Mettur Dam: 4 ದಿನಗಳಲ್ಲಿ 17 ಅಡಿ ಭರ್ತಿಯಾದ ಮೆಟ್ಟೂರು ಜಲಾಶಯ; ಈಗ ಎಷ್ಟಿದೆ ಒಳಹರಿವು?
ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಬಹುತೇಕ ಜಲಾಶಯಗಳು ಈಗಾಗಲೇ ಭರ್ತಿಯಾಗುವತ್ತ ತಲುಪಿವೆ. ಕಾವೇರಿ ಕೊಳ್ಳದಲ್ಲಿರುವ ಜಲಾಶಯಗಳು ಕೂಡ ಭರ್ತಿಯಾಗುವ ಹಂತ ತಲುಪಿದ್ದು, ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ.
ಮೆಟ್ಟೂರು ಜಲಾಶಯದ ನೀರಿನ ಮಟ್ಟ ಕೇವಲ 4 ದಿನಗಳಲ್ಲಿ 17.48 ಅಡಿಗಳಷ್ಟು ಏರಿಕೆಯಾದೆ. ಅಣೆಕಟ್ಟೆಗೆ ಬರುವ ನೀರಿನ ಪ್ರಮಾಣ 69,000 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. ಕರ್ನಾಟಕ, ಕೇರಳ ದಲ್ಲಿ ಬಾರಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಶೀಘ್ರದಲ್ಲೇ ಒಳಹರಿವಿನ ಪ್ರಮಾಣ 1 ಲಕ್ಷ ಕ್ಯೂಸೆಕ್ಸ್ ದಾಟಲಿದೆ.

ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ಕರ್ನಾಟಕ ರಾಜ್ಯದ ಕಬಿನಿ ಅಣೆಕಟ್ಟು, ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ನುಗು ಅಣೆಕಟ್ಟುಗಳು ಭರ್ತಿಯಾಗಿದ್ದು, ನೀರಿನ ಹರಿವು ಹೆಚ್ಚುತ್ತಲೇ ಇರುವುದರಿಂದ ಅಣೆಕಟ್ಟೆಯ ಸುರಕ್ಷತೆಗಾಗಿ ಹೆಚ್ಚುವರಿ ನೀರನ್ನು ಕಾವೇರಿಗೆ ಬಿಡಲಾಗುತ್ತಿದೆ.
ಕಬಿನಿ ಅಣೆಕಟ್ಟೆಗೆ ಸದ್ಯ 38,000 ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯದಿಂದ 40,000ಕ್ಕಿಂತ ಹೆಚ್ಚಿನ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ನುಗು ಜಲಾಶಯದಿಂದ ಕೂಡ 7,500 ಕ್ಯೂಸೆಕ್ಸ್ ನೀರು ಹೊರಬಿಡುತ್ತಿದ್ದು ಎಲ್ಲಾ ನೀರು ತಮಿಳುನಾಡಿಗೆ ಹರಿಯುತ್ತಿದೆ.
ನಾಲ್ಕು ದಿನಗಳಲ್ಲಿ 17 ಅಡಿ ನೀರು
ಶನಿವಾರ ಬೆಳಗ್ಗೆ ಮೆಟ್ಟೂರು ಅಣೆಕಟ್ಟೆಗೆ ಬರುವ ನೀರಿನ ಪ್ರಮಾಣ 53,098 ಕ್ಯೂಸೆಕ್ಸ್ ಇದ್ದರೆ ಮಧ್ಯಾಹ್ನದ ವೇಳೆಗೆ 69,000 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. ಜುಲೈ16ರಂದು ಬೆಳಗ್ಗೆ 43.83 ಅಡಿ ಇದ್ದ ಮೆಟ್ಟೂರು ಅಣೆಕಟ್ಟೆಯ ನೀರಿನ ಮಟ್ಟ ಶನಿವಾರ ಬೆಳಗ್ಗೆ 61.31 ಅಡಿಗಳಿಗೆ ಏರಿಕೆಯಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ ಮೆಟ್ಟೂರು ಜಲಾಶಯದ ನೀರಿನ ಮಟ್ಟ 17.48 ಅಡಿಗಳಷ್ಟು ಏರಿಕೆಯಾಗಿದೆ. ಮೆಟ್ಟೂರು ಅಣೆಕಟ್ಟೆಗೆ ನೀರಿನ ಒಳಹರಿವು ಹೆಚ್ಚಾಗುತ್ತಿರುವುದರಿಂದ ಆದಿಪಲಾರು, ಚೆಟ್ಟಿಪಟ್ಟಿ, ಕೊಟಯೂರು ಭಾಗದ ಮೀನುಗಾರರು ಮೀನು ಹಿಡಿಯುವುದನ್ನು ನಿಲ್ಲಿಸಿದ್ದಾರೆ.
ಚೆಟ್ಟಿಪಟ್ಟಿ, ಕೋಟಯೂರು, ಪನ್ನವಾಡಿ ಪರಿಸಾಲ ವಲಯಗಳಲ್ಲಿ ಐದನೇ ದಿನವೂ ದೋಣಿ ಸಂಚಾರ ಸ್ಥಗಿತಗೊಂಡಿದೆ. ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಗ್ರಾಮಸ್ಥರು ತಮ್ಮ ಜಾನುವಾರುಗಳಿಗೆ ಮೇವಿಗಾಗಿ ಕಾವೇರಿ ದಡದಲ್ಲಿ ಬೆಳೆದ ಬೆಳೆಗಳನ್ನು ಕಟಾವು ಮಾಡುತ್ತಿದ್ದಾರೆ.
ಕೆಆರ್ ಎಸ್ ಭರ್ತಿಯಾಗಲು ಇನ್ನು 3 ಅಡಿ ಬಾಕಿ ಇದ್ದು, ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಕೃಷ್ಣರಾಜ ಸಾಗರ ಜಲಾಶಯದಿಂದ ನೀರು ಹೊರಬಿಟ್ಟ ಬಳಿಕ ಮೆಟ್ಟೂರು ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಲಿದ್ದು, ಉಭಯ ರಾಜ್ಯಗಳ ತಕರಾರು ಸದ್ಯದ ಮಟ್ಟಿಗೆ ಪರಿಹಾರವಾಗಿದೆ.












Click it and Unblock the Notifications