಕೇಸ್‌ನಲ್ಲಿ ಜಯ ಸಿಕ್ಕಿರುವುದಕ್ಕೆ ಸಚಿವ ಜಾರ್ಜ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸತ್ಯಮೇವ ಜಯತೆ. ನಿಧಾನವಾದರೂ ಸತ್ಯಕ್ಕೆ ಜಯ ಸಿಗುವುದು ನಿಶ್ಚಿತ ಎಂಬುದಕ್ಕೆ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣ ಉತ್ತಮ ಉದಾಹರಣೆ. ಸಚಿವ ಕೆಜೆ ಜಾರ್ಜ್ ಅವರ ಮೇಲೆ ವಿನಾಕಾರಣ ಆರೋಪ ಮಾಡಿದ್ದ ಬಿಜೆಪಿ ಪಕ್ಷದ ಸುಳ್ಳುಗಳಿಗೆ ಸುಪ್ರೀಂ ಕೋರ್ಟಿನ ತೀರ್ಪು ಮುಖಕ್ಕೆ ಹೊಡೆದ ರೀತಿ ಇದೆ. ಸುಳ್ಳಿನ ವಿಜೃಂಭಣೆ ತಾತ್ಕಾಲಿಕ, ಸತ್ಯದ ಗೆಲುವು ಶಾಶ್ವತ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ, ನಮ್ಮ ಸಚಿವರ ಮೇಲೆ ಸುಳ್ಳು ಆರೋಪ ಮಾಡಿದ ಬಿಜೆಪಿ ಈಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.












Click it and Unblock the Notifications