ಪ್ರೇಮಿಸಿ ಲಗ್ನವಾಗಿದ್ದ ಯುವತಿಯನ್ನು ಎಳೆದೊಯ್ದ ಹೆತ್ತವರು

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 27 : ಪೋಷಕರ ವಿರೋಧದ ನಡುವೆಯೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಮನೆ ಸೇರಿದ್ದ ಯುವಕ ತನ್ನ ಮನೆಯಲ್ಲಿ ಸಂಸಾರ ಆರಂಭಿಸುತ್ತಿರುವಾಗಲೇ, ಯುವತಿಯ ಮನೆಯ ಸುಮಾರು ಇಪ್ಪತ್ತು ಮಂದಿ ಮನೆಯೊಳಕ್ಕೆ ನುಗ್ಗಿ ಯುವತಿಯನ್ನು ಎಳೆದೊಯ್ದಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಆದರ್ಶ ಬಡಾವಣೆಯಲ್ಲಿ ನಡೆದಿದೆ.

ಆದರ್ಶನಗರ ಬಡಾವಣೆಯ ನಿವಾಸಿ ಗುತ್ತಿಗೆದಾರ ಪುಟ್ಟಸ್ವಾಮಿ ಅವರ ಮಗ ವಿನೋದಕುಮಾರ್(26) ಹಾಗೂ ಸೋಮಶೇಖರ್ ಎಂಬುವವರ ಪುತ್ರಿ ಸ್ಪೂರ್ತಿ(23) ಇಬ್ಬರು ಪ್ರೀತಿಸಿ ವಿವಾಹವಾಗಿದ್ದರು.

ಇವರು ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಸ್ಪೂರ್ತಿಯ ಮನೆಯವರು ಆಕೆಯನ್ನು ಬೇರೊಬ್ಬ ಯುವಕನ ಜೊತೆ ವಿವಾಹ ಮಾಡಲು ಏರ್ಪಾಡು ಮಾಡುತ್ತಿದ್ದಾರೆಂಬ ವಿಷಯ ತಿಳಿದು ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿದ್ದರು. [ಅಯ್ಯೋ ದೇವ್ರೆ, ಇನಿಯನಿಗಾಗಿ ಗಂಡ ಮಕ್ಕಳ ಧಿಕ್ಕರಿಸಿದಳೆ]

Married woman kidnapped by her family in Kollegal

ಮನೆ ಬಿಟ್ಟು ಬಂದ ಪ್ರೇಮಿಗಳು ಮೇ 9ರಂದು ಪೊಲೀಸರ ಸಮ್ಮುಖದಲ್ಲೇ ಚಾಮರಾಜನಗರದಲ್ಲಿ ವಿವಾಹವಾಗಿದ್ದು, ಕೆಲವು ದಿನಗಳು ಬೇರೆ ಕಡೆಯಲ್ಲಿ ವಾಸವಿದ್ದರು. ನಂತರ ವಿನೋದಕುಮಾರ್ ತನ್ನ ಮನೆಯವರನ್ನೊಪ್ಪಿಸಿ ತನ್ನ ಪತ್ನಿಯನ್ನು ಕರೆದುಕೊಂಡು ತನ್ನ ತಂದೆಯ ಮನೆಗೆ ಬಂದಿದ್ದನು. [ಮಿಸ್ಡ್‌ಕಾಲ್ ಪ್ರೇಮಕ್ಕೆ ಪಟ್ಟಣ ಪೊಲೀಸರ ಪೌರೋಹಿತ್ಯ]

ಎಲ್ಲ ಸರಿಹೋಗಿ ಸಂಸಾರ ಆರಂಭಿಸಬೇಕು ಎನ್ನುವಷ್ಟರಲ್ಲೇ ಯುವತಿ ಸ್ಪೂರ್ತಿಯ ತಾಯಿ ಸೇರಿದಂತೆ ಸುಮಾರು ಹದಿನೈದರಿಂದ ಇಪ್ಪತ್ತು ಜನರು ಬುಧವಾರ ಮಧ್ಯಾಹ್ನ 1.30ರ ವೇಳೆಯಲ್ಲಿ ಏಕಾಏಕಿ ವಿನೋದಕುಮಾರ್‌ನ ಮನೆಗೆ ನುಗ್ಗಿ ಮನೆಯ ವಸ್ತುಗಳನ್ನು ಹಾನಿಗೊಳಿಸಿ ಸ್ಪೂರ್ತಿಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಎಳೆದೊಯ್ಯುತ್ತಿರುವ ದೃಶ್ಯಗಳು ಮನೆಯ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡಿದೆ. [ಮುಸ್ಲಿಂ ಸಂಪ್ರದಾಯದಂತೆ ಆಶಿತಾ-ಶಕೀಲ್ ನಿಖಾಹ್!]

Married woman kidnapped by her family in Kollegal

ಘಟನೆ ಸಂಬಂಧ ವಿನೋದಕುಮಾರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಡಿವೈಎಸ್‌ಪಿ. ಸುರೇಶಬಾಬು, ವೃತ್ತ ನಿರೀಕ್ಷಕರಾದ ವೈ.ಅಮರನಾರಾಯಣ್ ಹಾಗೂ ಪಿಎಸ್‌ಐ ಬಸವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A newly married woman was took away forecefully by her family members from her husband's house in Kollegal in Chamarajanagar district. The girl had eloped with her lover against the wishes of parents.
Please Wait while comments are loading...