ಮೇಕೆದಾಟು ಯೋಜನೆ: ಕೇಂದ್ರ ಜಲ ಅಯೋಗದ ಶಿಫಾರಸು ಗಾಳಿಗೆ ತೂರಿತು ಬಿಜೆಪಿ ಸರ್ಕಾರ
ಬೆಂಗಳೂರು, ಜ. 07: ಮೇಕೆದಾಟು ಯೋಜನೆ ಜಾರಿ ಸಂಬಂಧ ಕೇಂದ್ರೀಯ ಜಲ ಆಯೋಗ ನೀಡಿದ್ದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಗಾಳಿಗೆ ತೂರಿರುವ ಸಂಗತಿ ಇದೀಗ ಹೊರಗೆ ಬಿದ್ದಿದೆ.
ಖಾಸಗಿ ಏಜೆನ್ಸಿ ಮೂಲಕ ಮೇಕೆದಾಟು ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ 'ಸಮಗ್ರ ಯೋಜನಾ ವರದಿ' ಬಗ್ಗೆ ಕೇಂದ್ರೀಯ ಜಲ ಆಯೋಗ ಅಪಸ್ವರ ಎತ್ತಿದೆ. ಕನಕಪುರದ ಮೇಕೆದಾಟು ಬಳಿ ಡ್ಯಾಮ್ ನಿರ್ಮಾಣ ಸಂಬಂಧ ಕೇವಲ ಒಂದು ಕಡೆ ಮಾಡುವುದು ಸೂಕ್ತವಲ್ಲ. ಹೀಗಾಗಿ ಮೂರು ಕಡೆ ಡ್ಯಾಮ್ ನಿರ್ಮಾಣದ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ಯೋಜನಾ ವರದಿ ಸಲ್ಲಿಸಿ ಎಂದು ಕೇಂದ್ರೀಯ ಜಲ ಆಯೋಗ 2019 ರಲ್ಲಿಯೇ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು ಎಂಬ ಸಂಗತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಪರಿಷ್ಕತ ಸಮಗ್ರ ಯೋಜನಾ ವರದಿ ಜತೆಗೆ ಯೋಜನೆ ಅನುಷ್ಠಾನದಿಂದ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಜನರಿಗೆ ಆಗುವ ಅನುಕೂಲಗಳ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಿ. ತಮಿಳುನಾಡು ಸರ್ಕಾರದ ವಿಶ್ವಾಸ ತೆಗೆದುಕೊಂಡು ಯೋಜನೆ ತ್ವರಿತ ಅನುಷ್ಠಾನ ಮಾಡಲು ನೆರವಾಗಲಿದ್ದು, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಕೇಂದ್ರೀಯ ಜಲ ಆಯೋಗ ಸ್ಪಷ್ಟ ಶಿಫಾರಸುಗಳನ್ನು ಮಾಡಿದೆ.

ಈ ಬಗ್ಗೆ ಪಕ್ಷಾತೀತವಾಗಿ ಸೇರಿ ಚರ್ಚಿಸಬೇಕಿತ್ತು
ಕೇಂದ್ರೀಯ ಜಲ ಆಯೋಗದ ಶಿಫಾರಸುಗಳ ಬಗ್ಗೆ ರಾಜ್ಯದ ಎಲ್ಲಾ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಸೇರಿ ಚರ್ಚಿಸಬೇಕಿತ್ತು. ನಿಟ್ಟಿನಲ್ಲಿ ಕೇಂದ್ರೀಯ ಜಲ ಆಯೋಗ, ಅಥವಾ ರಾಜ್ಯದಲ್ಲಿ ನೀರಾವರಿ ತಜ್ಞರು, ತಂತ್ರಜ್ಞರು, ಕಾನೂನು ತಜ್ಞರನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚನೆ ಮಾಡಿ ಕೇಂದ್ರೀಯ ಜಲ ಆಯೋಗದ ಶಿಫಾರಸಿನಂತೆ ಒಂದು ಕಡೆ ಅಣೆಕಟ್ಟು ಕಟ್ಟುವ ಬದಲಿಗೆ ಅದೇ ಮೊತ್ತದಲ್ಲಿ ಮೂರು ಕಡೆ ಅಣೆಕಟ್ಟು ಕಟ್ಟುವ ಬಗ್ಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರೀಯ ಜಲ ಆಯೋಗಕ್ಕೆ ಈಗಾಗಲೇ ಸಲ್ಲಿಸಬೇಕಿತ್ತು.
ಅಚ್ಚರಿ ಏನೆಂದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನಾಗಲೀ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಆಗಲೀ ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಕೂಡ ಮಾಡಿಲ್ಲ. ಇನ್ನು ಮಾಜಿ ನೀರಾವರಿ ಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಸರ್ಕಾರದ ಗಮನ ಸೆಳೆದು ಮೇಕೆದಾಟು ಯೋಜನೆ ಕಾರ್ಯಗತ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಿತ್ತು. ಸಾಂವಿಧಾನಿಕ ಆಧಾರಿತ ಇಲಾಖೆಗಳಿಂದ ಪಡೆಯಬೇಕಾಗಿರುವ ಅನುಮತಿಗಳನ್ನು ಪಡೆಯುವ ನಿಟ್ಟಿನಲ್ಲಿ ಪ್ರತ್ಯೇಕ ಯೋಜನೆ ರೂಪಿಸಿ ತಮ್ಮ ಬದ್ಧತೆ ತೋರಬೇಕಿತ್ತು. ಆದರೆ ಆಗುತ್ತಿರುವುದೇ ಬೇರೆ.

ಕೈ ನಾಯಕರ ರಾಜಕೀಯ ತಂತ್ರ
ನಾವು ಮೇಕೆದಾಟು ಯೋಜನೆ ಕಾರ್ಯಗತಕ್ಕೆ ರಕ್ತ ಕೊಡ್ತೇವೆ. ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ರಾಜಕಾರಣ ಮಾಡುತ್ತಿದ್ದಾರೆ. ಕಾವೇರಿ ನದಿ ಮೇಲಿನ ಜನರ ಭಾವನೆಗಳ ಜತೆ ಆಟ ಆಡಲು ಆರಂಭಿಸಿದ್ದಾರೆ. ಇವರ ನೂರು ಪಾದಯಾತ್ರೆ ಮಾಡಿದರೂ ಮೇಕೆದಾಟು ಕಾರ್ಯಾರಂಭವಾಗುವುದಿಲ್ಲ. ಇನ್ನು ಆಡಳಿತ ರೂಢ ಬಿಜೆಪಿಯವರು ನೂರು ಕರ್ಫ್ಯೂ ಆದೇಶ ಹೊರಡಿಸಿದರೂ ಆದರಿಂದ ಪ್ರಯೋಜನವಿಲ್ಲ. ಸಾಂವಿಧಾನಿಕ ಚೌಕಟ್ಟಿನಲ್ಲಿ ಮೇಕೆದಾಟು ಯೋಜನೆ ಕಾರ್ಯಗತಕ್ಕೆ ಪ್ರಯತ್ನಿಸಬೇಕು. ಇವರ ಹೋರಾಟ, ಚೀರಾಟ ಕೆಸೆರೆರಚಾಟದಿಂ ಮೇಕೆದಾಟು ಯೋಜನೆ ಜಾರಿಯಾಗಲ್ಲ. ಮೇಕೆದಾಟು ಕಾಲುವೆ ಮೇಲೆ ಇವರು ದಾಟಬೇಕು ಅಷ್ಟೇ!

ಚಿಕ್ಕಳ್ಳಾಪುರಕ್ಕೆ ನೀರು ಮಣ್ಣು
ಮೇಕೆದಾಟು ಯೋಜನೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹತ್ತು ಜಿಲ್ಲೆಗಳ ಹೆಸರನ್ನು ಕೈ ನಾಯಕರು ಪ್ರಸ್ತಾಪಿಸಿದ್ದಾರೆ. ಖಾಸಗಿ ಸಂಸ್ಥೆ ಸರ್ಕಾರಕ್ಕೆ ಕೊಟ್ಟಿರುವ ಸಮಗ್ರ ಯೋಜನಾ ವರದಿಯಲ್ಲಿ ಅದು ಉಲ್ಲೇಖವಾಗಿದೆ. ಅಚ್ಚರಿ ಏನೆಂದರೆ, ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘನೆ ಮಾಡಲು ಬರುವುದಿಲ್ಲ.ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಬಳಕೆ ಮಾಡಲು ಇಂತಿಷ್ಟು ಪ್ರಮಾಣ ನೀರನ್ನು ನಿಗದಿ ಮಾಡಲಾಗಿದೆ. ಅದನ್ನು ಬಿಟ್ಟು ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಹರಿಸಬೇಕಾದರೆ, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಕೊಟ್ಟಿರುವ ಅಂತಿಮ ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆ ಸರ್ಕಾರ ಮತ್ತೆ ಕಾನೂನು ಸಮರ ಮಾಡಬೇಕು. ಈ ವಾಸ್ತವ ಸಂಗತಿಗಳನ್ನು ಮರೆಮಾಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ನಾಯಕರು ಮೇಕೆದಾಟು ಪಾದಯಾತ್ರೆ ನಾಟಕ ಆರಂಭಿಸಿದ್ದಾರೆ ಎಂದು ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಆಯೋಗದಿಂದಲೇ ಡಿಪಿಆರ್ ತಯಾರಿಸಿಕೊಳ್ಳಬೇಕು
ಯಡ್ಡತನ: ದೇಶದ ಎಲ್ಲಾ ನದಿ, ನದಿ ವಲಯ ಕುರಿತ ಅಂಕಿ ಅಂಶಗಳು ಕೇಂದ್ರೀಯ ಜಲ ಆಯೋಗದಲ್ಲಿ ಲಭ್ಯವಿರುತ್ತದೆ. ಹೀಗಾಗಿ ಯಾವುದೇ ನದಿ ನೀರಿಗೆ ಸಂಬಂಧಿಸಿದಂತೆ ಯಾವುದೇ ಸರ್ಕಾರವಿರಲಿ ಕೇಂದ್ರೀಯ ಜಲ ಆಯೋಗದಿಂದಲೇ ಡಿಪಿಆರ್ ತಯಾರಿಸಿಕೊಳ್ಳಬೇಕು. ಯಾವುದೇ ವಿವಾದ ರಹಿತ ಯೋಜನೆ ಜಾರಿಗೆ ಕೇಂದ್ರೀಯ ಜಲ ಅಯೋಗ ಸಮಗ್ರ ಯೋಜನೆ ವರದಿ ತಯಾರಿಸುವುದು ಮಹತ್ವ ಪಡೆದುಕೊಳ್ಳುತ್ತದೆ. ಆದರೆ, ಕಮೀಷನ್ ಆಸೆಗಳಿಗೆ ಖಾಸಗಿ ಸಂಸ್ಥೆಗಳಿಂದ ಮಾಡಿಸುತ್ತಾರೆ. ಹೀಗಾಗಿ ಆರಂಭದಲ್ಲಿಯೇ ತೊಡಕುಗಳು ಎದುರಾಗುತ್ತವೆ. ರಾಜ್ಯದ ಎಲ್ಲಾ ಪಕ್ಷಗಳ ನಾಯಕರಿಗೆ ಬದ್ಧತೆ ಇದ್ದಿದ್ದರೆ ಕೇಂದ್ರೀಯ ಜಲ ಆಯೋಗದ ಶಿಫಾರಸುಗಳನ್ನು ಈಗಾಗಲೇ ಪಾಲಿಸಬೇಕಿತ್ತು. ನೆರೆ ತಮಿಳುನಾಡು ರಾಜ್ಯವನ್ನು ವಿಶ್ವಾಸಕ್ಕೆ ತೆಗೆದಕೊಂಡಿದ್ದರೆ, ಮೇಕೆದಾಟು ಯೋಜನೆಯನ್ನು ಶರವೇಗದಲ್ಲಿ ಮುಗಿಸಲು ಅನುಕೂಲವಾಗುತ್ತಿತ್ತು. ಆದರೆ ರಾಜ್ಯ ನಾಯಕರು ತುಳಿಯುತ್ತಿರುವ ಹಾದಿ ತಮಿಳುನಾಡು ಮೇಕೆದಾಟು ವಿರುದ್ಧ ಸಾರಿರುವ ಸಮರಕ್ಕೆ ಮತ್ತಷ್ಟು ಬಲ ಕೊಟ್ಟಂತಾಗುತ್ತದೆ.

ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ವಿರುದ್ಧ ಕಿಡಿ
ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಗಡಿಗರು ಭರ್ಜರಿ ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಕೈ ಜೋಡಿಸಿದ್ದಾರೆ. ಇತ್ತ ಆಡಳಿತ ಪಕ್ಷ ಬಿಜೆಪಿ, ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ. ಅಂತೂ ಎರಡು ರಾಷ್ಟ್ರೀಯ ಪಕ್ಷಗಳು ಮೇಕೆದಾಟು ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟಿವೆ. ವಾಸ್ತವದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳು ಮೇಕೆದಾಟು ಯೋಜನೆ ಜಾರಿ ಬಗ್ಗೆ ಮಾಡಬೇಕಾದ ಕೆಲಸ ಮರೆತು 'ಮೇಕೆದಾಟು- ವೋಟು ಕೊಡು' ಯೋಜನೆಯಾಗಿ ರೂಪಾಂತರಗೊಳ್ಳುವ ಸಂಶಯ ವ್ಯಕ್ತವಾಗುತ್ತಿದೆ.












Click it and Unblock the Notifications