ಸಿದ್ದರಾಮಯ್ಯ ಸುಳ್ಳುಗಳ ಸರಮಾಲೆ ಬಿಚ್ಚಿಟ್ಟ ಸಿ. ಟಿ. ರವಿ!
ಬೆಂಗಳೂರು, ಜನವರಿ 03; ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪಾದಯಾತ್ರೆ ಸದ್ಯ ರಾಜ್ಯದ ಬಹು ಚರ್ಚಿತ ವಿಚಾರ. ಜನವರಿ 9 ರಿಂದ 19ರ ತನಕ ಮೇಕೆದಾಟುವಿನಿಂದ ಬೆಂಗಳೂರು ತನಕ ಪಾದಯಾತ್ರೆ ನಡೆಯಲಿದೆ.
ಕಾಂಗ್ರೆಸ್ ಪಾದಯಾತ್ರೆ ವಿಚಾರ ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಸಾಕ್ಷಿಯಾಗಿದೆ. ಚಾಮರಾಜನಗರದಲ್ಲಿ ಭಾನುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಈ ಕುರಿತು ಸಿ. ಟಿ. ರವಿ ಸುಧೀರ್ಘ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. 'ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳೂ ಆದ ಶ್ರೀಯುತ ಸಿದ್ದರಾಮಯ್ಯನವರು ಚಾಮರಾಜನಗರದಲ್ಲಿ ಭಾನುವಾರ ಮಾತನಾಡುವ ವೇಳೆ ಸುಳ್ಳುಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಸಿ. ಟಿ. ರವಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಸುಳ್ಳುಗಳ ಸರಮಾಲೆ ಸಿಡಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
"ನಾನು ಯಾವಾಗ ವಿರೋಧ ಮಾಡಿದ್ದೇನೆ? ಎಂದು ಸಿದ್ದರಾಮಯ್ಯನವರು ಹೇಳಲಿ. ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ 1968 ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು ಎಂದು ಹೇಳಿದ್ದೀರಿ. ಹಾಗಾದರೆ ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ನಡೆಸುತ್ತಿತ್ತು?. ಆ ನಂತರವು 40 ವರ್ಷಗಳ ಕಾಲ ರಾಜ್ಯವಾಳಿದ ನಿಮ್ಮ ಕಾಂಗ್ರೆಸ್ ಪಕ್ಷ ಯಾಕೆ ಮೇಕೆದಾಟು ಯೋಜನೆ ಜಾರಿಗೊಳಿಸಲಿಲ್ಲ?" ಎಂದು ಸಿ. ಟಿ. ರವಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ v/s ಸಿಟಿ ರವಿ
"ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ನಾನು ಹೇಳಿದ್ದೇನೆ. ನಿಮ್ಮದೇ ಪಕ್ಷದ ಸರ್ಕಾರ ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಠಾನ ಮಾಡಲಿಲ್ಲ? ಇದಕ್ಕೆ ನೀವು ಉತ್ತರ ಕೊಡಬೇಕಲ್ಲವೇ? ಜನರಿಗೆ ತಪ್ಪು ಮಾಹಿತಿ ನೀಡಿ ಅವರ ದಿಕ್ಕು ತಪ್ಪಿಸುವುದೇ ನಿಮ್ಮ ಕಾಯಕವಾಗಿದೆ" ಎಂದು ತಿರುಗೇಟು ನೀಡಿದ್ದಾರೆ.
"ಈಗಾಗಲೇ ಕೇಂದ್ರದಲ್ಲಿನ ನಮ್ಮ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಗೆ ತಾತ್ವಿಕ ಅನುಮೋದನೆ ಕೊಟ್ಟಿರುವುದನ್ನು ಯಾಕೆ ಜನರ ಎದುರು ಹೇಳದೇ ಮರೆಮಾಚಿದಿರಿ? ಇದೇ ಅಲ್ಲವೇ ನಿಮ್ಮ ಸುಳ್ಳಿನ ರಾಜಕೀಯದ ಮೇಲಾಟ?. ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು" ಎನ್ನುವ ರಾಜಕೀಯ ಕುಟಿಲ ನೀತಿ ನಿಮ್ಮದು, ನಿಮ್ಮ ಪಕ್ಷದ್ದು ಎಂಬುದು ಸತ್ಯವಿದಿತ. ನೀವು ಅಧಿಕಾರಕ್ಕೆ ಬರುವ ದೃಷ್ಟಿಯಿಂದ ಜನರಿಗೆ ಸುಳ್ಳುಗಳ ಸರಮಾಲೆ ಪೋಣಿಸುತ್ತಾ ಜನರನ್ನು ದಿಕ್ಕು ತಪ್ಪಿಸಲು ಪಾದಯಾತ್ರೆ ಮಾಡಲು ಹೊರಟಿದ್ದೀರಿ" ಎಂದು ದೂರಿದ್ದಾರೆ.

ನಿಮ್ಮ ನಾಯಕರ ಬಗ್ಗೆಯೂ ತಿಳಿಸಿ
'ತಮಿಳುನಾಡಿನಲ್ಲಿ, ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ಸೇ ಅಧಿಕಾರದಲ್ಲಿದ್ದಾಗಲೂ ಯೋಜನೆಯ ಬಗ್ಗೆ ತುಟಿಬಿಚ್ಚದವರು ನಿಮ್ಮ ನಾಯಕರು ಬಗ್ಗೆ ಸ್ವಲ್ಪ ಜನರಿಗೂ ತಿಳಿಸಿ ಸಿದ್ದರಾಮಯ್ಯನವರೇ?. ನಿಮ್ಮ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಈ ನಿರ್ಧಿಷ್ಟ ಯೋಜನೆಗೆ ಏಕೆ ವಿರೋಧ ಮಾಡುತ್ತಿದ್ದಾರೆ?. ನಿಮ್ಮ ಪಕ್ಷ ಬೆಂಬಲದ ಡಿಎಂಕೆ ಸರ್ಕಾರ ಆಡಳಿತ ನಡೆಸುತ್ತಿದೆ. ಅವರಿಂದ ಒಂದು ಹೇಳಿಕೆ ಕೊಡಿಸಿ ಸಿದ್ದರಾಮಯ್ಯನವರೇ ಮೇಕೆದಾಟು ಯೋಜನೆಗೆ ಯಾವುದೇ ಅಡ್ಡಿ ಇಲ್ಲ ಎಂದು. ಆಗ ಕಾಂಗ್ರೆಸ್ ಬಂಡವಾಳ ಗೊತ್ತಾಗುತ್ತದೆ' ಎಂದು ಸಿ. ಟಿ. ರವಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.

ಕರ್ನಾಟಕ, ತಮಿಳುನಾಡು
'ಒಂದು ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಯೋಜನೆ ಪೂರ್ಣಗೊಳ್ಳಲು 54 ವರ್ಷ ಬೇಕೆ? ಸುಳ್ಳಿಗೂ ಒಂದು ಮಿತಿ ಇರಬೇಕು. ಇದೆಲ್ಲಾ ಚುನಾವಣೆ ಗಿಮಿಕ್ ಎಂದು ಜನರಿಗೂ ಗೊತ್ತು. ನಿಮ್ಮ ಕಪಟ ರಾಜಕೀಯ ನಾಟಕ ಜನರಿಗೆ ಅರ್ಥವಾಗುತ್ತಿದೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡದೇ ಸತ್ಯ ಹೇಳಿ ಮಾಜಿ ಮುಖ್ಯಮಂತ್ರಿಗಳೇ' ಎಂದು ಸಿ. ಟಿ. ರವಿ ಹೇಳಿದ್ದಾರೆ.
'ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಕ್ರಿಯ ರಾಜಕೀಯಕ್ಕೆ ಬಂದು ಇನ್ನೂ ಒಂದು ವರ್ಷವಾಗಿಲ್ಲ. ನಾನೂ ಸಹ ಮೇಕೆದಾಟು ಯೋಜನೆ ಸೇರಿದಂತೆ ಯಾವುದೇ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ವಿಚಾರವಾಗಿ ರಾಜಕೀಯ ಮಾಡಬಾರದು ಎಂದು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲೂ ಹೇಳಿದ್ದೇನೆ' ಎಂದು ಸಿ. ಟಿ. ರವಿ ಸ್ಪಷ್ಟಪಡಿಸಿದ್ದಾರೆ.

ನಾವು ರಾಜಕೀಯ ಮಾಡುತ್ತಿಲ್ಲ
'ನಾವು ನೀರಿನ ವಿಷಯದಲ್ಲಿ ನಿಮ್ಮ ರೀತಿ ರಾಜಕೀಯ ಮಾಡುತ್ತಿಲ್ಲ. ನಿಮ್ಮ ಸರ್ಕಾರವಿದ್ದಾಗ ಚಿದಂಬರಂ ಮತ್ತು ಸೋನಿಯಾಗಾಂಧಿ ಹೆದರಿಕೆಯಿಂದ ನೀವು ಮತ್ತು ನಿಮ್ಮ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದೆನಿಸುತ್ತದೆ. ಈಗ ನೀವು ಪಾದಯಾತ್ರೆ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ಕನ್ನಡಿಗರಿಗೂ, ತಮಿಳುನಾಡಿನ ಜನರ ಮನಸ್ಸಿನಲ್ಲಿ ವೈಷಮ್ಯಕ್ಕೆ ಕಾರಣವಾಗುವ ಕಾರ್ಯಕ್ಕೆ ಮುಂದಾಗಿರುವು ನಾಚಿಕೆಗೇಡಿನ ವಿಷಯ' ಎಂದು ಸಿ. ಟಿ. ರವಿ ಹೇಳಿದ್ದಾರೆ.












Click it and Unblock the Notifications