ಸಚಿವ ಎಚ್.ಸಿ ಮಹದೇವಪ್ಪ vs ಆರ್. ಅಶೋಕ್ ಮಧ್ಯೆ ಏನಿದು ವಾರ್ ?
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಟಾಕ್ ವಾರ್ ಜೋರಾಗಿದೆ. ಇಬ್ಬರು ನಾಯಕರು ಧರ್ಮ ಹಾಗೂ ರಾಮನ ವಿಚಾರವಾಗಿ ಟ್ವೀಟ್ ಹಾಗೂ ಪ್ರತಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರ ವಿವರ ಇಲ್ಲಿದೆ.
ವಾಲ್ಮೀಕಿ - ಅಯೋಧ್ಯೆ ರಾಮ ಬೇರೆ ಎನ್ನುವ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರ ಈ ಹೇಳಿಕೆಗೆ ಆರ್ ಅಶೋಕ್ ಅವರು, ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಕಳೆದರೂ ಕೆಲ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಈಗಲೂ ಅದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದರು ಇದರ ಬೆನ್ನಲ್ಲೇ ಇಬ್ಬರು ನಾಯಕರ ನಡುವೆ ವಾಕ್ಸಮರ ಶುರುವಾಗಿದೆ.

ದೇವರು ಧರ್ಮದ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡುವ ದೇಶದ ಏಕೈಕ ರಾಜಕೀಯ ಪಕ್ಷ ಎಂದರೆ ಅದು ಬಿಜೆಪಿ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರು ಟ್ವೀಟ್ ಮಾಡಿದ್ದಾರೆ. ಮುಂದುವರಿದು ವಾಲ್ಮೀಕಿ ರಾಮಾಯಣದಲ್ಲಿ ಬರುವ ರಾಮನ ಚಿತ್ರಣ ಮತ್ತು ಅದರ ಮೂಲಕ ವಾಲ್ಮೀಕಿ ಹೇಳಲು ಹೊರಟಿರುವ ಆಶಯದ ಬಗ್ಗೆ ನಾನು ಹೇಳಿದ್ದು ಅದು ಬಹಳಷ್ಟು ಆರೋಗ್ಯದಾಯಕವಾದ ಚರ್ಚೆಯೇ ಹೊರತು ಅಪಮಾನವಲ್ಲ ಎಂದಿದ್ದಾರೆ.
ಸದಾ ತರ್ಕವಿಲ್ಲದೇ ವಾಸ್ತವಕ್ಕೆ ವಿರುದ್ಧವಾಗಿ ಮಾತನಾಡುವ ನಿಮಗೆ ಆ ಶ್ರೀರಾಮನೇ ಬಂದು ಧರ್ಮದ ಬಗ್ಗೆ ಸೂಕ್ತ ತಿಳುವಳಿಕೆ ನೀಡಿದರೂ ಕೂಡಾ ಅವರನ್ನೇ ಟೀಕಿಸುವ ಮನಸ್ಥಿತಿ ನಿಮ್ಮದು. ಹೀಗಾಗಿ ವಾಲ್ಮೀಕಿಯವರ ರಾಮಾಯಣ ಎಂಬ ಮಹಾಕಾವ್ಯವನ್ನು ಒಮ್ಮೆ ಓದಿ. ನಂತರ ನಾನು ಹೇಳಿದ್ದು ನಿಮಗೆ ಅರ್ಥವಾಗಬಹುದು. ವಿಚಾರ ಹಂಚಿಕೆಯ ವಿಷಯದಲ್ಲಿ ಚರ್ಚೆ ಇರಲಿ, ಇಂತಹ ರಾಜಕೀಯ ಬೇಡ ಎಂದು ಟಾಂಗ್ ಕೊಟ್ಟಿದ್ದಾರೆ.
ಇದಕ್ಕೆ ಉತ್ತರವಾಗಿ ಆರ್ ಅಶೋಕ್ ಅವರು ಸಹ ಟ್ವೀಟ್ ಮಾಡಿದ್ದಾರೆ. ಸ್ವಾಮಿ ಮಹದೇವಪ್ಪ ಅವರೇ ತಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಣಬೆಗಳಂತೆ ತೆಲೆ ಎತ್ತುವ ಎಡಬಿಡಂಗಿ ಬುದ್ಧಿಜೀವಿಗಳ ಅಧಿಕಪ್ರಸಂಗಿತನ ನೋಡಿ ನೋಡಿ ಕನ್ನಡಿಗರಿಗೆ ಸಾಕಾಗಿದೆ. ಈಗ ಇನ್ನೊಂದು ಅನಾವಶ್ಯಕ ಚರ್ಚೆ ಹುಟ್ಟುಕಾಕುವ ಮೂಲಕ ತಾವು ಮತ್ತೊಬ್ಬ ಬುದ್ಧಿಜೀವಿ ಆಗಲು ಪ್ರಯತ್ನ ಪಡಬೇಡಿ. ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಅಧಿಕಾರ ಅನುಭವಿಸುವುದು ದೊಡ್ಡದಲ್ಲ. ಅಧಿಕಾರವಿದ್ದಾಗ ಆ ಮಹನೀಯರ ಹಾದಿಯಲ್ಲಿ ನಡೆದು ಪ್ರಾಮಾಣಿಕವಾಗಿ ಜನಸೇವೆ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ.
ವಾಲ್ಮೀಕಿಯ ರಾಮನ ಬಗ್ಗೆ ಚರ್ಚೆ ಆಗುವುದಕ್ಕಿಂತ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ, ಅದರಿಂದ ವಾಲ್ಮೀಕಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಆಗುವುದು ಉತ್ತಮ. ಅಲ್ಲವೇ ಮಹದೇವಪ್ಪನವರೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications