BJP vs Congress: ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಬಿಜೆಪಿ ಕ್ರೆಡಿಟ್ ವಾರ್‌ಗೆ ರಾಮಲಿಂಗಾರೆಡ್ಡಿ ವಾಗ್ದಾಳಿ
ಬೆಂಗಳೂರು, ಇದೇ ಭಾನುವಾರ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯಾಗುತ್ತಿದೆ. ಆದರೆ ನಿನ್ನೆ ಬಿಜೆಪಿ ನಾಯಕರಾದ ವಿಜಯೇಂದ್ರ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಸಂಸದರು ಇಡೀ ಮೆಟ್ರೋ ಯೋಜನೆಯನ್ನು ಬಿಜೆಪಿ ಕೇಂದ್ರವೇ ಮಾಡಿರುವಂತೆ ಪ್ರಚಾರ ಪಡೆಯುತ್ತಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
ಇವರಿಗೆ ಮೆಟ್ರೋ ಆರಂಭವಾಗಿದ್ದು ಯಾವಾಗ ಎಂಬ ಇತಿಹಾಸವೇ ಗೊತ್ತಿಲ್ಲ. 2006ರಲ್ಲಿ ಧರಂ ಸಿಂಗ್ ಅವರು ಸಿಎಂ ಆಗಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಶಂಕುಸ್ಥಾಪನೆ ಮಾಡಿದರು. ಮೆಟ್ರೋ ಸಂಸ್ಥೆ ಜನರ ಸಂಸ್ಥೆ ಯಾವುದೇ ಪಕ್ಷದ ಸ್ವತ್ತಲ್ಲ. ಬಿಜೆಪಿಯವರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಜಾಸ್ತಿ. ಏನೂ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ. ಬೇರೆಯವರ ಕೆಲಸವನ್ನು ನಾವೇ ಮಾಡಿದ್ದಾಗಿ ಹೇಳುತ್ತಾರೆ.

ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಸಣ್ಣ ಪಾಲುದಾರನಲ್ಲ. ಈ ಯೋಜನೆಯಲ್ಲಿ ರಾಜ್ಯ ಸರ್ಕಾರವೇ ದೊಡ್ಡ ಪಾಲುದಾರರು. ಮೆಟ್ರೋ ಯೋಜನೆಯ ಫೇಸ್ 1ನಲ್ಲಿ ಕರ್ನಾಟಕ ಸರ್ಕಾರ - 30% (ಜಮೀನೂ ಸೇರಿ), ಕೇಂದ್ರ- 25%, ಉಳಿದ 45% ಸಾಲದ ರೂಪದಲ್ಲಿ ಮೆಟ್ರೋ ಸಂಸ್ಥೆ ಪಡೆಯಲಾಗಿತ್ತು. ಫೇಸ್ 2ನಲ್ಲಿ ಕರ್ನಾಟಕ 30% + ಜಮೀನು ಮತ್ತು ಮಿತಿಮೀರಿದ ವೆಚ್ಚದ ಬಹುತೇಕ ಭಾಗ ರಾಜ್ಯ ಸರ್ಕಾರದ್ದಾಗಿದೆ. ಇಲ್ಲಿ ಕೇಂದ್ರದ ಪಾಲು ಕೇವಲ 20% ಮಾತ್ರ. ಉಳಿದ 50% ಮೊತ್ತವನ್ನು ಮೆಟ್ರೋ ಸಂಸ್ಥೆ ಸಾಲ ಪಡೆದಿದೆ.
ಫೇಸ್ 3ರಲ್ಲಿ ಕರ್ನಾಟಕ 20% ಅನುದಾನ ಹಾಗೂ ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ ಸರ್ಕಾರ 20% ಹಾಗೂ ಉಳಿದ 60% ಅನುದಾನವನ್ನು ಸಂಸ್ಥೆ ಸಾಲವಾಗಿ ಪಡೆದಿದೆ. ಮೆಟ್ರೋ ಸಂಸ್ಥೆ ಪಡೆದಿರುವ ಸಾಲಕ್ಕೆ ಗ್ಯಾರಂಟಿ ಹಾಕಿರುವುದು ರಾಜ್ಯ ಸರ್ಕಾರ. ಮೆಟ್ರೋ ಸಂಸ್ಥೆ ಇದನ್ನು ಪಾವತಿಸದಿದ್ದರೆ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಪ್ರತಿ ಹಂತದಲ್ಲೂ ಕರ್ನಾಟಕ ಸರ್ಕಾರ ಜಮೀನಿಗಾಗಿ ದೊಡ್ಡ ಮೊತ್ತ ಹಾಕುತ್ತದೆ ಮತ್ತು ಯೋಜನೆಗಳನ್ನು ಮುನ್ನಡೆಸಲು ನಿರಂತರವಾಗಿ ಹಣ ನೀಡುತ್ತದೆ ಅನೇಕ ಬಾರಿ ಕೇಂದ್ರದಷ್ಟು ಅಥವಾ ಅದಕ್ಕಿಂತ ಹೆಚ್ಚು. ಈ ವಿಚಾರದಲ್ಲಿ ಬೇರೆ ರಾಜ್ಯದವರು ಅಪಪ್ರಚಾರ ಮಾಡಿದರೆ ಒಂದು ಲೆಕ್ಕ. ಆದರೆ ನಮ್ಮದೇ ರಾಜ್ಯದ ನಾಯಕರು ಈ ರೀತಿ ಮಾತನಾಡುತ್ತಿದ್ದಾರೆ. ಈ ಯೋಜನೆಯಲ್ಲಿ ರಾಜ್ಯದ ಪಾಲು ಇಲ್ಲವೇ? ಎಂದು ಪ್ರಶ್ನಿಸಿದರು.
ಇತ್ತೀಚೆಗೆ ತೇಜ್ಸ್ವಿ ಸೂರ್ಯ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ 6 ಕಿ.ಮೀ ಮಾತ್ರ ಮೆಟ್ರೋ ಆಗಿತ್ತು ಎಂದು ಹೇಳಿದ್ದರು ಆದರೆ ಮೊದಲ ಹಂತದ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ 42 ಕಿ.ಮೀ ಯೋಜನೆ ಮಾಡಲಾಯಿತು. ಆರಂಭದಲ್ಲಿ 6,395 ಕೋಟಿ ಅಂದಾಜು ಮಾಡಲಾಗಿತ್ತಾದರೂ ನಂತರ ಅದು 14,405 ಕೋಟಿಗೆ ಏರಿಕೆಯಾಯಿತು. ಮೆಟ್ರೋ ಒಟ್ಟಾರೆ ಕಾಮಗಾರಿಯಲ್ಲಿ ರಾಜ್ಯ ಸರ್ಕಾರ 24064.30 ಕೋಟಿ ನೀಡಿದರೆ, ಕೇಂದ್ರ ಸರ್ಕಾರ ನೀಡಿರುವುದು 17803.85 ಕೋಟಿ, 43,5498.53 ಕೋಟಿ ಸಾಲ ಮಾಡಲಾಗಿದೆ.
ರಾಜ್ಯ ಸರ್ಕಾರದಿಂದ ವಿಳಂಬ ಎಂದು ಆರೋಪ ಮಾಡುವ ಬಿಜೆಪಿ ನಾಯಕರು ಎಂದಾದರೂ ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂದು ವಿಚಾರಿಸಿದ್ದಾರಾ? ಸಭೆ ಮಾಡಿದ್ದಾರಾ, ಚರ್ಚೆ ಮಾಡಿದ್ದಾರಾ? ಇನ್ನು 15ನೇ ಹಣಕಾಸು ಆಯೋಗವು ಫೆರಿಪೆರಲ್ ರಿಂಗ್ ರೋಡ್ ಅಭಿವೃದ್ಧಿಗೆ, ಕೆರೆಗಳ ಅಭಿವೃದ್ಧಿ ಹಾಗೂ ಇತರೆ ವಿಶೇಷ ಅನುದಾನಕ್ಕೆ ಮೀಸಲಿರಿಸಿದ್ದ 11,495 ಕೋಟಿ ಹಣವನ್ನು ರಾಜ್ಯಕ್ಕೆ ನೀಡದೆ ಮೋಸ ಮಾಡಲಾಗಿದೆ. ಇದರ ಬಗ್ಗೆ ರಾಜ್ಯದ ಸಂಸದರು ಸಂಸತ್ತಿನಲ್ಲಿ ಮಾತನಾಡುವುದಿಲ್ಲ. ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಕೊಡಿ ಎಂದು ಹೇಳಲು ಇವರಿಗೆ ಬಾಯಿ ಬರುವುದಿಲ್ಲ. ಇಲ್ಲಿ ಬಂದು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದರು.












Click it and Unblock the Notifications